ಜಿಲ್ಲೆ

ಅಯೋಧ್ಯೆಗೆ ತಲುಪಲಿದೆ ಕಂಬಳಿ

Dharwada - Vikram Nadiger

ವಿಜಯವಾಣಿ ಸುದ್ದಿಜಾಲ ಧಾರವಾಡ
ಅಯೋಧ್ಯೆ ಶ್ರೀರಾಮನ ಪ್ರಾಣಪ್ರತಿಷ್ಠಾಪನೆ ಸಮಾರಂಭಕ್ಕೆ ಧಾರವಾಡ ಕಮಲಾಪುರ ರೈತ ಸುಭಾಷ ರಾಯಪ್ಪನವರ ಸಿದ್ಧಪಡಿಸಿದ 2 ಕಂಬಳಿಗಳನ್ನು ನೀಡಿದ್ದಾರೆ. ದೇವಸ್ಥಾನ ಪ್ರಮುಖರಿಗೆ ಅದನ್ನು ಮುಟ್ಟಿಸುತ್ತೇವೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.
ನಗರದಲ್ಲಿ ಶನಿವಾರ ರೈತರಿಂದ ಕಂಬಳಿ ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೈತರು ಉತ್ತಮವಾದ ಕಂಬಳಿ ಸಿದ್ಧಪಡಿಸಿ ನೀಡಿದ್ದಾರೆ. ಅದನ್ನು ದೇವಸ್ಥಾನಕ್ಕೆ ಸಂಬಂಧಿಸಿದ ಮುಖ್ಯಸ್ಥರಿಗೆ ರವಾನಿಸುವ ವ್ಯವಸ್ಥೆ ಮಾಡಲಾಗುವುದು ಎಂದರು.
ರಾಮ ಜನ್ಮಭೂಮಿಗೆ ಹೋರಾಟ ನಡೆಸಿದ ಕರಸೇವಕರು ಕಾಂಗ್ರೆಸ್ ನಾಯಕರಿಗೆ ದೇಶದ್ರೋಹಿಗಳಂತೆ ಕಾಣುತ್ತಾರೆ. ಕೆಜೆ ಹಳ್ಳಿ, ಡಿಜೆ ಹಳ್ಳಿ ಘಟನೆ, ಹಳೇ ಹುಬ್ಬಳ್ಳಿ ಪ್ರಕರಣದಲ್ಲಿ ಭಾಗಿಯಾದವರು ಅಮಾಯಕರಾಗಿ ಕಾಣುತ್ತಿರುವುದು ಹಾಸ್ಯಾಸ್ಪದ. ಇದರಲ್ಲಿ ದುರುದ್ದೇಶ ಇದೆ. ತುಷ್ಟೀಕರಣದ ಪರಾಕಾಷ್ಟೆ. ಇದಕ್ಕೆ ಜನರ ಉತ್ತರ ಕೊಟ್ಟಿದ್ದಾರೆ. ಹೋರಾಟ ನಡೆಸಿದ್ದರಿಂದ ಕರ ಸೇವಕರು ಹೊರ ಬಂದಿದ್ದಾರೆ ಎಂದರು.
ಅಯೋಧ್ಯೆ ಹೋರಾಟದಲ್ಲಿ ಪಾಲ್ಗೊಂಡ ಎಲ್ಲರನ್ನೂ ಕಾಂಗ್ರೆಸ್ ಸರ್ಕಾರ ಬಂಧಿಸಲು ಸಿದ್ಧತೆ ನಡೆಸಿತ್ತು. ಆದರೆ ಯಾರನ್ನಾದರೂ ಬಂಧಿಸಿದರೆ ಹುಬ್ಬಳ್ಳಿಯಲ್ಲಿ ಬೃಹತ್ ಮಟ್ಟದ ಹೋರಾಟದ ಎಚ್ಚರಿಕೆ ನೀಡಿದ್ದರಿಂದ ಪೊಲೀಸರು ಬಂಧನಕ್ಕೆ ಮುಂದಾಗಿಲ್ಲ. ದೇಶದ್ರೋಹಿ ಕಾರ್ಯವೇ ಮೂಲ ಉದ್ದೇಶ ಎಂಬ ಮನೋಭಾವ ಹೊಂದಿದವರನ್ನು ಬೆಂಬಲಿಸುತ್ತಿದ್ದಾರೆ. ಇದರಿಂದ ಅವರ ದುಸ್ಥಿತಿ ಅರ್ಥವಾಗುತ್ತದೆ ಎಂದು ವ್ಯಂಗ್ಯವಾಡಿದರು.
ರಾಮ ಮಂದಿರ ಉದ್ಘಾಟನೆ ಸಮಯಕ್ಕೆ ಯಾರನ್ನೂ ಕರೆದುಕೊಂಡು ಹೋಗುತ್ತಿಲ್ಲ. ಅಲ್ಲಿ ಜಾಗದ ಅಭಾವ ಇದೆ. ಹೀಗಾಗಿ ನನ್ನನ್ನೂ ಸೇರಿ ಕೇಂದ್ರದ ಮಂತ್ರಿಗಳು, ಬೇರೆ ಬೇರೆ ರಾಜ್ಯಗಳ ಮುಖ್ಯಮಂತ್ರಿಗಳನ್ನು ಆಹ್ವಾನಿಸಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮನ್ನು ಕರೆದಿಲ್ಲ ಎಂದು ವಿವಾದ ಮಾಡಲು ಪ್ರಯತ್ನಿಸಿದ್ದರು. ಆದರೆ ಇದು ವಿವಾದ ಮಾಡುವ ವಿಷಯವಲ್ಲ. ಉದ್ಘಾಟನೆಯಾದ ಬಳಿಕ ಕೆಲವರನ್ನು ಕರೆದುಕೊಂಡು ಹೋಗಿ ದರ್ಶನ ಮಾಡಿಸಿಕೊಂಡು ಬರುವ ವ್ಯವಸ್ಥೆ ಮಾಡುತ್ತೇವೆ ಎಂದರು.