ಬಾಗಲಕೋಟೆ: ತಂದೆ ತಾಯಿಗಳೆ ಭೂಮಿ ಮೇಲಿನ ನಿಜವಾದ ದೇವರು. ಗಣೇಶ ತಂದೆ- ತಾಯಿಗಳೆ ತನ್ನ ವಿಶ್ವವೆಂದು ತಿಳಿದ ಪರಿಣಾಮ ಆತ ಪ್ರಥಮ ಪೂಜಿತನಾಗಿದ್ದಾನೆ ಎಂದು ಉಪ್ಪಿನ-ಬೆಟಗೇರಿ ಮೂರು ಸಾವಿರ ಸಂಸ್ಥಾನಮಠ ಕುಮಾರ ವಿರೂಪಾಕ್ಷ ಸ್ವಾಮೀಜಿ ಹೇಳಿದರು.
ನಗರದ ವಿದ್ಯಾಗಿರಿಯಲ್ಲಿ ಕುಮಾರೇಶ್ವರ ವಿಶ್ವಧರ್ಮ ಶಾಂತಾಶ್ರಮದ ಸಾಯಿ ಮಂದಿರದ ಆವರಣದಲ್ಲಿ ಗಣೇಶ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಹಾಗೂ ವರದಾನೇಶ್ವರಿ ಸಾಂಸ್ಕೃತಿಕ ವೇದಿಕೆ ಉದ್ಘಾಟನೆ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಗಣೇಶನಿಗೆ ಪ್ರಪಂಚ ಸುತ್ತಿ ಬರುವ ಸ್ಪರ್ಧೆ ಬಂದಾಗ ಆತ ತನ್ನ ತಂದೆ ತಾಯಿ ಪರಮೇಶ್ವರ ಹಾಗೂ ಪಾರ್ವತಿಯೇ ಈ ಪ್ರಪಂಚವೆಂದು ಅವರನ್ನೆ ಸುತ್ತುಹಾಕಿದ. ಆತ ತಂದೆ ತಾಯಿ ಮೇಲಿನ ಪ್ರೀತಿಗಾಗಿ ಗಣೇಶ ಇಂದು ಲೋಕದಲ್ಲಿ ಪ್ರಥಮ ಪೂಜಿತನಾಗಿದ್ದಾನೆ. ನಾವು ಮನೆಯಲ್ಲಿರುವ ದೇವರನ್ನೂ ಪೂಜಿಸಬೇಕು. ಮಾತೃ ದೇವೋಭವ, ಪಿತೃ ದೇವೋಭವ, ಗುರು ದೇವೋಭವ, ಅತಿಥಿ ದೇವೋಭವ ಮೂಲ ಧರ್ಮದ ಸಿದ್ಧಾಂತವಾಗಿದ್ದು, ಇಂದಿನ ಮಕ್ಕಳಿಗೆ ಅವುಗಳ ಬಗ್ಗೆ ಹೇಳಿಕೊಡಬೇಕು ಎಂದು ತಿಳಿಸಿದರು.
ಮಾಜಿ ಶಾಸಕ ಡಾ.ವೀರಣ್ಣ ಚರಂತಿಮಠ ಮಾತನಾಡಿ, ಭಾರತದಲ್ಲಿ ಅನೇಕ ದೇವಸ್ಥಾನಗಳು ಉದ್ಘಾಟನೆಗೊಳ್ಳುತ್ತಿವೆ. ಇಲ್ಲಿಯೂ ಗಣೇಶ ದೇವಸ್ಥಾನ ಅತಿ ಸುಂದರವಾಗಿ ನಿರ್ಮಾಣಗೊಂಡು ಲೋಕಾರ್ಪಣೆಯಾಗಿದೆ. ಈ ಭಾಗದ ಜನರಲ್ಲಿ ಧಾರ್ಮಿಕ ಸಾಂಸ್ಕೃತಿಕ ಜಾಗೃತಿಯನ್ನು ಮೂಡಿಸುವಲ್ಲಿ ಶಾಂತಾಶ್ರಮ ಅನೇಕ ಕಾರ್ಯಕ್ರಮಗಳನ್ನು ಮಾಡುತ್ತ ಬಂದಿದ್ದು, ಇನ್ನೂ ಹೆಚ್ಚಿನ ಬೆಳವಣಿಗೆ ಹೊಂದಲಿ ಎಂದರು. ಕೆರೂರ-ಕೊಣ್ಣೂರಿನ ಚರಂತಿಮಠದ ಡಾ.ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ, ಗುಳೇದಗುಡ್ಡದ ಅಮರೇಶ್ವರ ನೀಲಕಂಠ ಸ್ವಾಮೀಜಿ, ಟೀಕಿನಮಠದ ಮಲ್ಲಿಕಾರ್ಜುನ ದೇವರು ಸಾನ್ನಿಧ್ಯ ವಹಿಸಿದ್ದರು.
ಸವೇಶ್ವರ ಕಲಾ ಮಹಾವಿದ್ಯಾಲಯದ ನಿವೃತ್ತ ಪ್ರಾಚಾರ್ಯ ಡಾ.ಸಿದ್ದರಾಮಯ್ಯ ಮಠಪತಿ, ವಿಜಯಪುರದ ಸಿಕ್ಯಾಬ್ ಇನ್‌ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಕಾಲೇಜಿನ ಪ್ರಾಚಾರ್ಯ ಡಾ.ಆರ್.ಬಿ.ಖಾದರನಾಯ್ಕರ, ವರದಾನೇಶ್ವರಿ ಮಹಿಳಾ ಸಂಘದ ಅಧ್ಯಕ್ಷೆ ಪಾರ್ವತಮ್ಮ ಬಳೂಲಮಠ, ಕುಮಾರೇಶ್ವರ ವಿಶ್ವಧರ್ಮ ಶಾಂತಾಶ್ರಮದ ಅಧ್ಯಕ್ಷ ಜಿ.ಎನ್.ಪಾಟೀಲ ಇತರರು ಇದ್ದರು.