ಜಿಲ್ಲೆ

ಮಹರ್ಷಿ ವಾಲ್ಮೀಕಿರವರ ಜೀವನ ಚರಿತ್ರೆ ಪ್ರತಿಯೊಬ್ಬರೂ ತಿಳಿದುಕೊಳ್ಳುವಂತಾಗಬೇಕು; ಕೆ.ಜಿ.ಬೋಪಯ್ಯ

ಮಡಿಕೇರಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ಪರಿಶಿಷ್ಟ ಜಾತಿ (ಶೇ.೧೫ ರಿಂದ ೧೭ ಕ್ಕೆ ) ಮತ್ತು ಪರಿಶಿಷ್ಟ ಪಂಗಡಗಳ (ಶೇ. ೩ ರಿಂದ ೦೭ ಕ್ಕೆ) ಮಿಸಲಾತಿ ಪ್ರಮಾಣವನ್ನು ಹೆಚ್ಚಳ ಮಾಡಲು ನಿರ್ದರಿಸಿದ್ದು, ಇದು ಕರ್ನಾಟಕ ಸರ್ಕಾರದ ಐತಿಹಾಸಿಕ ನಿರ್ಧಾರ ಎಂದು ಸರ್ಕಾರಿ ಜಮೀನುಗಳ ಸಂರಕ್ಷಣಾ ಸಮಿತಿ ಅಧ್ಯಕ್ಷರು ಹಾಗೂ ಶಾಸಕ ಕೆ.ಜಿ.ಬೋಪಯ್ಯ ಹೇಳಿದರು.


ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ನಗರದ ಕಾವೇರಿ ಕಲಾ ಕ್ಷೇತ್ರದಲ್ಲಿ ಭಾನುವಾರ ಆಯೋಜಿಸಿದ್ದ ’ಮಹರ್ಷಿ ವಾಲ್ಮೀಕಿ ಜಯಂತಿ’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.


ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ ದಾಸ್ ನೇತೃತ್ವದ ಆಯೋಗ ಸಲ್ಲಿಸಿರುವ ವರದಿಯನ್ನು ಯಥಾವತ್ತಾಗಿ ಅನುಷ್ಠಾನಕ್ಕೆ ತರಲು ಸರ್ಕಾರ ತಿರ್ಮಾನಿಸಿದೆ. ಆ ನಿಟ್ಟಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ಸಾಮಾಜಿಕ ನ್ಯಾಯಪರ ನುಡಿದಂತೆ ನಡೆದಿದೆ ಎಂದು ಹೇಳಿದರು.


ಸರ್ಕಾರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಉಪ ಯೋಜನೆಗಳಿಗೆ ಸಾಕಷ್ಟು ಅನುದಾನ ಮೀಸಲಿಟ್ಟಿದೆ. ಸಮಾಜ ಕಲ್ಯಾಣ, ಪರಿಶಿಷ್ಟ್ರ ಪಂಗಡ ಕಲ್ಯಾಣ ಇಲಾಖೆ ವ್ಯಾಪ್ತಿಯಲ್ಲಿರುವ ಅಭಿವೃದ್ಧಿ ನಿಗಮಗಳಿಗೆ ಹೆಚ್ಚಿನ ಅನುದಾನ ಹೀಗೆ ಹಲವು ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುತ್ತಿದೆ ಎಂದರು.


ಮಹಾಕಾವ್ಯ ರಾಮಾಯಣವನ್ನು ಇಡೀ ಜಗತ್ತಿಗೆ ಪರಿಚಯಿಸಿದ ಕೀರ್ತಿ ಮಹರ್ಷಿ ವಾಲ್ಮೀಕಿಗೆ ಸಲ್ಲುತ್ತದೆ. ಆ ಹಿನ್ನೆಲೆಯಲ್ಲಿ ಮಹರ್ಷಿ ವಾಲ್ಮೀಕಿ ಅವರ ಜೀವನ ಚರಿತ್ರೆಯನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳುವಂತಾಗಬೇಕು ಎಂದು ಹೇಳಿದರು.


ಒಳ್ಳೆಯ ವಿಚಾರಗಳನ್ನು ಯೋಚಿಸಬೇಕು. ಕೆಟ್ಟ ಆಲೋಚನೆಗಳನ್ನು ಬಿಡಬೇಕು. ಸಮಾಜಕ್ಕೆ ಒಳ್ಳೆಯ ಕೊಡುಗೆ ಕೊಡಲು ಪ್ರಯತ್ನಿಸಬೇಕು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರು ಸ್ವಾವಲಂಬಿಯಾಗಿ, ಸ್ವಾವಲಂಬನೆಯಿಂದ ಜೀವನ ನಡೆಸುವಂತಾಗಬೇಕು ಎಂಬ ಉದ್ದೇಶದಿಂದ ಸರ್ಕಾರದ ವತಿಯಿಂದ ಹಲವಾರು ಯೋಜನೆಗಳು ಹಾಗೂ ಸೌಲಭ್ಯಗಳನ್ನು ಜಾರಿಗೊಳಿಸಿದೆ. ಆ ದಿಸೆಯಲ್ಲಿ ಪ್ರತಿಯೊಬ್ಬರೂ ಸೌಲಭ್ಯ ಸಮರ್ಪಕವಾಗಿ ಪಡೆಯುವಂತಾಗಬೇಕು ಎಂದು ಹೇಳಿದರು.


ನಗರದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಪ್ರಾಧ್ಯಾಪಕ ಡಾ.ಶ್ರೀಧರ್ ಆರ್.ಹೆಗಡೆ ಮಾತನಾಡಿ, ಇಡೀ ವಿಶ್ವಕ್ಕೆ ರಾಮಾರಾಜ್ಯ ಪರಿಚಯಿಸಿದ ಕೀರ್ತಿ ಮಹರ್ಷಿ ವಾಲ್ಮೀಕಿ ಅವರದ್ದಾಗಿದೆ. ರಾಮಾಯಣ ಮಹಾಕಾವ್ಯ ಬರೆಯುವ ದೇಶದ ಸಂಸ್ಕೃತಿ ಮತ್ತು ಪರಂಪರೆ ಬಗ್ಗೆ ಬೆಳಕು ಚೆಲ್ಲಿದ್ದಾರೆ ಎಂದರು.


ನಾಗರಿಕತೆಯ ಬದಲಾವಣೆಗೆ ವಾಲ್ಮೀಕಿಯವರ ಬದುಕು ಒಂದು ಉತ್ತಮ ನಿದರ್ಶನವಾಗಿದೆ. ವಾಲ್ಮೀಕಿ ಬರೆದ ರಾಮಾಯಣ ಕೃತಿ ಪ್ರಪಂಚದ ಮಹಾನ್ ಗ್ರಂಥವಾಗಿದೆ ಎಂದರು.


ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ನಂಜುಡೇಗೌಡ ಮಾತನಾಡಿ, ಮಾನವಕುಲಕ್ಕೆ ಮಹರ್ಷಿ ವಾಲ್ಮೀಕಿ ಅವರ ರಾಮಾಯಣ ಕೃತಿ ಉತ್ತಮ ಕೊಡುಗೆ, ಹಿಂದಿನ ಕಾಲದ ಆದರ್ಶ ಮಹನೀಯರ ಉತ್ತಮ ವಿಚಾರಗಳನ್ನು ಎಲ್ಲರೂ ತಿಳಿದುಕೊಳ್ಳಬೇಕು. ನುಡಿದಂತೆ ನಡೆದುಕೊಳ್ಳುವುದು ವಾಲ್ಮೀಕಿ ರಾಮಯಾಣದಿಂದ ತಿಳಿದುಬರುತ್ತದೆ ಎಂದರು.


ಕಾರ್ಯಕ್ರಮದಲ್ಲಿ ಸರ್ಕಾರದ ಸವಲತ್ತುಗಳನ್ನು ಅರ್ಹ ಫಲಾನುಭವಿಗಳಿಗೆ ನೀಡಲಾಯಿತು. ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಹಾಗೂ ನಾಟಿ ವೈದ್ಯಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದವರಿಗೆ ಶಾಲು, ಪ್ರಶಸ್ತಿ ಪತ್ರ ನೀಡಿ ಆತ್ಮೀಯವಾಗಿ ಸನ್ಮಾನಿಸಲಾಯಿತು. ತಿತಿಮತಿಯ ಆದಿವಾಸಿ ಮುಖಂಡರಾದ ಸುಬ್ರು, ಬಸವನಹಳ್ಳಿ ಲ್ಯಾಂಪ್ ಸೊಸೈಟಿ ಅಧ್ಯಕ್ಷ ಆರ್.ಕೆ.ಚಂದ್ರು, ಸಮಗ್ರ ಗಿರಿಜನ ಅಭಿವೃದ್ಧಿ ಯೋಜನಾ ಸಮನ್ವಯಾಧಿಕಾರಿ ಎಸ್.ಹೊನ್ನೇಗೌಡ, ಬಾಳುಗೋಡು ಏಕಲವ್ಯ ವಸತಿ ಶಾಲೆಯ ಪ್ರಾಂಶುಪಾಲ ದಿಲನ್ ಮುತ್ತಣ್ಣ, ತಿತಿಮತಿ ಮೋರಾರ್ಜಿ ವಸತಿ ಶಾಲೆಯ ಪ್ರಾಂಶುಪಾಲ ಷಡಕ್ಷರಿ ಇತರರು ಇದ್ದರು.