ರಾಣೆಬೆನ್ನೂರ: ‘ಏನ್ ಕಾಮಣ್ಣ ನಿನ್ನನ್ನ ಐಶ್ವರ್ಯ ಮದುವೆ ಮಾಡ್ಕೋಳಾಕೆ ಬರ್ತಾಳಂತೆ... ಕಳೆದ ವರ್ಷ ಬರಬೇಕಾದ ಪ್ರಧಾನಮಂತ್ರಿ ನರೇಂದ್ರ ಮೋದಿ ಈ ಬಾರಿ ಬರ್ತಾರ್, ಅವರಿಗೆ ಹೇಳಿ ನಿನ್ನ ಹೆಂಡತಿಗೆ ಬಂಗಾರದ ಸರಾ ಕೊಡಸ್ತೇನೆ, ನೀನು ಗಂಟು ಮುಸುಡಿ ಮಾಡ್ಕಂತ ಯಾಕ ಕುಂತಿಪಾ...? ರತಿ ನಿನಗ್ ಆದ್ರ ತಿಳಿಬಾರದಾ.. ಅವನ ಜೊತೆ ಹ್ಯಾಂಗ್ ಬಾಳ್ವೆ ಮಾಡತಿ. ಅವನ ಜೋತು ಬಿದ್ದಿರುವ ಮೀಸೆ ನೋಡು ಎಳ್ಳಷ್ಟು ಚೆನ್ನಾಗಿಲ್ಲ...!’
ಇದು ಪ್ರತಿವರ್ಷ ಹೋಳಿ ಹಬ್ಬದ ನಿಮಿತ್ತ ರಾಣೆಬೆನ್ನೂರ ನಗರದ ದೊಡ್ಡಪೇಟೆಯಲ್ಲಿ ಏರ್ಪಡಿಸುವ ರತಿ-ಮನ್ಮಥರನ್ನು ನಗಿಸುವ ಸ್ಪರ್ಧೆಯಲ್ಲಿ ಕಂಡು ಬರುವ ದೃಶ್ಯ.
ಕಳೆದ 62 ವರ್ಷಗಳಿಂದ ನಡೆದುಕೊಂಡು ಬಂದ ಈ ಮನರಂಜನಾ ಸ್ಪರ್ಧೆ ಐತಿಹಾಸಿಕ ಮಹತ್ವ ಪಡೆದುಕೊಂಡಿದೆ. ಪ್ರತಿವರ್ಷ ರತಿ-ಮನ್ಮಥರನ್ನು ನಗಿಸಲು ದಾವಣಗೆರೆ, ಹುಬ್ಬಳ್ಳಿ, ಹಾವೇರಿ ಸೇರಿ ವಿವಿಧ ಜಿಲ್ಲೆ ಹಾಗೂ ರಾಜ್ಯದ ಮೂಲೆಮೂಲೆಗಳಿಂದ ಸಾವಿರಾರು ನಗೆಚಟಾಕಿಗಳು ಪ್ರಯತ್ನಿಸುತ್ತಾರೆ. ಆದರೆ, ಈವರೆಗೂ ಯಾರೊಬ್ಬರೂ ರತಿ-ಮನ್ಮಥರನ್ನು ನಗಿಸಿದ ಇತಿಹಾಸವಿಲ್ಲ.
ಇವರನ್ನು ನಗಿಸಿದವರಿಗೆ 1 ಲಕ್ಷ ರೂ. ನಿಂದ 10 ಲಕ್ಷ ರೂ.ಗೂ ಅಧಿಕ ಮೌಲ್ಯದ ನಗದು ಬಹುಮಾನ ಇಡಲಾಗುತ್ತದೆ.
ರತಿ-ಮನ್ಮಥರನ್ನು ದೇವಸ್ಥಾನದ ಗದ್ದುಗೆಯ ಮೇಲೆ ಕೂರಿಸಿ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ನಂತರ ನಗೆ ಚಟಾಕಿಗಳು ರತಿ-ಮನ್ಮಥರ ಕುರಿತು ಹಾಸ್ಯ ಕಥೆ, ನಟನೆ, ಯುವಕರು ಯುವತಿಯ ಬಟ್ಟೆ ಧರಿಸಿ ಬರುವುದು. ಹಾಸ್ಯದ ಮೂಲಕ ಕಾಮಣ್ಣ ಸತ್ತಾಗ ಆತನ ಹೆಂಡತಿ ಅಳುವ ರೀತಿ. ವಿಶೇಷವಾಗಿ ಮಹಿಳೆಯರು ವಿವಿಧ ಬಗೆಯ ಸರ್ಕಸ್ ಮಾಡುತ್ತಾರೆ. ಆದರೂ ಈವರೆಗೂ ರತಿ-ಮನ್ಮಥರು ನಕ್ಕಿಲ್ಲ. ಹೀಗಾಗಿ ನಗಿಸಲು ಬಂದವರು ಪೇಚಿಗೆ ಸಿಲುಕಿ ವಾಪಸಾಗುತ್ತಾರೆ. ಈ ವರ್ಷವೂ ಸ್ಪರ್ಧೆ ಏರ್ಪಡಿಸಲಾಗಿದ್ದು, ರತಿ-ಮನ್ಮಥರನ್ನು ಯಾರಾದರೂ ನಗಿಸುವರೇ ಎಂಬುದನ್ನು ಕಾಯ್ದು ನೋಡಬೇಕಿದೆ.
ಸ್ಪರ್ಧೆ ನಾಡಿದ್ದು: ಹೋಳಿ ಹುಣ್ಣಿಮೆ ನಿಮಿತ್ತ ಸ್ಥಳೀಯ ಶ್ರೀಶಕ್ತಿ ಯುವಕ ಮಂಡಳ, ರಾಮಲಿಂಗೇಶ್ವರ ಸಮಿತಿ ವತಿಯಿಂದ ಮಾ. 10ರಂದು ಸಂಜೆ 7.30ರಿಂದ ರಾತ್ರಿ 12 ಗಂಟೆಯವರೆಗೆ ನಗರದ ದೊಡ್ಡಪೇಟೆಯ ರಾಮಲಿಂಗೇಶ್ವರ ದೇವಸ್ಥಾನದ ಎದುರು ಜೀವಂತ ರತಿ-ಮನ್ಮಥರನ್ನು ನಗಿಸುವ 63ನೇ ವರ್ಷದ ಸ್ಪರ್ಧೆ ನಡೆಯಲಿದೆ. ಪ್ರತಿ ವರ್ಷದಂತೆ ಕಾಮನ ವೇಷವನ್ನು ಗದಿಗೆಪ್ಪ ರೊಡ್ಡನವರ ಹಾಗೂ ರತಿ ವೇಷದಲ್ಲಿ ಕುಮಾರ ಹಡಪದ ಕುಳಿತುಕೊಳ್ಳಲಿದ್ದಾರೆ. ಕಾಮಣ್ಣರನ್ನು ನಗಿಸಲು ಬರುವವರಿಗೆ ಪುರುಷ ಹಾಗೂ ಮಹಿಳೆಯರ ಎರಡು ವಿಭಾಗಗಳ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಸಮಿತಿಯ ಪ್ರಕಟಣೆ ತಿಳಿಸಿದೆ.