ಮೈಸೂರು: ದೈವಭಕ್ತಿ, ದೇಶಭಕ್ತಿ, ಕನ್ನಡಾಭಿಮಾನ ಹಾಗೂ ಸಾಂಸ್ಕೃತಿಕ ವೈಭವವನ್ನು ಬಿಂಬಿಸಿದ ವೈವಿಧ್ಯಮಯ ನೃತ್ಯ ಪ್ರದರ್ಶನಗಳು.., ಯುವ ಸಮೂಹದ ಶಿಳ್ಳೆ, ಚಪ್ಪಾಳೆ, ಹರ್ಷೋದ್ಘಾರ...ಇವು ನಾಡಹಬ್ಬ ದಸರಾ ಮಹೋತ್ಸವದ ಯುವ ಸಂಭ್ರಮದ ಐದನೇ ದಿನಕ್ಕೆ ಮತ್ತಷ್ಟು ಮೆರುಗು ನೀಡಿದವು.
ನಾಡಹಬ್ಬ ದಸರಾ ಪ್ರಯುಕ್ತ ನಗರದ ಮಾನಸಗಂಗೋತ್ರಿಯ ಬಯಲು ರಂಗಮಂದಿರದಲ್ಲಿ ಶುಕ್ರವಾರ ಆಯೋಜಿಸಿದ್ದ ಯುವ ಸಂಭ್ರಮದಲ್ಲಿ ನಾಡಿನ ವಿವಿಧ ಭಾಗಗಳ ಕಾಲೇಜು ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿದರು. ನಾಡು, ನುಡಿ, ಸಂಸ್ಕೃತಿ, ಪೌರಾಣಿಕ ಕಥನಗಳು, ದೇವರ ಮಹಿಮೆ ಹಾಗೂ ದೇಶದ ಸೈನಿಕರ ತ್ಯಾಗ-ಬಲಿದಾನವನ್ನು ನೃತ್ಯದ ಮೂಲಕ ಕಟ್ಟಿಕೊಟ್ಟ ತಂಡಗಳು ಪ್ರೇಕ್ಷಕರ ಮನಸೂರೆಗೊಂಡವು. ರಾಜ್ಯದ 45 ಕಾಲೇಜುಗಳ ತಂಡಗಳು ವಿವಿಧ ನೃತ್ಯ ಪ್ರಕಾರಗಳ ಮೂಲಕ ಪ್ರೇಕ್ಷಕರಿಗೆ ಭರಪೂರ ಮನರಂಜನೆ ನೀಡಿದವು.
ಮಾತೃಮಂಡಳಿ ಶಿಶುವಿಕಾಸ ಕೇಂದ್ರದ ತಂಡದ ನೃತ್ಯದೊಂದಿಗೆ ಐದನೇ ದಿನದ ಯುವ ಸಂಭ್ರಮಕ್ಕೆ ಸಂಭ್ರಮದ ಚಾಲನೆ ದೊರೆಯಿತು. ನಮ್ಮಮ್ಮ ನಮ್ಮಮ್ಮ ಭೂಮಿ ತಾಯಮ್ಮ.. ಗೀತೆಗೆ ಮಕ್ಕಳು ಹೆಜ್ಜೆ ಹಾಕಿ ಗಮನ ಸೆಳೆದರು. ಬನ್ನೂರಿನ ಬಿಜಿಎಸ್ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ದೂರದಿಂದ ಬಂದ ಸುಂದರಾಂಗ ಜಾಣ.., ಜಟಕ ಕುದುರೆ ಹತ್ತಿ ಪ್ಯಾಟೆಗೋಗುಮಾ.. ಸೇರಿದಂತೆ ಜನಪ್ರಿಯ ಗೀತೆಗಳಿಗೆ ಹೆಜ್ಜೆ ಹಾಕಿ ಪ್ರೇಕ್ಷಕರನ್ನು ರಂಜಿಸಿದರು.
ಕನ್ನಡಾಭಿಮಾನಕ್ಕೆ ನೃತ್ಯದ ಮೆರುಗು:
ಎಚ್.ಡಿ. ಕೋಟೆ ತಾಲೂಕಿನ ತುಂಬಸೋಗೆಯ ಎಂಎಂಕೆ ಇಂಡಿಪೆಂಡೆಂಟ್ ಪಿಯು ಕಾಲೇಜಿನ ವಿದ್ಯಾರ್ಥಿಗಳು ನಾನು ಕನ್ನಡಿಗ ಕನ್ನಡದ ಕಾವಲಿಗ.., ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು.. ಸೇರಿದಂತೆ ಕನ್ನಡಾಭಿಮಾನ ಸಾರುವ ಗೀತೆಗಳಿಗೆ ನೃತ್ಯ ಪ್ರದರ್ಶಿಸಿ ನಾಡು, ನುಡಿಯ ಮೇಲಿನ ಪ್ರೀತಿಯನ್ನು ಅಭಿವ್ಯಕ್ತಪಡಿಸಿದರು. ಮಂಡ್ಯದ ಭಾರತೀನಗರದ ಭಾರತೀ ಕಾಲೇಜಿನ ತಂಡವೂ ಕನ್ನಡದ ಹಿರಿಮೆ, ಸಂಸ್ಕೃತಿ ಹಾಗೂ ನಾಡಿನ ಅಭಿಮಾನವನ್ನು ಬಿಂಬಿಸುವ ನೃತ್ಯ ಪ್ರದರ್ಶಿಸಿತು.
ದೈವಭಕ್ತಿ ಅನಾವರಣ:
ತೆರಕಣಾಂಬಿಯ ಬ.ಪು. ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಮಲೆ ಮಹದೇಶ್ವರ ಸ್ವಾಮಿಯ ಮಹಿಮೆಯನ್ನು ಸಾರುವ ಏಳು ಮಲೆ ಮೇಲೆ ಕುಂತವ್ನೆ ಮಾದೇವ.. ಗೀತೆಗೆ ಹೆಜ್ಜೆ ಹಾಕಿ ಭಕ್ತಿಭಾವ ಮೂಡಿಸಿದರು. ಬೆಂಗಳೂರಿನ ದಕ್ಷಾ ಅಕಾಡೆಮಿ ಸಂಜೆ ಪದವಿ ಪೂರ್ವ ಕಾಲೇಜಿನ ತಂಡ ಗಣಪತಿಯ ಮಹಿಮೆಯನ್ನು ಬಿಂಬಿಸುವ ನೃತ್ಯ ಪ್ರದರ್ಶಿಸಿದರೆ, ಮೈಸೂರಿನ ಮದರ್ ತೆರೇಸಾ ಕಾಲೇಜ್ ಆಫ್ ನರ್ಸಿಂಗ್ ತಂಡ ಹನುಮಂತನ ಮಹಿಮೆಯನ್ನು ನೃತ್ಯದ ಮೂಲಕ ತೆರೆದಿಟ್ಟಿತು.
ಸಿದ್ದಾರ್ಥನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ತಂಡ ಡಾ. ರಾಜ್‌ಕುಮಾರ್ ಅಭಿನಯದ ಭಕ್ತ ಪ್ರಹ್ಲಾದ ಚಿತ್ರದ ಹಿರಣ್ಯಕಶಿಪುವಿನ ಸಂಹಾರದ ಪ್ರಸಂಗವನ್ನು ನೃತ್ಯ ರೂಪದಲ್ಲಿ ತೆರೆದಿಟ್ಟಿತು. ನಂಜನಗೂಡು ಸರ್ಕಾರಿ ಐಟಿಐ ಕಾಲೇಜಿನ ವಿದ್ಯಾರ್ಥಿಗಳು ಜಯ ಹನುಮಂತ ಗೀತೆಗೆ ನೃತ್ಯ ಪ್ರದರ್ಶಿಸಿ ಹನುಮಂತನ ಮಹಿಮೆ ಸಾರಿದರು. ಕುವೆಂಪುನಗರದ ಬಿಜಿಎಸ್ ಬಿಇಡಿ ಕಾಲೇಜಿನ ತಂಡ ಶಿವತಾಂಡವ ಪ್ರದರ್ಶನದ ಮೂಲಕ ಶಿವನ ರುದ್ರರೂಪ ಹಾಗೂ ನೃತ್ಯದ ವೈಭವವನ್ನು ಅನಾವರಣಗೊಳಿಸಿತು. ಮೇಲುಕೋಟೆಯ ಸರ್ಕಾರಿ ಪ್ರಥಮದರ್ಜೆ ಕಾಲೇಜು ತಂಡ ‘ಏಳು ಮಲೆ ಮೇಲೆ ಕುಂತವ್ನೆ ಮಾದೇವ...’ ಹಾಡಿಗೆ ಹೆಜ್ಜೆ ಹಾಕಿದರು.
ಯೋಧರ ತ್ಯಾಗ, ಅರ್ಜುನನ ಸಾಹಸಕ್ಕೆ ನಮನ:
ಕೆಸರೆಯ ವಿಸ್ಡಮ್ ಸ್ಪೆಷಲ್ ಸ್ಕೂಲ್ ವಿದ್ಯಾರ್ಥಿಗಳು ದೇಶದ ಯೋಧರ ತ್ಯಾಗ ಮತ್ತು ಬಲಿದಾನವನ್ನು ನೃತ್ಯದ ಮೂಲಕ ಮನಮುಟ್ಟುವಂತೆ ಪ್ರಸ್ತುತಪಡಿಸಿದರು. ದೇಶದ ರಕ್ಷಣೆಗಾಗಿ ಸೈನಿಕರು ಮಾಡುವ ಸೇವೆ ಹಾಗೂ ಅವರ ಸಮರ್ಪಣಾ ಮನೋಭಾವವನ್ನು ಬಿಂಬಿಸಿದ ಪ್ರದರ್ಶನ ದೇಶಭಕ್ತಿಯ ಸಂದೇಶ ಸಾರಿತು. ಮಂಡ್ಯ ವಿಶ್ವವಿದ್ಯಾಲಯದ ತಂಡ ಮೈಸೂರು ದಸರಾ ಜಂಬೂಸವಾರಿಯಲ್ಲಿ ಅಂಬಾರಿ ಹೊತ್ತಿದ್ದ ಅರ್ಜುನ ಆನೆಯ ಕುರಿತು ನೃತ್ಯ ಪ್ರದರ್ಶಿಸುವ ಮೂಲಕ ಎಲ್ಲರ ಗಮನ ಸೆಳೆಯಿತು.
ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಸಾಂಪ್ರದಾಯಿಕ ನೃತ್ಯಗಳಿಂದ ಹಿಡಿದು ಜನಪ್ರಿಯ ಚಲನಚಿತ್ರ ಗೀತೆಗಳವರೆಗೆ ವೈವಿಧ್ಯಮಯ ಪ್ರಸ್ತುತಿಗಳ ಮೂಲಕ ತಮ್ಮ ಪ್ರತಿಭೆ ಪ್ರದರ್ಶಿಸಿದರು. ಪ್ರತಿ ತಂಡದ ಪ್ರದರ್ಶನಕ್ಕೂ ನೆರೆದಿದ್ದ ಯುವ ಸಮೂಹ ಶಿಳ್ಳೆ, ಚಪ್ಪಾಳೆ ಹಾಗೂ ಹರ್ಷೋದ್ಘಾರದ ಮೂಲಕ ಪ್ರೋತ್ಸಾಹ ನೀಡಿತು.