ಕೆ.ಎಂ.ದೊಡ್ಡಿಯಲ್ಲಿ ದಲಿತ ಸಂಘಟನೆಗಳ ಒಕ್ಕೂಟದಿಂದ ಭೀಮಾ ಕೋರೆಂಗಾವ್ ವಿಜಯೋತ್ಸವ ಆಚರಣೆ ಜರುಗಿತು. 
ಜಿಲ್ಲೆ

ಶೌರ್ಯದ ಸಂಕೇತವೇ ಕೋರೆಗಾಂವ್ ಯುದ್ಧ

ಕೆ.ಎಂ.ದೊಡ್ಡಿ: ದಲಿತ ಸಂಘಟನೆಗಳ ಒಕ್ಕೂಟದಿಂದ ಭೀಮಾ ಕೋರೆಂಗಾವ್ ವಿಜಯೋತ್ಸವವನ್ನು ಮಂಗಳವಾರ ಆಚರಿಸಲಾಯಿತು.

ಈ ವೇಳೆ ದಲಿತ ಸಂಘಟನೆಗಳ ಒಕ್ಕೂಟದ ಮುಖಂಡ ಮಣಿಗೆರೆ ಕೆ.ಕಬ್ಬಾಳಯ್ಯ ಮಾತನಾಡಿ, ಎಸ್‌ಟಿ ಹಿಂದುಳಿದ ಮತ್ತು ಶೋಷಿತರ ಶೌರ್ಯದ ಸಂಕೇತವೇ ಕೋರೆಗಾಂವ್ ಯುದ್ಧವಾಗಿದ್ದು, ಮೇಲ್ವರ್ಗದವರು ಮಾತ್ರ ಆಡಳಿತ ಹಾಗೂ ಯುದ್ಧ ಮಾಡಲು ಯೋಗ್ಯರು. ಕೆಳವರ್ಗದವರು ಮೇಲ್ವರ್ಗದವರ ಸೇವೆ ಮಾಡಲು ಮಾತ್ರ ಕೆಳವರ್ಗದವರ ಕರ್ತವ್ಯ ಎಂಬ ರೀತಿಯಲ್ಲಿ ಪೇಶ್ವೆಗಳ ಆಡಳಿತ ಮಹರ್ ಜನಾಂಗವನ್ನು ನಡೆಸಿಕೊಳ್ಳುತ್ತಿತ್ತು. ಅದರ ವಿರುದ್ಧ ಸಿಡಿದೆದ್ದ ಪರಿಣಾಮ ಕೋರೆಂಗಾವ್ ವಿಜಯೋತ್ಸವ ಆಚರಿಸುತ್ತಿದ್ದೇವೆ ಎಂದು ಹೇಳಿದರು.

ಶಿಕ್ಷಣ ಮೂಲಸೌಕರ್ಯ ಕಲ್ಪಿಸಿ ಸೇನೆಯಲ್ಲಿ ಅವಕಾಶ ಕಲ್ಪಿಸಿ ಸ್ವಾಭಿಮಾನ ಮತ್ತು ಶೌರ್ಯ ಕಲ್ಪಿಸಲು ಒಪಿಸಿದ್ದರಿಂದ ಭೀಮಾ ನದಿ ದಡದಲ್ಲಿ ಪೇಶ್ವೆಯವರ ಸೇನೆ ಹಾಗೂ ಇಂಗ್ಲಿಷ್ ಸೈನಿಕರ ಮಧ್ಯೆ ನಡೆದ ಯುದ್ಧದಲ್ಲಿ 24 ಗಂಟೆಯಲ್ಲಿ 5 ಸಾವಿರ ಪೇಶ್ವೆಗಳ ಸೈನಿಕರನ್ನು ಐನೂರು ಮಹರ್ ಸೈನಿಕರು ಕೊಂದು ಶೌರ್ಯ ಮೆರೆದಿದ್ದಾರೆ ಎಂದು ವಿವರಿಸಿದರು.

ಸಮತಾ ಸೈನಿಕ ದಳದ ಜಿಲ್ಲಾಧ್ಯಕ್ಷ ಕರಡಕೆರೆ ಯೋಗೇಶ್ ಮಾತನಾಡಿ, ಪೇಶ್ವೆಗಳ ಸೈನಿಕರನ್ನು ಐನೂರು ಮಹರ್ ಸೈನಿಕರು ಕೊಂದು ಹುತಾತ್ಮರಾದ ನೆನಪಿನ ವಿಜಯಸ್ತಂಭ ಮಹಾರಾಷ್ಟ್ರದಲ್ಲಿದ್ದು ಮಹರ್ ಸೈನಿಕರ ಇತಿಹಾಸ ತಿಳಿದ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಪ್ರತಿವರ್ಷ ಜನವರಿ ಒಂದರಂದು ಆ ಸ್ತಂಭಕ್ಕೆ ಬಂದು ಗೌರವ ಸಲ್ಲಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಪ್ರತಿ ವರ್ಷ ಕೋರೆಗಾಂವ್ ವಿಜಯೋತ್ಸವ ಆಚರಣೆ ಮಾಡಲಾಗುತ್ತಿದೆ ಎಂದರು.

ಮುಖಂಡರಾದ ಕರಡಕೆರೆ ಯೋಗೇಶ್, ವಂಸಂತಮ್ಮ ವೆಂಕಟಾಚಲಯ್ಯ, ಚಿದಂಬರಮೂರ್ತಿ, ಮರಿಸ್ವಾಮಿ, ಶಿವಣ್ಣ, ಗುಡಿಗೆರೆ ಬಸವರಾಜು, ಶಿವಲಿಂಗಯ್ಯ, ಜಾಣಪ್ಪ, ವಸಂತಮ್ಮ ಸಿ.ಎ.ಕೆರೆ ಮೂರ್ತಿ, ಕಾಡುಕೊತನಳ್ಳಿ ಅಪ್ಪು, ಸಿದ್ದರಾಜು ಸೇರಿದಂತೆ ಮತ್ತಿತರಿದ್ದರು.