ವಿಜಯಪುರ: ಕಾಯಕ ಮತ್ತು ಭಕ್ತಿಗೆ ಹೆಸರಾಗಿರುವ ಬಂಜಾರಾ ಸಮಾಜ ತಮ್ಮ ಕಲೆ, ಸಂಸ್ಕೃತಿ, ಉಡುಪಿನ ಇತಿಹಾಸವನ್ನು ಮುಂದುವರೆಸಿಕೊಂಡು ಹೋಗಬೇಕು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಹೇಳಿದರು.
ತಿಕೋಟಾ ತಾಲೂಕಿನ ಹಂಚಿನಾಳ ಎಲ್ಟಿ- 3 ರಲ್ಲಿ ಮಂಗಳವಾರ ಶ್ರೀ ಸಂತ ಸೇವಾಲಾಲ್ ಮತ್ತು ಜಗದಂಬಾ ದೇವಸ್ಥಾನದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಬಂಜಾರಾ ಸಮುದಾಯದ ಜನ ಶ್ರಮ ಜೀವಿಗಳಾಗಿದ್ದು, ಬಸವಣ್ಣನವರ ಕಾಯಕ ಮತ್ತು ದಾಸೋಹ ತತ್ವಗಳಡಿ ಜೀವನ ಸಾಗಿಸುತ್ತಿದ್ದಾರೆ. ಶ್ರಮಪಟ್ಟು ದುಡಿದು ಅದರಿಂದ ಬರುವ ಹಣವನ್ನು ಶ್ರದ್ಧಾಭಕ್ತಿಯಿಂದ ದುರ್ಗಾದೇವಿ, ಸೇವಾಲಾಲ್, ಹಾಮುಲಾಲ್ ಸೇರಿದಂತೆ ನಾನಾ ದೇವಸ್ಥಾನಗಳ ಜಾತ್ರೆ ನೆರವೇರಿಸುತ್ತಾರೆ. ದಾಸೋಹ ನಡೆಸುತ್ತಾರೆ. ಜೊತೆಗೆ ತಮ್ಮ ಇತಿಹಾಸ, ಸಂಸ್ಕೃತಿ, ಕಲೆಯನ್ನು ಕಾಪಾಡಿಕೊಂಡು ಹೊರಟಿದ್ದಾರೆ ಎಂದರು.
ವಿಶಿಷ್ಠವಾಗಿರುವ ಬಂಜಾರಾ ಕಲೆ, ಸಂಸ್ಕೃತಿ, ಕಸೂತಿ ಕಲೆಯನ್ನು ಜೀವನಂತವಾಗಿ ಇಟ್ಟು ದೇಶ, ವಿದೇಶಗಳಲ್ಲಿ ಪರಿಚಯಿಸಿ ಜನಪ್ರಿಯಗೊಳಿಸುವ ಮೂಲಕ ಉತ್ತೇಜನ ನೀಡಲಾಗುತ್ತಿದೆ. ಈ ಸಮುದಾಯ ನಮ್ಮ ತಂದೆಯ ಕಾಲದಿಂದಲೂ ನಮ್ಮ ಮೇಲೆ ವಿಶ್ವಾಸವಿಟ್ಟುಕೊಂಡು ಬಂದಿದೆ. ಇಲ್ಲಿ ಕೈಗೊಂಡಿರುವ ನೀರಾವರಿ ಯೋಜನೆಗಳಿಂದಾಗಿ ತಾಂಡಾಗಳ ಜನತೆ ಮಹಾರಾಷ್ಟ್ರ ಮತ್ತು ಗೋವಾಗಳಿಗೆ ಗುಳೆ ಹೋಗುವುದು ಶೇ. 75 ರಷ್ಟು ತಪ್ಪಿದ್ದು, ಮಹಾರಾಷ್ಟ್ರದ ಜನ ಕಬ್ಬು ಕಟಾವಿಗೆ ಇಲ್ಲಿಗೆ ಗುಳೆ ಬರುತ್ತಿದ್ದಾರೆ ಎಂದರು.
ಬಬಲೇಶ್ವರ ಮತಕ್ಷೇತ್ರದ ಪ್ರತಿಯೊಂದು ಗ್ರಾಮಗಳಲ್ಲಿ ಕನಿಷ್ಠ ಎರಡು ದೇವಸ್ಥಾನ ಮತ್ತು ಸಮುದಾಯ ಭವನಗಳನ್ನು ಅನುದಾನ ನೀಡಿ ಅಭಿವೃದ್ಧಿ ಪಡಿಸಿದ್ದೇನೆ. ಹಾಮುಲಾಲ್ ದೇವಸ್ಥಾನ, ಸೇವಾಲಾಲ್‌ರ ಭವನ ನಿರ್ಮಾಣಕ್ಕೆ ಅನುದಾನ ಒದಗಿಸಿದ್ದೇನೆ. ಈಗ ಇಲ್ಲಿ ನಿರ್ಮಿಸಲಾಗಿರುವ ಈ ಎರಡೂ ದೇವಸ್ಥಾನಗಳ ಅಭಿವೃದ್ಧಿಗೆ ರೂ. 20 ಲಕ್ಷ ಅನುದಾನ ನೀಡಿದ್ದೇನೆ. ಈಗಾಗಲೇ ಹಂಚನಾಳ ತಾಂಡಾ ರಸ್ತೆ ಅಭಿವೃದ್ಧಿಗೆ ರೂ. 1.50 ಕೋಟಿ ಟೆಂಡರ್ ಕರೆಯಲಾಗಿದೆ. ಜಲಜೀವನ್ ಮಿಷನ್ ಯೋಜನೆಯಡಿ ನೀರು ಒದಗಿಸಲಾಗುತ್ತಿದೆ ಎಂದು ಸಚಿವರು ತಿಳಿಸಿದರು.
ಲಿಂಗಸೂರ ವಿಜಯಮಹಾಂತೇಶ ಶಾಖಾ ಮಠದ ಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳು, ಕೆಸರಹಟ್ಟಿ ಗುರುಪೀಠದ ಶ್ರೀ ಸೋಮಲಿಂಗ ಮಹಾಸ್ವಾಮಿಗಳು, ಕೆಸರಾಳದ ಧನಸಿಂಗ್ ಮಹಾರಾಜ, ತೊರವಿಯ ಗೋಪಾಲ ಮಹಾರಾಜ, ಹಂಚಿನಾಳ ಎಲ್ಟಿ- 2ರ ಗುಲಾಬ್ ಮಹಾರಾಜ ಮತ್ತು ವಸಂತ ಮಹಾರಾಜ, ಕೌಶಲಾಭಿವೃದ್ಧಿ ನಿಗಮದ ಅಧ್ಯಕ್ಷೆ ಕಾಂತಾ ನಾಯಕ, ಮುಖಂಡರಾದ ಡಿ.ಎಲ್. ಚವಾಣ್, ಅರ್ಜುಣ ರಾಠೋಡ, ರಾಜು ಚವಾಣ್, ವ್ಹಾಣ, ಪದ್ದು ಹೀರು ಚವಾಣ್, ಶೈಲಾ ಸೋಮು ಚವಾಣ್, ಕವಿತಾ ಪಿಂಟು ಚವಾಣ್, ಸದಾಶಿವ ಪೂಜಾರಿ, ಗುರುಪಾದಗೌಡ ದಾಶ್ಯಾಳ, ಪಿಂಟು ಚವಾಣ್, ಅಶೋಕ ಎಂ. ಪಾಟೀಲ, ಪ್ರಕಾಶ ರೇವು ರಾಠೋಡ, ಅರವಿಂದ ಪದ್ದು ಚವಾಣ್ ಮತ್ತಿತರರಿದ್ದರು.