ಜಿಲ್ಲೆ

ಏ.8ರಂದು ಬೆಂಗಳೂರು ಕರಗ ಖಚಿತ

ಬೆಂಗಳೂರು: ನಗರದಲ್ಲಿ ಏ. 8ರಂದು ಐತಿಹಾಸಿಕ ಬೆಂಗಳೂರು ಕರಗ ಮಹೋತ್ಸವನ್ನು ನಡೆಸುವುದು ಬಹುತೇಕ ಖಚಿತವಾಗಿದೆ. ಹಸಿಕರಗ ಸಾಗುವ ಎಲ್ಲ ರಸ್ತೆಗಳಲ್ಲಿ ಗುಂಡಿಗಳನ್ನು ಮುಚ್ಚಿ, ಇಕ್ಕೆಲಗಳಲ್ಲಿ ಸ್ವಚ್ಛತೆ ಕಾಪಾಡುವಂತೆ ಅಧಿಕಾರಿಗಳಿಗೆ ಮೇಯರ್ ಗೌತಮ್ ಕುಮಾರ್ ಸೂಚನೆ ನೀಡಿದ್ದಾರೆ.

ಕರಗ ಮಹೋತ್ಸವದ ಅಂಗವಾಗಿ ಪೂರ್ವಭಾವಿ ಸಿದ್ಧತೆಗಳನ್ನು ಕೈಗೊಳ್ಳಲು ಗುರುವಾರ ಸ್ಥಳ ಪರಿಶೀಲನೆ ನಡೆಸಿ ಸುದ್ದಿಗಾರರ ಜತೆ ಮಾತನಾಡಿದರು. ಕರೊನಾ ಸೋಂಕು ಹಾಗೂ ಕಾಲರಾ ರೋಗ ಭೀತಿ ಹಿನ್ನೆಲೆಯಲ್ಲಿ ಕರಗದ ಮೆರವಣಿಗೆ ನಡೆಯುವ ನಗರ್ತಪೇಟೆ ರಸ್ತೆ, ಅವೆನ್ಯೂ ರಸ್ತೆ, ಕೃ.ರಾ. ಮಾರುಕಟ್ಟೆ ರಸ್ತೆಗಳಲ್ಲಿನ ಗುಂಡಿಗಳನ್ನು ಮುಚ್ಚಬೇಕು. ಎಲ್ಲೆಡೆ ಸ್ವಚ್ಛತೆ ಕಾಪಾಡಬೇಕು. ಎಲ್ಲ ಕಂಬಗಳಿಗೂ ಬೀದಿದೀಪಗಳನ್ನು ಅಳವಡಿಸಬೇಕು. ಜತೆಗೆ ಮುನ್ನೆಚ್ಚರಿಕೆ ಕ್ರಮವಾಗಿ ಸಿಸಿ ಕ್ಯಾಮರಾ ಅಳವಡಿಸಲು ಸೂಚಿಸಲಾಗಿದೆ ಎಂದು ತಿಳಿಸಿದರು.

ನಂತರ ಕಾರ್ಪೇರೇಷನ್ ವೃತ್ತದ ಬಳಿಯ ಹಸಿ ಕರಗ ಮಂಟಪ ತಪಾಸಣೆ ನಡೆಸಿದರು. ಸುತ್ತಲಿನ ಜಾಗವನ್ನು ಸ್ವಚ್ಛಗೊಳಿಸಬೇಕು. ಸಂಪಂಗಿರಾಮನಗರ ಕಲ್ಯಾಣಿಯಲ್ಲಿ ನೀರು ಮಲಿನಗೊಂಡಿದ್ದು, ತೆರವುಗೊಳಿಸಿ ಹೊಸ ನೀರನ್ನು ಬಿಡಬೇಕು. ಕಲ್ಯಾಣಿಗೆ ಸಂಪರ್ಕ ಕಲ್ಪಿಸುವ ಕಾಲುವೆ ಮೇಲೆ ಚಪ್ಪಡಿಗಳನ್ನು ಅಳವಡಿಸಬೇಕು. ಈಗಿರುವ ಮೆಟ್ಟಿಲುಗಳನ್ನು ದುರಸ್ತಿ ಮಾಡುವಂತೆ ಆದೇಶಿಸಿದರು.

ಪಾಲಿಕೆ ಆಯುಕ್ತ ಅನಿಲ್ ಕುಮಾರ್, ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಮಂಜುನಾಥ ರಾಜು, ಪಾಲಿಕೆ ಸದಸ್ಯ ಗುಣಶೇಖರ್, ಧರ್ಮರಾಯಸ್ವಾಮಿ ದೇವಸ್ಥಾನ ಮಂಡಳಿ ಮುಖಂಡರು ಉಪಸ್ಥಿತರಿದ್ದರು.