ಜಿಲ್ಲೆ

ಗಾಂಜಾ ದಂಧೆಕೋರರ ಬೆನ್ನುಬಿದ್ದ ಪೊಲೀಸರು, ವಿಶೇಷ ಕಾರ್ಯಾಚರಣೆಯಲ್ಲಿ 16 ಕೆ.ಜಿ.ಗಾಂಜಾ ವಶ

ಬೆಂಗಳೂರು ಗ್ರಾಮಾಂತರ: ಅತ್ತ ಸಿಲಿಕಾನ್ ಸಿಟಿ ಪೊಲೀಸರು ಡ್ರಗ್ಸ್ ಜಾಲದ ಬೆನ್ನತ್ತಿ ಸ್ಯಾಂಡಲ್‌ವುಡ್ ತಾರೆಯರಿಗೆ ಬಲೆ ಬೀಸುತ್ತಿದ್ದರೆ, ಇತ್ತ ಗ್ರಾಮಾಂತರ ಜಿಲ್ಲಾ ಪೊಲೀಸರು ಗಾಂಜಾ ದಂಧೆಕೋರರನ್ನು ಬಲೆಗೆ ಬೀಳಿಸುತ್ತಿದ್ದಾರೆ.

ಜಿಲ್ಲೆಯಲ್ಲಿ ದಂಧೆಕೋರರ ಬೇರಿಗೆ ಕೈಹಾಕಿರುವ ಪೊಲೀಸರು ಕಳೆದೆರಡು ದಿನಗಳಲ್ಲಿ 7ಮಂದಿಯನ್ನು ಬಂಧಿಸಿ 16 ಕೆಜಿ ಗಾಂಜಾ ವಶಪಡಿಸಿಕೊಂಡಿದ್ದಾರೆ.

ಹಿಂದಿನಿಂದಲೂ ಜಿಲ್ಲೆಯಲ್ಲಿ ದಂಧೆ ನಡೆಯುತ್ತಿದ್ದು, ಕರೊನಾ ಲಾಕ್‌ಡೌನ್ ವೇಳೆ ಹೆಚ್ಚಳಗೊಂಡಿದೆ. ಸರಕು ಸಾಗಣೆ ವಾಹನಗಳ ತಪಾಸಣೆ ಬಗ್ಗೆ ಪೊಲೀಸರ ಮೃದುಧೋರಣೆಯನ್ನೇ ಬಂಡವಾಳ ಮಾಡಿಕೊಂಡ ದಂಧೆಕೋರರು ಗೂಡ್ಸ್ ವಾಹನಗಳ ಮೂಲಕ ಸುಲಭವಾಗಿ ಗಾಂಜಾ ಸಾಗಿಸುತ್ತಿದ್ದರು ಎಂಬ ಮಾಹಿತಿ ಮೇಲ್ನೋಟಕ್ಕೆ ಕಂಡುಬರುತ್ತಿದೆ. ಈ ಬಗ್ಗೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ರಾಜ್ಯ ರಾಜಧಾನಿಯಲ್ಲಿ ಗಾಂಜಾ, ಅಫೀಮು,ಬ್ರೈನ್ ಶುಗರ್ ಮತ್ತಿತರ ಮಾದಕ ವಸ್ತು ಪೂರೈಕೆ ಹಾಗೂ ಬಳಕೆ ಬಗ್ಗೆ ತನಿಖೆ ಚುರುಕುಗೊಳ್ಳುತ್ತಿದ್ದಂತೆ ಗ್ರಾಮಾಂತರ ಜಿಲ್ಲಾ ಪೊಲೀಸರು ಅಲರ್ಟ್ ಆಗಿದ್ದಾರೆ.

ಹೊಸಕೋಟೆಯಲ್ಲಿ ಏಕಕಾಲಕ್ಕೆ ದಾಳಿ: ಹೊಸಕೋಟೆ ಠಾಣೆ ಪೊಲೀಸರು ಗುರುವಾರ 14 ಕೆಜಿ ಗಾಂಜಾ ಜಪ್ತಿ ಮಾಡಿದ್ದಾರೆ. ಹೊಸಕೋಟೆ ಉಪವಿಭಾಗದ ಮೂವರ ಸರ್ಕಲ್ ಇನ್‌ಸ್ಪೆಕ್ಟರ್, 6 ಪಿಸ್‌ಐ ಸೇರಿ 10 ತಂಡ ಏಕಕಾಲಕ್ಕೆ ದಾಳಿ ನಡೆಸಿದೆ. ಹೊಸಕೋಟೆ ನಗರ ಸೇರಿ ಗ್ರಾಮಾಂತರ ಭಾಗದ ಲಾಲ್ ಬಾಗ್ ದಾಸರಹಳ್ಳಿಯಲ್ಲಿ ಕಾರ‌್ಯಾಚರಣೆ ನಡೆದಿದೆ. ಡಿವೈಎಸ್ಪಿ ನಿಂಗಪ್ಪ ಬಸಪ್ಪ ಸಕ್ರಿ ನೇತೃತ್ವದಲ್ಲಿ ನಡೆದ ದಾಳಿ ವೇಳೆ ಮಾಲು ಜಪ್ತಿಯಾಗಿದ್ದರೂ ಆರೋಪಿಗಳು ತಪ್ಪಿಸಿಕೊಂಡಿದ್ದಾರೆ ಎನ್ನಲಾಗಿದ್ದು, ಆರೋಪಿಗಳ ಪತ್ತೆಗೆ ಹೊಸಕೋಟೆ ಪೊಲೀಸರು ಬಲೆ ಬೀಸಿದ್ದಾರೆ.

ನೆಲಮಂಗಲ ತಾಲೂಕಿನಲ್ಲಿ ನಾಲ್ವರು ಗಾಂಜಾ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರು ಉತ್ತರ ತಾಲೂಕು ದಾಸನಪುರ ಹೋಬಳಿ ಮಾಕಳಿ ಗ್ರಾಮದ ಸಂತೋಷ್‌ಚೌವ್ಹಾಣ್ (35), ದಾಂಜಿಕುಮಾರ್ (25), ಗುರುಪ್ರಸಾದ್ (31), ತ್ಯಾಮಗೊಂಡ್ಲು ಹೋಬಳಿಯ ಇರ್ಫಾನ್ (21) ಬಂಧಿತರು. ತಾಲೂಕಿನ ರಾ.ಹೆ.4 ಗಂಗಾಧರನಪಾಳ್ಯದ ಬಳಿ ಖಚಿತ ಮಾಹಿತಿ ಮೇರೆಗೆ ಗ್ರಾಮಾಂತರ ಠಾಣೆ ಎಸ್‌ಐ ವಸಂತ್‌ಕುಮಾರ್ ನೇತೃತ್ವದ ತಂಡ ದಾಳಿ ನಡೆಸಿ1 ಕೆಜಿ 90 ಗ್ರಾಂ ಗಾಂಜಾ ಜಪ್ತಿ ಮಾಡಿದೆ. ತಹಸೀಲ್ದಾರ್ ಎಂ.ಶ್ರೀನಿವಾಸ್ ಸಮ್ಮುಖದಲ್ಲಿ ಸ್ಥಳ ಪರಿಶೀಲನೆ ಮಾಡಿ ಗಾಂಜಾ ಜಪ್ತಿ ಮಾಡಲಾಯಿತು.

ಜಿಲ್ಲೆಯ ನಾಲ್ಕೂ ತಾಲೂಕುಗಳಲ್ಲೂ ಚೆಕ್‌ಪೋಸ್ಟ್ ನಿರ್ಮಿಸಿ ಹೈಅಲರ್ಟ್ ೋಷಿಸಲಾಗಿದೆ. ಜಿಲ್ಲಾ ಪೊಲೀಸರು ಗಾಂಜಾ ಮತ್ತಿತರ ಮಾದಕವಸ್ತು ಸಾಗಣೆ, ಪೂರೈಕೆ ಹಾಗೂ ಗ್ರಾಹಕರ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದು, ಆರೋಪಿಗಳನ್ನು ಬಂಧಿಸಲಾಗುತ್ತಿದೆ. ಏಕಕಾಲದಲ್ಲಿ ದಾಳಿ ನಡೆಸಲಾಗುತ್ತಿದ್ದು ಆರೋಪಿಗಳ ಬಂಧನಕ್ಕೆ ತೀವ್ರ ಶೋಧ ನಡೆಯುತ್ತಿದೆ. ರವಿ ಡಿ. ಚನ್ನಣ್ಣನವರ್, ಗ್ರಾಮಾಂತರ ಜಿಲ್ಲೆ ಎಸ್‌ಪಿ