ಹುಬ್ಬಳ್ಳಿ: ಅವಧಿಪೂರ್ವ ಜನಿಸಿದ್ದ ಮಗುವಿನ ತೂಕ ಆಗ 880 ಗ್ರಾಂ ಇತ್ತು. ಇಲ್ಲಿಯ ಕೆಎಂಸಿಆರ್‌ಐನಲ್ಲಿ 30 ದಿನಗಳ ಕಾಲ ಆರೈಕೆ ಮಾಡಿದ ಮೇಲೆ ನವಜಾತ ಶಿಶುವಿನ ತೂಕವೀಗ 1ಕೆಜಿ 400 ಗ್ರಾಂ ಆಗಿದೆ.
ಇಲ್ಲಿಯ ಕೆಎಂಸಿಆರ್‌ಐನ ತಾಯಿ ಮತ್ತು ಮಕ್ಕಳ ವಿಭಾಗದಲ್ಲಿ ಅ. 10ರಂದು ದಾಖಲಾಗಿದ್ದ ನಿರ್ಮಲಾ ಅಕ್ಕಿ ಎನ್ನುವವರಿಗೆ 32ನೇ ವಾರದಲ್ಲಿ (ಅವಧಿಪೂರ್ವ) ಶಿಶು ಜನಿಸಿತ್ತು. ಅದೇ ದಿನ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿತ್ತು. ಆಗ ನವಜಾತ ಶಿಶು ತೀವ್ರ ನಿಗಾ ಘಟಕದಲ್ಲಿ ದಾಖಲಿಸಲಾಗಿತ್ತು. 3 ದಿನ ಕೃತಕ ಉಸಿರಾಟದ ಮೇಲೆ ‘ಸರ್ಫಕ್ಟಾಂಟ್’ ಔಷಧ ನೀಡಲಾಗಿತ್ತು. ಮುಂದಿನ 7 ದಿನದವರೆಗೆ ‘ಬಬಲ್ ಸಿಪಿಎಪಿ’ ಎಂಬ ಉಸಿರಾಟದ ಬಲ ತುಂಬಲಾಗಿತ್ತು. ಕ್ರಮೇಣ ಸಮಸ್ಯೆ ಗುಣವಾಗಿದೆ.
ಶಿಶುವಿನ ತೂಕ ಕಡಿಮೆ ಇದ್ದುದರಿಂದ 14 ದಿನ ‘ಇನ್‌ಕ್ಯುಬೇಟರ್’ ಒಳಗಡೆ ಆರೈಕೆ ಮಾಡಿದ್ದರಿಂದ ತೂಕ ಹೆಚ್ಚಲಾರಂಭಿಸಿತ್ತು. ನಂತರ ‘ಕಾಂಗರೂ’ ತಾಯಿ ಆರೈಕೆ ಮಾಡಲಾಗಿದೆ. ‘ಪಾಲಡೇ’ ತಾಯಿ ಹಾಲು ಕುಡಿಯಲು ಕೊಡಲಾಯಿತು. ಕೆಂಪು ರಕ್ತ ಕಡಿಮೆ ಇದ್ದುದರಿಂದ ರಕ್ತ ನೀಡಲಾಯಿತು. ಪರಿಣಾಮ 30 ದಿನಗಳ ಸತತ ಆರೈಕೆಯಿಂದ ಮಗುವಿನ ತೂಕ 1ಕೆಜಿ 400 ಗ್ರಾಂ ಹೆಚ್ಚಿದೆ ಎಂದು ನವಜಾತ ಶಿಶು ತೀವ್ರ ನಿಗಾ ಘಟಕದ ಮುಖ್ಯಸ್ಥ ಡಾ. ರಾಘವೇಂದ್ರ ದೇಸಾಯಿ ತಿಳಿಸಿದ್ದಾರೆ.
‘ಅವಧಿಪೂರ್ವ ಜನಿಸಿದ್ದ ಮಗುವಿಗೆ ವಿಶೇಷ ಆರೈಕೆ ಮಾಡಲಾಗಿತ್ತು. ಕಿವಿ, ಕಣ್ಣು, ಮಿದುಳು ಪರೀಕ್ಷೆ ಮಾಡಿದ್ದು, ಮಗು ಆರೋಗ್ಯವಾಗಿದೆ. ಮಂಗಳವಾರ ಡಿಸ್ಜಾರ್ಜ್ ಮಾಡಲಾಗಿದೆ' ಎಂದು ಕೆಎಂಸಿಆರ್‌ಐ ನಿರ್ದೇಶಕ ಡಾ. ಎಸ್.ಎಫ್. ಕಮ್ಮಾರ ತಿಳಿಸಿದ್ದಾರೆ.