ಜೆಎಸ್‌ಎಸ್ ಆಯುರ್ವೇದ ಮಹಾವಿದ್ಯಾಲಯದಲ್ಲಿ ಗುರುವಾರ ಪದವಿ ಪ್ರದಾನ ಸಮಾರಂಭ ನಡೆಯಿತು. ಡಾ.ಸಿ.ಜಿ. ಬೆಟಸೂರಮಠ,ಡಾ. ಶರಬೇಶ್ವರ, ಡಾ. ಶಿವಪ್ರಕಾಶ್ ಹುಡೇದ ಹಾಗೂ ಇತರರು ಇದ್ದರು.  
ಜಿಲ್ಲೆ

ದೇಶದ ಆರ್ಥಿಕತೆಗೆ ಶೇ.1.3ರಷ್ಟು ಕೊಡುಗೆ ನೀಡುತ್ತಿರುವ ಆಯುಷ್ ಕ್ಷೇತ್ರ

ಮೈಸೂರು: ಆಯುರ್ವೇದ ಕ್ಷೇತ್ರವು ದೇಶೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೊಸ ಸಾಧ್ಯತೆಗಳೊಂದಿಗೆ ವೇಗವಾಗಿ ವಿಸ್ತರಿಸುತ್ತಿದ್ದು, ಪದವೀಧರರು ಈ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಲು ಕೇವಲ ಶೈಕ್ಷಣಿಕ ಅರ್ಹತೆಗೆ ಸೀಮಿತವಾಗದೆ, ಜ್ಞಾನ, ಕೌಶಲ, ಸಂಶೋಧನಾ ಮನೋಭಾವ ಹಾಗೂ ವೃತ್ತಿಪರ ಬದ್ಧತೆಯನ್ನು ಬೆಳೆಸಿಕೊಳ್ಳಬೇಕು ಎಂದು ಜೆಎಸ್‌ಎಸ್ ಆಯುರ್ವೇದ ಮಹಾವಿದ್ಯಾ ಲಯದ ಉಪಪ್ರಾಂಶುಪಾಲ ಡಾ. ಶಿವಪ್ರಕಾಶ್ ಹುಡೇದ ಕರೆ ನೀಡಿದರು.

ಜೆಎಸ್‌ಎಸ್ ಆಯುರ್ವೇದ ಮಹಾವಿದ್ಯಾಲಯದಲ್ಲಿ ಗುರುವಾರ ಆಯೋಜಿಸಲಾಗಿದ್ದ ಪದವಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ಆಯುರ್ವೇದ ಪದವಿ ಎನ್ನುವುದು ಕೇವಲ ಶೈಕ್ಷಣಿಕ ಸಾಧನೆಯಲ್ಲ; ಸಮಾಜಕ್ಕೆ ಆರೋಗ್ಯ ಸೇವೆ ಸಲ್ಲಿಸುವ ಮಹತ್ತರ ಜವಾಬ್ದಾರಿಯ ಆರಂಭವಾಗಿದೆ ಎಂದು ಹೇಳಿದರು.

2014ರಲ್ಲಿ 700 ಕೋಟಿ ರೂ.ಬಜೆಟ್ ಹೊಂದಿದ್ದ ಆಯುಷ್ ಇಲಾಖೆ ಇಂದು ಪ್ರತ್ಯೇಕ ಸಚಿವಾಲಯವಾಗಿ ಬೆಳೆದಿದ್ದು, ಅದರ ಬಜೆಟ್ 4,500 ಕೋಟಿ ರೂ.ಗೆ ಏರಿಕೆಯಾಗಿದೆ. ಆಯುಷ್ ಕ್ಷೇತ್ರವು ದೇಶದ ಒಟ್ಟು ಆರ್ಥಿಕತೆಯಲ್ಲಿ ಪ್ರಸ್ತುತ ಶೇ.1.3ರಷ್ಟು ಕೊಡುಗೆ ನೀಡುತ್ತಿದ್ದು, 2047ರ ವೇಳೆಗೆ ಇದನ್ನು ಶೇ.5ಕ್ಕೆ ಹೆಚ್ಚಿಸುವ ಗುರಿ ಹೊಂದಲಾಗಿದೆ. ದೇಶದ ಒಟ್ಟಾರೆ ಆರ್ಥಿಕ ಬೆಳವಣಿಗೆಯ ವೇಗಕ್ಕಿಂತ ಆಯುಷ್ ಕ್ಷೇತ್ರದ ಬೆಳವಣಿಗೆ ಎರಡೂವರೆ ಪಟ್ಟು ಹೆಚ್ಚಿರುವುದು ಈ ಕ್ಷೇತ್ರದ ಉಜ್ವಲ ಭವಿಷ್ಯಕ್ಕೆ ಸಾಕ್ಷಿಯಾಗಿದೆ ಎಂದು ಹೇಳಿದರು.

ದೇಶದಲ್ಲಿ ಸುಮಾರು 12,500 ಕ್ಷೇಮ ಕೇಂದ್ರಗಳು, 33 ಸಾವಿರಕ್ಕೂ ಅಧಿಕ ಸರ್ಕಾರಿ ಆಯುರ್ವೇದ ಚಿಕಿತ್ಸಾಲಯಗಳು ಹಾಗೂ 600 ಆಯುರ್ವೇದ ಕಾಲೇಜುಗಳು ಕಾರ್ಯನಿರ್ವಹಿಸುತ್ತಿವೆ. ಔಷಧ ತಯಾರಿಕೆ, ಆಸ್ಪತ್ರೆಗಳು, ವೈದ್ಯಕೀಯ ಶಿಕ್ಷಣ, ಯೋಗ, ಕ್ಷೇಮ ಕೇಂದ್ರಗಳು, ಸಂಶೋಧನೆ ಮತ್ತು ಉದ್ಯಮಶೀಲತೆ ಸೇರಿದಂತೆ ವಿವಿಧ ವಲಯಗಳಲ್ಲಿ ಉದ್ಯೋಗ ಹಾಗೂ ಸ್ವಯಂ ಉದ್ಯೋಗದ ಅವಕಾಶಗಳು ಹೆಚ್ಚುತ್ತಿವೆ ಎಂದರು.

ಆಯುರ್ವೇದದ ಅಂತಾರಾಷ್ಟ್ರೀಯ ವ್ಯಾಪ್ತಿ ವಿಸ್ತರಿಸುತ್ತಿದ್ದು, ಆಯುಷ್ ಸಚಿವಾಲಯವು 27 ದೇಶಗಳು ಹಾಗೂ 54 ಅಂತಾರಾಷ್ಟ್ರೀಯ ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಂಡಿದೆ. ವಿದೇಶಗಳಲ್ಲಿ 16 ಆಯುಷ್ ಪೀಠಗಳು ಮತ್ತು 39 ದೇಶಗಳಲ್ಲಿ 43 ಮಾಹಿತಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಭಾರತೀಯ ವೈದ್ಯಕೀಯ ಪದ್ಧತಿಗಳಿಗೆ ಜಾಗತಿಕ ಮಟ್ಟದಲ್ಲಿ ಹೆಚ್ಚುತ್ತಿರುವ ಮನ್ನಣೆ ಪದವೀಧರರಿಗೆ ಹೊಸ ವೃತ್ತಿ ಅವಕಾಶಗಳನ್ನು ತೆರೆದಿದೆ ಎಂದು ಹೇಳಿದರು.

ಬಿಎಎಂಎಸ್ ಪದವಿಯ ನಂತರ ಸ್ನಾತಕೋತ್ತರ, ಸೂಪರ್ ಸ್ಪೆಷಾಲಿಟಿ ಹಾಗೂ ಡಿಎಂ ಕೋರ್ಸ್‌ಗಳ ಮೂಲಕ ಉನ್ನತ ಶಿಕ್ಷಣ ಪಡೆಯಬಹುದು. ವೈದ್ಯಕೀಯ ವೃತ್ತಿಯ ಜೊತೆಗೆ ಬೋಧನೆ, ಸಂಶೋಧನೆ, ಆಡಳಿತ ಮತ್ತು ನಾಗರಿಕ ಸೇವೆಗಳಲ್ಲಿಯೂ ತಮ್ಮ ಸಾಮರ್ಥ್ಯ ಪ್ರದರ್ಶಿಸಲು ಅವಕಾಶಗಳಿವೆ ಎಂದು ತಿಳಿಸಿದರು.

ಆಯುರ್ವೇದ ಶಿಕ್ಷಣವನ್ನು ಆಧುನಿಕ ತಂತ್ರಜ್ಞಾನದೊಂದಿಗೆ ಬೆಸೆಯುವ ಉದ್ದೇಶದಿಂದ ನುರಿತ ಶಿಕ್ಷಕರು ಮತ್ತು ವೈದ್ಯರ ಸಹಯೋಗದಲ್ಲಿ ವಿಶೇಷ ಬೋಧನಾ ವಿಡಿಯೊಗಳನ್ನು ಸಿದ್ಧಪಡಿಸಲಾಗುತ್ತಿದೆ. ಇವು ವಿದ್ಯಾರ್ಥಿಗಳ ಕಲಿಕೆ ಹಾಗೂ ಪ್ರಾಯೋಗಿಕ ತರಬೇತಿಗೆ ನೆರವಾಗಲಿವೆ ಎಂದರು.

ವೇದಿಕೆಯಲ್ಲಿ ಜೆಎಸ್‌ಎಸ್ ಮಹಾವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ.ಸಿ.ಜಿ. ಬೆಟಸೂರಮಠ, ಪ್ರಾಂಶುಪಾಲ ಡಾ. ಶರಬೇಶ್ವರ, ಪ್ರಾಧ್ಯಾಪಕರಾದ ಡಾ.ಡಿ.ಟಿ.ಉಷಾ, ಡಾ. ಪ್ರಿಯಾಂಕ, ಡಾ. ಶರಣ್ಯ, ಡಾ. ಅಯ್ಯಣ್ಣ, ಡಾ. ಅಲ್ಲಮಪ್ರಭು ಗುಡ್ಡ ಉಪಸ್ಥಿತರಿದ್ದರು.

ಪದವಿ ಪ್ರದಾನ

ಪದವಿ ವಿಭಾಗದ 108, ಸ್ನಾತಕೋತ್ತರ ಪದವಿಯ 36 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ಅತ್ಯುತ್ತಮ ಸ್ನಾತಕೋತ್ತರ ಪದವಿ ವಿದ್ಯಾರ್ಥಿನಿಯಾಗಿ ಡಾ.ಸಪ್ನಾ ಕಾಗಲೆ, ಅತ್ಯುತ್ತಮ ಇಂಟರ್ನಿಯಾಗಿ ಡಾ. ಹರ್ಷಿತಾ ವಿ.ಕುಮಾರ್, ಡಾ.ಪೂರನ್ ಜೀವಕ ಪ್ರಶಸ್ತಿಗೆ ಡಾ.ಸಪ್ನಾ ಕಾಗಲೆ, ಆಯುರ್ವೇದ ವಿಶಾರದ ಪ್ರಶಸ್ತಿಗೆ ಡಾ.ಎಂ.ಡಿ.ಸಹನಾ ಭಾಜನರಾದರು.