ಜಿಲ್ಲೆ

ಓದುಗರ ಮನಸ್ಸನ್ನು ಗ್ರಹಿಸುವ ಶಕ್ತಿ ಲೇಖಕರಿಗೆ ಇರಬೇಕು: ಡಾ.ಬಿ.ರಾಘವ

ಮಡಿಕೇರಿ: ಲೇಖಕರಿಗೆ ತಾಳ್ಮೆ ಮುಖ್ಯ, ಓದುಗರ ಮನಸ್ಸನ್ನು ಗ್ರಹಿಸುವ ಶಕ್ತಿ ಇರಬೇಕು ಎಂದು ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಪ್ರಾಂಶುಪಾಲರಾದ ಮೇಜರ್ ಡಾ.ಬಿ.ರಾಘವ ತಿಳಿಸಿದರು.

ನಗರದ ಪತ್ರಿಕಾಭವನದ ಸಭಾಂಗಣದಲ್ಲಿ ಕೊಡವ ಮಕ್ಕಡ ಕೂಟದ ೯೯ನೇ ಪುಸ್ತಕ, ಲೇಖಕಿ ತೆನ್ನೀರ ಟೀನಾ ಚಂಗಪ್ಪ ರಚಿಸಿರುವ ಮಣ್ಣ್‌ರ ಋಣ ಬಿಡುಗಡೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ನಮ್ಮ ನಾಡು, ನುಡಿ, ಸಂಸ್ಕೃತಿಯನ್ನು ಯಾರೂ ಮರೆಯಬಾರದು. ಪ್ರತಿಯೊಬ್ಬ ಮನುಷ್ಯನ ಜೀವನದಲ್ಲಿ ನಾವು ಅನುಸರಿಸುವ ಸಂಸ್ಕೃತಿ, ಆಚಾರ, ವಿಚಾರ, ಭಾಷೆ ಬಹುಮುಖ್ಯ ಪಾತ್ರವನ್ನು ವಹಿಸುತ್ತದೆ. ಈ ನಿಟ್ಟಿನಲ್ಲಿ ಲೇಖಕರಿಗೆ ಸಾಮಾಜಿಕ ಬದ್ಧತೆ ಇರಬೇಕು. ಬರಹಗಳು ಸಮಾಜಕ್ಕೆ ಮಾರ್ಗದರ್ಶನ ನೀಡುವಂತಿರಬೇಕು ಎಂದರು.

ಮಣ್ಣ್‌ರ ಋಣ ಕೃತಿಯು ಸಮಾಜಕ್ಕೆ ಬೇಕಾದ ಉತ್ತಮ ಸಂದೇಶವನ್ನು ಒಳಗೊಂಡಿದೆ. ತಾಯಿ ಮತ್ತು ತಾಯಿ ನಾಡು ಸ್ವರ್ಗಕ್ಕಿಂತ ಹೆಚ್ಚು, ನಾಡು ಬಿಟ್ಟು ಹೋದರೆ ಹೇಗೆಲ್ಲ ಕಷ್ಟಪಡಬೇಕು ಮತ್ತು ಅವಿಭಕ್ತ ಕುಟುಂಬ ಹೇಗೆ ವಿಭಕ್ತ ಕುಟುಂಬವಾಗುತ್ತದೆ ಎಂಬುದರ ಬಗ್ಗೆ ಲೇಖಕಿ ತೆನ್ನೀರ ಟೀನಾ ಚಂಗಪ್ಪ ಉತ್ತಮವಾಗಿ ವಿವರಿಸಿದ್ದಾರೆ. ಭಾಷೆ ಮತ್ತು ಸಾಹಿತ್ಯ ಉಳಿಯಬೇಕಾದರೆ ಭಾಷೆಗೆ ಸಂಬಂಧಿಸಿದ ಕೃತಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪ್ರಕಟವಾಗಬೇಕು ಎಂದು ಡಾ.ಬಿ.ರಾಘವ ಹೇಳಿದರು.

ಮಣ್ಣ್‌ರ ಋಣ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದ ನಿವೃತ್ತ ಪ್ರಾಂಶುಪಾಲೆ ಡಾ.ಬೊಜ್ಜಂಗಡ ಅವನಿಜ ಸೋಮಯ್ಯ, ಪ್ರಸ್ತುತ ದಿನಗಳಲ್ಲಿ ಅತಿಯಾದ ಮೊಬೈಲ್ ಬಳಕೆಯಿಂದಾಗಿ ಯುವ ಜನತೆಯಲ್ಲಿ ಸಾಹಿತ್ಯಾಸಕ್ತಿ ಕಡಿಮೆಯಾಗುತ್ತಿದೆ. ಸಾಹಿತ್ಯಾಸಕ್ತಿ ಬೆಳೆಸುವುದು ಅವಶ್ಯವಾಗಿದ್ದು, ಶಿಕ್ಷಕರು ಉತ್ತಮ ಮಾರ್ಗದರ್ಶನ ಹಾಗೂ ಪ್ರೋತ್ಸಾಹ ನೀಡಬೇಕಿದೆ ಎಂದರು.

ಮಕ್ಕಳ ಶೈಕ್ಷಣಿಕ ಜೀವನದಲ್ಲಿ ಹೆಚ್ಚು ಹೆಚ್ಚು ಪುಸ್ತಕ ಓದುವ ಅವಕಾಶವನ್ನು ನೀಡಿದರೆ ಮುಂದಿನ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾಹಿತ್ಯಾಸಕ್ತರು ಹೊರ ಬರುತ್ತಾರೆ. ಪುಸ್ತಕವನ್ನು ಓದುವುದರಿಂದ ಭಾಷೆಯ ಮೇಲಿನ ಹಿಡಿತ ಸಾಧಿಸಬಹುದು ಮತ್ತು ಬರವಣಿಗೆಯ ಜ್ಞಾನವನ್ನು ಪಡೆದುಕೊಳ್ಳಬಹುದು ಎಂದು ಅಭಿಪ್ರಾಯಪಟ್ಟರು.

ನಿವೃತ್ತ ಮುಖ್ಯೋಪಾಧ್ಯಾಯಿನಿ ತೆನ್ನೀರ ಡಾಟಿ ಗಣೇಶ್ ಮಾತನಾಡಿ, ಮನೆಯೇ ಮೊದಲ ಪಾಠ ಶಾಲೆ ಎಂಬಂತೆ ಪೋಷಕರು ಮಕ್ಕಳಿಗೆ ಪುಸ್ತಕ ಓದಲು ಪ್ರೋತ್ಸಾಹಿಸಬೇಕು. ವಿದ್ಯಾರ್ಥಿಗಳು ಶೈಕ್ಷಣಿಕ ಯಶಸ್ಸಿನ ಜೊತೆಗೆ ಭಾಷೆ, ಸಂಸ್ಕೃತಿಯ ಉಳಿವಿಗಾಗಿ ತಮ್ಮ ಕೊಡುಗೆಯನ್ನು ನೀಡಬೇಕು. ಇದರಿಂದ ಸಮುದಾಯದ ಬೆಳವಣಿಗೆಗೆ ಸಹಕಾರಿಯಾಗಲಿದೆ ಎಂದರು.

ಮಣ್ಣ್‌ರ ಋಣ ಪುಸ್ತಕದ ಲೇಖಕಿ ತೆನ್ನೀರ ಟೀನಾ ಚಂಗಪ್ಪ ಮಾತನಾಡಿ, ಪುಸ್ತಕಗಳು ಪ್ರಕಟಗೊಳ್ಳಬೇಕಾದರೆ ದಾನಿಗಳ ಸಹಕಾರದ ಅಗತ್ಯವಿದೆ. ದಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸಾಹಿತ್ಯಾಸಕ್ತರನ್ನು ಪ್ರೋತ್ಸಾಹಿಸುವ ಮೂಲಕ ಸಾಹಿತ್ಯ ಕ್ಷೇತ್ರಕ್ಕೆ ಮತ್ತಷ್ಟು ಕೊಡುಗೆ ನೀಡುವಂತಾಗಬೇಕು. ಕೊಡವ ಸಾಹಿತ್ಯ ಭಂಡಾರಕ್ಕೆ ಇದು ನನ್ನ ಎರಡನೇ ಪುಸ್ತಕವಾಗಿದ್ದು, ನಾನು ಕೇಳಿದ ಮತ್ತು ನೋಡಿದ ಅಭಿಪ್ರಾಯ, ಅನುಭವ, ಕಷ್ಟ-ಸುಖಗಳನ್ನು ಆಧಾರವಾಗಿಟ್ಟುಕೊಂಡು ಕಥೆಯ ರೂಪವನ್ನು ನೀಡಿರುವುದಾಗಿ ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ, ಕೂಟದ ಮೂಲಕ ಕೊಡವ ಸಂಸ್ಕೃತಿಯ ಬಗ್ಗೆ ಯುವಜನತೆಯಲ್ಲಿ ನಿರಂತರವಾಗಿ ಜಾಗೃತಿ ಹಾಗೂ ಆಸಕ್ತಿಯನ್ನು ಮೂಡಿಸುತ್ತಾ ಬರಲಾಗುತ್ತಿದೆ. ಮಕ್ಕಳು ಸಂಸ್ಕೃತಿಯಿಂದ ದೂರವಾಗುತ್ತಿದ್ದಾರೆ ಎನ್ನುವ ಹಿರಿಯರ ಟೀಕೆಯನ್ನು ದೂರ ಮಾಡಿ ಹಿರಿಯರೇ ಅಚ್ಚರಿ ಪಡುವಂತಹ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರಲಾಗುತ್ತಿದೆ ಎಂದರು.

ಕಾರ್ಯಕ್ರಮವನ್ನು ಬೊಟ್ಟೊಳಂಡ ನಿವ್ಯ ದೇವಯ್ಯ ಪ್ರಾರ್ಥಿಸಿ, ಐಚಂಡ ರಶ್ಮಿ ಮೇದಪ್ಪ ನಿರೂಪಿಸಿದರೆ, ಉಡುವೆರ ರೇಖಾ ರಘು ಸ್ವಾಗತಿಸಿ, ಕುಳುವಂಡ ಶೃತಿ ಪೂಣಚ್ಚ ವಂದಿಸಿದರು.