ಹಿರೀಸಾವೆ: ಹೋಬಳಿಯ ದಿಡಗ ಗ್ರಾಮದ ಎಪಿಎಂಸಿ ಉಪ ಕೇಂದ್ರದ ಆವರಣದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಹರಾಜು ಕಟ್ಟೆಯು ಮದ್ಯವ್ಯಸನಿಗಳ ತಾಣವಾಗಿದ್ದು, ವ್ಯಾಪಾರಿಗಳು ಹಾಗೂ ಸಾರ್ವಜನಿಕರಿಗೆ ಮುಜುಗರ ಪಡುವಂತಾಗಿದೆ.
ಈ ಎಪಿಎಂಸಿ ಆವರಣದಲ್ಲಿ ಪ್ರತಿ ಮಂಗಳವಾರ ಸಂತೆ ನಡೆಯಲಿದ್ದು, ಸುತ್ತಮುತ್ತಲಿನ 20ಕ್ಕೂ ಹೆಚ್ಚು ಹಳ್ಳಿಗಳಿಂದ ಜನರು ದಿನಸಿ ಹಾಗೂ ದಿನಬಳಕೆ ಪದಾರ್ಥಗಳನ್ನು ಖರೀದಿಸಲು ಆಗಮಿಸುತ್ತಾರೆ.
ಎಪಿಎಂಸಿ ವತಿಯಿಂದ ಕಳೆದ ವರ್ಷ 80 ಲಕ್ಷ ರೂ. ವೆಚ್ಚದಲ್ಲಿ ಹರಾಜು ಕಟ್ಟೆ, ಕಾಂಕ್ರೀಟ್ ರಸ್ತೆ ಹಾಗೂ ಚರಂಡಿ ನಿರ್ಮಾಣ ಮಾಡಲಾಗಿದ್ದು, ಸಾಕಷ್ಟು ಅಭಿವೃದ್ಧಿಗೊಳಿಸಲಾಗಿದೆ. ಆದರೆ ನಿರ್ಲಕ್ಷೃ ಹಾಗೂ ನಿರ್ವಹಣೆಯ ಕೊರತೆಯ ಪರಿಣಾಮ ಆವರಣವು ಪಾಳು ಬಿದ್ದ ಕೊಂಪೆಯಂತಾಗಿದೆ.
ದಿಡಗ ಗ್ರಾಮ ಪಂಚಾಯಿತಿಯ ಕೂಗಳತೆ ದೂರದಲ್ಲಿರುವ ಎಪಿಎಂಸಿ ಆವರಣ ವ್ಯಾಪ್ತಿಯಲ್ಲಿ ಸಂಜೆ ನಂತರ ಸಾರ್ವಜನಿಕರ ಸಂಚಾರ ವಿರಳವಾಗಿರುತ್ತದೆ. ಇದರಿಂದ ಮದ್ಯ ವ್ಯಸನಿಗಳು ಅತಿಕ್ರಮಣ ಪ್ರವೇಶ ಮಾಡಿ ಹರಾಜು ಕಟ್ಟೆಯ ಮೇಲೆ ಮಧ್ಯರಾತ್ರಿಯವರೆಗೂ ಬೀಡು ಬಿಡುತ್ತಾರೆ. ಪರಿಣಾಮ ಎಪಿಎಂಸಿ ಆವರಣವು ಅನೈತಿಕ ಚಟುವಟಿಕೆಗಳ ತಾಣವಾಗಿ ಪರಿಣಮಿಸಿದೆ.
ಹರಾಜು ಕಟ್ಟೆಯ ಉದ್ದಗಲಕ್ಕೂ ಮದ್ಯದ ಬಾಟಲಿಗಳು, ಟ್ರೆಟ್ಟಾ ಪ್ಯಾಕ್‌ಗಳು, ನೀರಿನ ಬಾಟಲ್ ಹಾಗೂ ಪ್ಲಾಸ್ಟಿಕ್ ಮತ್ತು ಕಾಗದದ ಪದಾರ್ಥಗಳು ಸೇರಿದಂತೆ ಆಹಾರ ತ್ಯಾಜ್ಯ ಬಿದ್ದಿದ್ದು, ಸಾರ್ವಜನಿಕರು ಇತ್ತ ಮುಖ ಹಾಕಲು ಅಸಹ್ಯ ಪಡುವಂತಾಗಿದೆ.
ಇದೇ ಹರಾಜು ಕಟ್ಟೆ ಬಳಿ ಮಂಗಳವಾರ ಬೆಳಗ್ಗೆ ಮುಂಜಾನೆಯಿಂದಲೇ ಬೆಣ್ಣೆ ವ್ಯಾಪಾರ ನಡೆಯಲಿದೆ. ಬೆಣ್ಣೆ ವ್ಯಾಪಾರದ ಸಲುವಾಗಿ ಮಹಿಳೆಯರೇ ಹೆಚ್ಚು ಆಗಮಿಸಲಿದ್ದು, ಆವರಣದ ಸ್ಥಿತಿ ಕಂಡು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸಿ ಮದ್ಯವ್ಯಸನಿಗಳ ಅಕ್ರಮ ಪ್ರವೇಶಕ್ಕೆ ಕಡಿವಾಣ ಹಾಕುವ ಮೂಲಕ ಎಪಿಎಂಸಿ ಆವರಣದ ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂಬುದು ಸಾರ್ವಜನಿಕರ ಮನವಿಯಾಗಿದೆ.