ಸಾಹಿತಿ ಕೋಟಿಗಾನಹಳ್ಳಿ ರಾಮಯ್ಯ ಮೇಲೆ ಹಲ್ಲೆ ನಡೆಸಿದವರನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಶಿಕಾರಿಪುರ ಗುಡಿ ಸಾಂಸ್ಕೃತಿಕ ಕೇಂದ್ರದಿಂದ ಶುಕ್ರವಾರ ತಹಸೀಲ್ದಾರ್‌ಗೆ ಮನವಿ ಸಲ್ಲಿಸಲಾಯಿತು. ಇಕ್ಬಾಲ್ ಅಹ್ಮದ್, ಕೆ.ಎಸ್.ಹುಚ್ರಾಯಪ್ಪ, ವಕೀಲ ಸತ್ಯನಾರಾಯಣ, ಬನ್ನೂರು ಮಂಜಪ್ಪ, ಮಾಲತೇಶ್ ಇದ್ದರು.  
ಜಿಲ್ಲೆ

ಕೋಟಿಗಾನಹಳ್ಳಿ ರಾಮಯ್ಯ ಮೇಲಿನ ಹಲ್ಲೆ ಖಂಡನೀಯ

ಶಿಕಾರಿಪುರ: ಸಾಹಿತಿ ಕೋಟಿಗಾನಹಳ್ಳಿ ರಾಮಯ್ಯ ಮತ್ತು ಅವರ ಪುತ್ರನ ಮೇಲೆ ಹಲ್ಲೆ ನಡೆಸಿದವರನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಗುಡಿ ಸಾಂಸ್ಕೃತಿಕ ಕೇಂದ್ರ, ಸಾಹಿತಿ ಕೋಟಿಗಾನಹಳ್ಳಿ ರಾಮಯ್ಯ ಅಭಿಮಾನಿ ಬಳಗ ಹಾಗೂ ಪ್ರಗತಿಪರ ಚಿಂತಕರಿಂದ ತಹಸೀಲ್ದಾರ್‌ಗೆ ಮನವಿ ಸಲ್ಲಿಸಲಾಯಿತು.

ಕೋಟಿಗಾನಹಳ್ಳಿ ರಾಮಯ್ಯ ಅವರು ಗುಡಿ ಸಾಂಸ್ಕೃತಿಕ ಕೇಂದ್ರಕ್ಕಾಗಿ 20ಕ್ಕೂ ಹೆಚ್ಚು ನಾಟಕ ಬರೆದಿದ್ದಾರೆ. ಸಿನಿಮಾ ಕಥೆ, ಸಂಭಾಷಣೆಗಳನ್ನು ಬರೆದಿದ್ದಾರೆ. ರಾಜ್ಯ ಪ್ರಶಸ್ತಿ ಲಭಿಸಿದ್ದು, 100ಕ್ಕೂ ಹೆಚ್ಚು ಬೀದಿ ನಾಟಕಗಳನ್ನು ರಚಿಸಿದ್ದು, ಇತಂಹ ಹಿರಿಯ ಸಾಹಿತಿಗಳ ಮೇಲೆ ಹಲ್ಲೆ ನಡೆಸಿರುವುದು ಖಂಡನೀಯ ಎಂದು ಗುಡಿ ಸಾಂಸ್ಕೃತಿಕ ಕೇಂದ್ರದ ಸಂಸ್ಥಾಪಕ ಇಕ್ಬಾಲ್ ಅಹ್ಮದ್ ವಿಷಾದ ವ್ಯಕ್ತಪಡಿಸಿದರು.
ಕೋಟಿಗಾನಹಳ್ಳಿ ರಾಮಯ್ಯ ಬುಡ್ಡಿ ದೀಪ ಎಂಬ ಸಂಸ್ಥೆ ಕಟ್ಟಿಕೊಂಡು ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸುವ ಕೆಲಸ ಮಾಡುತ್ತಿದ್ದು, ಪ್ರಗತಿಪರ ಚಿಂತಕರಾಗಿದ್ದಾರೆ. ನಾಟಕ ರಚಿಸುವಾಗ ಸಮೀಪದ ದೇವಸ್ಥಾನದಲ್ಲಿ ಧ್ವನಿವರ್ಧಕ ಶಬ್ಧ ಹೆಚ್ಚಾಗಿದ್ದರಿಂದ ಕಡಿಮೆ ಮಾಡುವಂತೆ ರಾಮಯ್ಯ ಹಾಗೂ ಅವರ ಪುತ್ರ ಕೋರಿದ್ದಕ್ಕೆ ಅವರ ಮೇಲೆ ಹಲ್ಲೆ ನಡೆಸಿದ್ದು ಆಕ್ಷೇಪಾರ್ಹ ಎಂದು ಕಿಡಿಕಾರಿದರು.
ಕೋಟಿಗಾನಹಳ್ಳಿ ರಾಮಯ್ಯ ಅಭಿಮಾನಿ ಬಳಗದ ಸಂಚಾಲಕ ಕೆ.ಎಸ್.ಹುಚ್ರಾಯಪ್ಪ ಮಾತನಾಡಿ, ಪ್ರಗತಿಪರ ಚಿಂತಕರು, ಸಾಹಿತಿಗಳು, ಕಲಾವಿದರನ್ನು ಅವಮಾನಿಸುವುದು, ಅವರ ಮೇಲೆ ಹಲ್ಲೆ ನಡೆಸುವುದು ಹೆಚ್ಚಾಗುತ್ತಿದೆ. ಸರ್ಕಾರಗಳು ಸೂಕ್ತ ಭದ್ರತೆ ನೀಡಬೇಕು ಹಾಗೂ ಹಲ್ಲೆ ನಡೆಸಿದವರನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ವಕೀಲ ಸತ್ಯನಾರಾಯಣ, ಬನ್ನೂರು ಮಂಜಪ್ಪ, ಮಾಲತೇಶ್ ಇದ್ದರು.