ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಮತ್ತೆ ರೌಡಿಗಳು ಅಟ್ಟಹಾಸ ಮೆರೆದಿದ್ದು, ಹುಟ್ಟುಹಬ್ಬದ ಸಂಭ್ರಮದಲ್ಲಿದ್ದ ಬಿಜೆಪಿ ಕಾರ್ಯಕರ್ತನನ್ನು ಶುಕ್ರವಾರ ಮುಂಜಾನೆ ಮಾರಕಾಸ್ತ್ರದಿಂದ ಕೊಚ್ಚಿ ಕೊಲೆ ಮಾಡಿದ್ದಾರೆ.
ಕುವೆಂಪುನಗರದ ಲಲಿತಾದ್ರಿ ರಸ್ತೆಯ ಚಂದನ ಮ್ಯಾನ್‌ಷನ್ ಎಂಬ ಸರ್ವಿಸ್ ಅಪಾರ್ಟ್‌ಮೆಂಟ್‌ನಲ್ಲಿ ಬಿಜೆಪಿ ಕಾರ್ಯಕರ್ತ ಆನಂದ್ ಅಲಿಯಾಸ್ ವಡ್ಡ(40)ನನ್ನು ಕೊಲೆ ಮಾಡಲಾಗಿದೆ.
ಘಟನಾ ಸ್ಥಳಕ್ಕೆ ಕುವೆಂಪುನಗರ ಠಾಣಾ ಪೊಲೀಸರು ಭೇಟಿ ನೀಡಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ. ನಗರ ಪೊಲೀಸ್ ಆಯುಕ್ತ ಚಂದ್ರಗುಪ್ತ, ಡಿಸಿಪಿ ಪ್ರಕಾಶ್‌ಗೌಡ, ಕುವೆಂಪುನಗರ ಪೊಲೀಸ್ ಠಾಣಾ ಇನ್ಸ್‌ಪೆಕ್ಟರ್ ರಾಜು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಜನತಾನಗರ ನಿವಾಸಿಯಾಗಿದ್ದ ಆನಂದ್ ರಿಯಲ್ ಎಸ್ಟೇಟ್ ಹಾಗೂ ಫೈನಾನ್ಸ್ ನಡೆಸುತ್ತಿದ್ದ. ಹಳೇ ವೈಷಮ್ಯದ ಹಿನ್ನೆಲೆಯಲ್ಲಿ ಕೊಲೆಯಾಗಿರುವ ಶಂಕೆ ವ್ಯಕ್ತವಾಗಿದೆ. ಕಳೆದ 13 ವರ್ಷಗಳ ಹಿಂದೆ ಕೊಲೆ ಪ್ರಕರಣವೊಂದರಲ್ಲಿ ಆನಂದ್ ಕೂಡ ಆರೋಪಿಯಾಗಿದ್ದು, ಕೆಲಕಾಲ ಜೈಲುವಾಸ ಅನುಭವಿಸಿದ್ದ. ಆದರೆ, ಸಾಕ್ಷಾೃಧಾರ ಕೊರತೆಯಿಂದ ಆನಂದ್ ವಿರುದ್ಧ ಕೊಲೆ ಪ್ರಕರಣ ವಜಾ ಆಗಿತ್ತು.
ಏನಿದು ಘಟನೆ: ಗುರುವಾರ ಉತ್ತನಹಳ್ಳಿಯ ತ್ರಿಪುರ ಸುಂದರಿ ಜ್ವಾಲಾಮುಖಿ ಹಾಲ್‌ನಲ್ಲಿ ಆನಂದ್ ತನ್ನ 40ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾನೆ. ಬಿಜೆಪಿ ಮುಖಂಡ ಮಾರುತಿರಾವ್ ಪವಾರ್ ಸೇರಿದಂತೆ 500ಕ್ಕೂ ಹೆಚ್ಚು ಜನ ಪಾರ್ಟಿಯಲ್ಲಿ ಭಾಗಿಯಾಗಿ ಆನಂದ್‌ಗೆ ಶುಭ ಕೋರಿದ್ದಾರೆ. ರಾತ್ರಿ 2 ಗಂಟೆವರೆಗೂ ಅಲ್ಲಿ ಭರ್ಜರಿ ಪಾರ್ಟಿ ನಡೆದಿದೆ. ಬಳಿಕ ಆನಂದ್ ಮತ್ತು ಆತನ ಜತೆಯಲ್ಲಿದ್ದ 6 ಗೆಳೆಯರು ಕುವೆಂಪುನಗರದ ಸರ್ವಿಸ್ ಅಪಾರ್ಟ್‌ಮೆಂಟ್‌ಗೆ ಬಂದಿದ್ದು, ಸಮೀಪದಲ್ಲಿದ್ದ ಪಾರ್ಕ್‌ಗೆ ತೆರಳಿ ಕುಡಿದು ಅವರವರೆ ಗಲಾಟೆ ಮಾಡಿಕೊಂಡಿದ್ದಾರೆ. ನಂತರ ರೂಮ್‌ಗೆ ಹೋಗಿ ಕುಡಿಯಲು ಪ್ರಾರಂಭಿಸಿದ್ದಾರೆ. ಈ ವೇಳೆ ಮತ್ತೆ ಅಲ್ಲಿದ್ದವರಲ್ಲೇ ಗಲಾಟೆ ಆರಂಭವಾಗಿದೆ. ಆಗ ಬಾಟಲ್‌ನಲ್ಲಿ ಚುಚ್ಚಿ ಕೊಲೆ ಮಾಡಿದ್ದಾರೆ.
ಆನಂದ್ ಜತೆ ಯಾರ‌್ಯಾರು ಇದ್ದರು ಎಂಬ ಮಾಹಿತಿ ಗೊತ್ತಾಗಿದೆ. ಅವರೆಲ್ಲರನ್ನು ಹಿಡಿದು ವಿಚಾರಣೆ ಮಾಡುತ್ತೇವೆ. ಯಾವ ಕಾರಣಕ್ಕೆ ಕೊಲೆಯಾಗಿದೆ, ಯಾರು ಕೊಲೆ ಮಾಡಿದರು ಎಂಬುದನ್ನು ಈಗಲೇ ಹೇಳೋದಕ್ಕೆ ಆಗೋದಿಲ್ಲ. ಕೊಲೆಯಾದ ವ್ಯಕ್ತಿಯ ಮಾಹಿತಿ ಕಲೆ ಹಾಕುತ್ತಿದ್ದೇವೆ. ಮುಂಜಾನೆ 3 ರಿಂದ 4 ಗಂಟೆ ವೇಳೆಯಲ್ಲಿ ಆನಂದ್ ಕೊಲೆಯಾಗಿದೆ ಎಂದು ಪೊಲೀಸ್ ಆಯುಕ್ತ ಚಂದ್ರಗುಪ್ತ ತಿಳಿಸಿದ್ದಾರೆ.