ಸೋಮವಾರಪೇಟೆಯಲ್ಲಿ ಇತ್ತೀಚೆಗೆ ನಡೆದ ದರೋಡೆ ಪ್ರಕರಣವನ್ನು ಬೇಧಿಸಿ ಅರೋಪಿಗಳನ್ನು ಬಂಧಿಸಿ, ಹಣವನ್ನು ವಶಪಡಿಸಿಕೊಂಡಿರುವ ಪೊಲೀಸ್ ತಂಡ. ಸುಂದರ್‌ರಾಜ್, ಗಂಗಾಧರಪ್ಪ, ಮುದ್ದುಮಾದೇವ, ಗೋಪಾಲ ಇದ್ದರು. 
ಜಿಲ್ಲೆ

ದಂಪತಿ ದರೋಡೆ ಮಾಡಿದ್ದ ಏಳು ಜನರ ಬಂಧನ

ಸೋಮವಾರಪೇಟೆ: ಪಟ್ಟಣದ ಸಮೀಪದ ಗ್ರಾಮೀಣ ರಸ್ತೆಯಲ್ಲಿ ದಂಪತಿಗೆ ಖಾರದ ಪುಡಿ ಎರಚಿ ನಗದು ದರೋಡೆ ಮಾಡಿದ್ದ ನಾಲ್ವರು ಅಂತರ ಜಿಲ್ಲಾ ಹಾಗೂ ಜಿಲ್ಲೆಯ ಮೂವರು ಅರೋಪಿಗಳನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಕುದುಮಾರು ಗ್ರಾಮದ, ವೃತ್ತಿಯಲ್ಲಿ ಚಾಲಕನಾದ ಕೆ.ರೋಷನ್, ಕನ್ಯಾನ ಗ್ರಾಮದ ಕೃಷಿಕ ಸತೀಶ್ ರೈ, ವಿಟ್ಲ ಪಡ್ನೂರು ಗ್ರಾಮದ ಪೇಂಟರ್ ಕೆ.ಗಣೇಶ್, ವೀರಕಂಬ ಗ್ರಾಮದ ಕಾರ್ಮಿಕ ಕುಸುಮಕರ, ವಿರಾಜಪೇಟೆ ಪಟ್ಟಣದ ಶಿವಕೇರಿ ಅರ್ಚಕ ಸೂರ್ಯಪ್ರಸಾದ್ ಭಟ್ಟ, ಸೋಮವಾರಪೇಟೆ ವೆಂಕಟೇಶ್ವರ ಬ್ಲಾಕ್‌ನ ಮರದ ವ್ಯಾಪಾರಿ ಎಚ್.ಪಿ.ವಿನೋದ್ ಕುಮಾರ್, ಹೆಬ್ಬಾಲೆ ಗ್ರಾಮದ ಕಾರ್ಮಿಕ ಬಿ.ಮೋಹನ್‌ಕುಮಾರ್ ಬಂಧಿತರು.

ಜುಲೈ 29ರಂದು ರಾತ್ರಿ ಪಟ್ಟಣದ ಅನುಷಾ ಮಾರ್ಕೆಟಿಂಗ್ ಏಜೆನ್ಸಿ ಮಾಲಿಕರಾದ ನೇಮರಾಜ್ ಮತ್ತು ಪತ್ನಿ ಆಶಾ ಅವರು ಸ್ಕೂಟರ್‌ನಲ್ಲಿ 6.18 ಲಕ್ಷ ರೂ. ನಗದನ್ನು ಮನೆಗೆ ತೆಗೆದುಕೊಂಡು ಹೋಗುತ್ತಿದ್ದ ಸಂದರ್ಭ ಕಿಬ್ಬೆಟ್ಟ ರಸ್ತೆಯಲ್ಲಿ ಕಾರು ಮತ್ತು ಬೈಕ್‌ನಲ್ಲಿ ಬಂದ ಅರೋಪಿಗಳು ಸ್ಕೂಟರ್‌ಅನ್ನು ಅಡ್ಡಗಟ್ಟಿ ನೇಮರಾಜ್ ಮುಖಕ್ಕೆ ಖಾರದ ಪುಡಿ ಎರಚಿ, ಪತ್ನಿಯ ತಲೆಗೆ ಹಲ್ಲೆ ಮಾಡಿ ನೆಲಕ್ಕೆ ಬೀಳಿಸಿ, ಹಣವಿದ್ದ ಬ್ಯಾಗ್ ಕಿತ್ತುಕೊಂಡು ಪರಾರಿಯಾಗಿದ್ದರು.

ಈ ಕುರಿತು ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ಆರಂಭಿಸಿದ ಪೊಲೀಸರು ಅರೋಪಿಗಳಿಂದ 3,02,000 ರೂ. ನಗದು ವಶಪಡಿಸಿಕೊಳ್ಳಲಾಗಿದೆ. ಕೃತ್ಯಕ್ಕೆ ಬಳಿಸಿದ ಎರಡು ಕಾರುಗಳು, 9 ಮೊಬೈಲ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಗಳಾದ ರೋಷನ್, ಸತೀಶ್ ರೈ, ಗಣೇಶ, ಕುಸುಮಕರ ವಿರುದ್ಧ ಈ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಠಾಣೆಗಳಲ್ಲಿ ಕೊಲೆ, ಕೊಲೆ ಯತ್ನ, ಕಿಡ್ನಾಪ್ ಸೇರಿದಂತೆ ಹಲವು ಪ್ರಕರಣ ದಾಖಲಾಗಿವೆ.

ಘಟನೆ ನಡೆದ ದಿನದಂದು ಸ್ಥಳಕ್ಕೆ ಎಸ್‌ಪಿ ಕೆ.ರಾಮರಾಜನ್ ಭೇಟಿ ನೀಡಿ ಪರಿಶೀಲಿಸಿ, ಅರೋಪಿಗಳ ಬಂಧನಕ್ಕೆ ಎಎಸ್‌ಪಿ ಸುಂದರ್‌ರಾಜ್, ಡಿವೈಎಸ್‌ಪಿ ಗಂಗಾಧರಪ್ಪ ನೇತೃತ್ವದ ವಿಶೇಷ ತನಿಖಾ ತಂಡ ರಚಿಸಿದ್ದರು. ಪ್ರಕರಣ ನಡೆದು 9 ದಿನಗಳಲ್ಲೇ ಅರೋಪಿಗಳ ಹೆಡೆಮುರಿ ಕಟ್ಟಿರುವ ಪೊಲೀಸರು ಸಾರ್ವಜನಿಕರ ಪ್ರಶಂಶೆಗೆ ಪಾತ್ರರಾಗಿದ್ದಾರೆ. ಸೋಮವಾರಪೇಟೆ ಠಾಣೆಯ ಇನ್ಸ್‌ಪೆಕ್ಟರ್ ಮುದ್ದು ಮಾದೇವ, ಪಿಎಸ್‌ಐ ಗೋಪಾಲ ಅವರು ತನಿಖೆ ಮುಂದುವರಿಸಿದ್ದಾರೆ.