ಜಿಲ್ಲೆ

ಆರ್ಯರು ಹೊರಗಿನವರು ಎಂಬ ವಾದ ಸರಿಯಲ್ಲ: ಎಸ್.ಎಲ್.ಭೈರಪ್ಪ

ಮೈಸೂರು: ಆರ್ಯರು ಹೊರಗಿನವರು ಎಂಬ ವಾದವನ್ನೇ ಈಗಲೂ ಮಂಡಿಸುತ್ತಾರೆ. ಬ್ರಿಟಿಷರು ಬರೆದ ಇತಿಹಾಸವನ್ನೇ ಇಂದಿಗೂ ಓದುವಂತಾಗಿದ್ದು, ಅದು ಬದಲಾಗಬೇಕು ಎಂದು ಸಾಹಿತಿ ಎಸ್.ಎಲ್.ಭೈರಪ್ಪ ಪ್ರತಿಪಾದಿಸಿದರು.


ನಗರದ ಖಾಸಗಿ ಹೋಟೆಲ್‌ನಲ್ಲಿ ಗುರುವಾರ ತಮ್ಮ ವಂಶವೃಕ್ಷ ಕಾದಂಬರಿಯ ತಮಿಳು ಅವತರಿಣಿಕೆ ‘ವಂಶವೃಕ್ಷಂ’ ಅನುವಾದಿತ ಕೃತಿಯನ್ನು ಬಿಡುಗಡೆ ಮಾಡಿ ಮಾತನಾಡಿದರು.


ಭಾರತೀಯ ತತ್ವಶಾಸ್ತ್ರವನ್ನು ಸರಿಯಾಗಿ ಅರ್ಥ ಮಾಡಿಕೊಂಡು ಬರೆದವರು ಜರ್ಮನ್ ದೇಶದ ವಿದ್ವಾಂಸರು. ಸಾಮ್ರಾಜ್ಯ ರಕ್ಷಣೆಗಾಗಿ ಬ್ರಿಟಿಷರು ಭಾರತೀಯ ಇತಿಹಾಸ, ತತ್ವಶಾಸ್ತ್ರ ಎಲ್ಲವನ್ನೂ ತಮಗೆ ಅನುಕೂಲವಾಗುವಂತೆ ರಚಿಸಿಕೊಂಡಿದ್ದರು. ಹೀಗಾಗಿ, ಆರ್ಯರು ಹೊರಗಿನವರು ಎಂಬ ವಾದ ಈಗಲೂ ಪ್ರಚಲಿತವಾಗಿದೆ. ಇದು ಸರಿಯಲ್ಲ ಎಂದರು.


ಹಿಂದು ಕಾನೂನುಗಳನ್ನು ಅರ್ಥೈಸಿಕೊಳ್ಳಲು, ವಾದ ಹಾಗೂ ತೀರ್ಪು ನೀಡಲು ಮುಲ್ಲಾ ಆ್ಯಂಡ್ ಮುಲ್ಲಾ ಅವರ ಕೃತಿಯನ್ನೇ ಹಿಂದೆಲ್ಲ ವಕೀಲರು ಹಾಗೂ ನ್ಯಾಯಾಧೀಶರು ಅಧ್ಯಯನ ಮಾಡುತ್ತಿದ್ದರು. ಆ ಕೃತಿ ಅಧ್ಯಯನಕ್ಕೆ ಸಾಕಾಗುತ್ತಿರಲಿಲ್ಲ. ವಂಶವೃಕ್ಷ ಕಾದಂಬರಿ ಓದಿದರೆ ಹಿಂದು ಕಾನೂನುಗಳು ಸರಿಯಾಗಿ ಅರ್ಥವಾಗುತ್ತವೆಂದು ಮುಖ್ಯ ನ್ಯಾಯಮೂರ್ತಿ ಗೋವಿಂದ ಭಟ್ ಬೆಂಗಳೂರಿನ ಕಾರ್ಯಕ್ರಮವೊಂದರಲ್ಲಿ ಹೇಳಿದ್ದರು ಎಂದು ತಿಳಿಸಿದರು.


ಹಿಂದು ಕಾನೂನು ಸರಿಯಾಗಿ ಅರ್ಥ ಮಾಡಿಕೊಳ್ಳಲು ಪಿ.ವಿ.ಕಾಣೆ ಅವರ ಹಿಸ್ಟರಿ ಆಫ್ ಧರ್ಮಶಾಸ್ತ್ರ ಓದಬೇಕು. 10 ಸಂಪುಟಗಳನ್ನು ಬರೆಯಲು ಅವರು 4 ದಶಕ ತೆಗೆದುಕೊಂಡಿದ್ದರು ಎಂದರು.


ದೇಶದ ಎಲ್ಲ ಭಾಷೆಗಳಿಗೂ ನನ್ನ ಬಹುತೇಕ ಕಾದಂಬರಿಗಳು ತರ್ಜುಮೆಗೊಂಡಿವೆ. ಆದರೆ, ತಮಿಳಿಗೆ ಹೆಚ್ಚಾಗಿ ಅನುವಾದವಾಗಿಲ್ಲ. ಈಗ ಈ ಭಾಷೆಯಲ್ಲೂ ಪುಸ್ತಕ ಬಂದಿರುವುದು ಸಂತೋಷವನ್ನು ತಂದಿದೆ. ಯಾವುದೇ ಭಾಷೆಗೂ ನನ್ನ ಕೃತಿಯ ಅನುವಾದಕ್ಕೆ ಸುಮ್ಮನೆ ಅನುಮತಿ ನೀಡಲ್ಲ.

ಮೊದಲು ಆಲೋಚನೆ ಮಾಡುತ್ತೇನೆ. ವಂಶವೃಕ್ಷ ಕಾದಂಬರಿಯನ್ನು ತಮಿಳಿಗೆ ಅನುವಾದ ಮಾಡಲು ನಲ್ಲತಂಬಿ ಬಂದಿದ್ದಾರೆ. ಬಹಳ ಚೆನ್ನಾಗಿ ಮಾಡುತ್ತಾರೆ. ಒಪ್ಪಿಗೆಕೊಡಿ ಎಂದು ಸ್ನೇಹಿತ ಡಾ.ಚಂದ್ರಶೇಖರ್ ಕೇಳಿಕೊಂಡರು. ಬಳಿಕ ಅನುಮತಿ ಕೊಟ್ಟೆ ಎಂದರು.


ಅನುವಾದಕ ಕೆ.ನಲ್ಲತಂಬಿ ಮಾತನಾಡಿ, ಕನ್ನಡ ಕೃತಿ ಬಿಡುಗಡೆಯಾದ 64 ವರ್ಷದ ನಂತರ ವಂಶವೃಕ್ಷ ತಮಿಳಿನಲ್ಲಿ ತರ್ಜುಮೆ ಆಗಿದೆ. ನನ್ನ 51ನೇ ಅನುವಾದಿತ ಕೃತಿ ಬಿಡುಗಡೆಯು ನಾನು ಓದಿದ ಮೈಸೂರಿನಲ್ಲೇ ನಡೆದಿರುವುದು ಸಂತಸ ತಂದಿದೆ ಎಂದರು.


ಲೇಖಕ ಪಾವಣ್ಣನ್, ಜೀರೊ ಡಿಗ್ರಿ ಪ್ರಕಾಶನದ ರಾಮ್‌ಜೀ ನರಸಿಂಹನ್, ಆರ್.ಗಾಯತ್ರಿ ಹಾಜರಿದ್ದರು.