ಜಿಲ್ಲೆ

ಗಬ್ಬು ನಾರುತ್ತಿದೆ ಎಪಿಎಂಸಿ ಆವರಣ

ಬೆಂಗಳೂರು ಗ್ರಾಮಾಂತರ ಡೆಸ್ಕ್

ಕಂಡಕಂಡಲ್ಲಿ ಕಸದ ರಾಶಿ | ಮೂಗುಮುಚ್ಚಿಕೊಂಡು ಓಡಾಡುವ ಸ್ಥಿತಿ ನಿರ್ಮಾಣ

ಆನೇಕಲ್: ಹೇಳಿಕೊಳ್ಳೋಕೆ ರಾಜ್ಯದ ಅತಿದೊಡ್ಡ ಹಣ್ಣಿನ ಮಾರುಕಟ್ಟೆ. ಇಲ್ಲಿಗೆ ನಿತ್ಯ ಸಾವಿರಾರು ಜನರು ಬರುತ್ತಾರೆ, ಕೋಟ್ಯಂತರ ರೂಪಾಯಿ ವಹಿವಾಟು ನಡೆಯುತ್ತದೆ. ಆದರೆ ಈ ಎಪಿಎಂಸಿ ಆವರಣದಲ್ಲಿ ಮೂಲ ಸೌಕರ್ಯ ಮರೀಚಿಕೆಯಾಗಿದ್ದು, ಎಲ್ಲಿ ನೋಡಿದರೂ ಕಸದ ರಾಶಿ, ಗೊಬ್ಬುನಾರುತ್ತಿರುವ ವಾತಾವರಣ. ಒಟ್ಟಿನಲ್ಲಿ ಇದೊಂದು ಅವ್ಯವಸ್ಥೆಯ ಆಗರವಾಗಿದೆ.

ತಾಲೂಕಿನ ಸಿಂಗೇನ ಅಗ್ರಹಾರದಲ್ಲಿನ ಎಪಿಎಂಸಿಯ ಹಣ್ಣಿನ ಮಾರುಕಟ್ಟೆ ಸಮಸ್ಯೆಗಳ ಆಗರವಾಗಿದ್ದು, ಹಲವು ದಿನಗಳಿಂದ ಕಸದ ರಾಶಿ ತೆಗೆಯದ ಕಾರಣ ಹಣ್ಣಿನ ತ್ಯಾಜ್ಯ ಕೊಳೆತು ಗಬ್ಬುನಾರುವುದು ಸಾಮಾನ್ಯವಾಗಿದೆ. ದುರ್ವಾಸನೆಗೆ ಮೂಗು ಮುಚ್ಚಿಕೊಂಡ ಓಡಾಡುವ ಪರಿಸ್ಥಿತಿ ಇದೆ. ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದ ಕಾರಣ ತ್ಯಾಜ್ಯ ನೀರು ಅಂಗಡಿಗಳ ಮುಂದೆ ರಸ್ತೆಯಲ್ಲಿ ಹರಿಯುತ್ತಿರುವುದು ಮಾರುಕಟ್ಟೆಯನ್ನು ಅವ್ಯವಸ್ಥೆಯ ಆಗರವಾಗಿಸಿದೆ.

ಈ ಕಸದ ರಾಶಿ ಮಧ್ಯೆಯೇ ರೈತರು, ವರ್ತಕರು ವಹಿವಾಟು ಮಾಡುವ ಸ್ಥಿತಿ ನಿರ್ಮಾಣವಾಗಿದೆ. ರೈತರು ಹಣ್ಣುಗಳನ್ನು ಲೋಡ್ ಮಾಡಿಕೊಂಡು ರಾತ್ರಿ ವೇಳೆ ಮಾರುಕಟ್ಟೆಗೆ ಬರುತ್ತಾರೆ. ಅವರಿಗೆ ಉಳಿದುಕೊಳ್ಳುವುದಕ್ಕೆ ಸರಿಯಾದ ವ್ಯವಸ್ಥೆ ಇಲ್ಲ. ಜತೆಗೆ ರೈತರಿಗೆ ಬೆಂಬಲ ಬೆಲೆಯೂ ಸಿಗುತ್ತಿಲ್ಲ. ವರ್ತಕರು ಕೇಳಿದ್ದಷ್ಟಕ್ಕೆ ಕೊಟ್ಟು ಹೋಗುವಂತ ಪರಿಸ್ಥಿರಿ ಇದೆ. ಕೂಲಿ ಮಾಡುವವರಿಗೂ ವಿಶ್ರಾಂತಿ ಪಡೆಯಲು ಸ್ಥಳವಿಲ್ಲ. ಒಟ್ಟಾರೆ ರೈತರು, ಮಂಡಿ ವ್ಯಾಪಾರಿಗಳು, ಕೂಲಿ ಕಾರ್ಮಿಕರು ಅವ್ಯವಸ್ಥೆಯಿಂದ ಕಂಗಾಲಾಗಿದ್ದಾರೆ.

ಎಪಿಎಂಸಿ ಅಧಿಕಾರಿಗಳ ನಿರ್ಲಕ್ಷ್ಯ: ಮಾರುಕಟ್ಟೆಯಲ್ಲಿ 400ಕ್ಕೂ ಹೆಚ್ಚು ಹಣ್ಣಿನ ಮಳಿಗೆಗಳಿದ್ದು, ಇಲ್ಲಿಗೆ ಹೊರರಾಜ್ಯಗಳಿಂದಲೂ ರೈತರು ಹಣ್ಣಗಳನ್ನು ತಂದು ಮಾರಾಟ ಮಾಡುತ್ತಾರೆ. ರೈತರು ಹಾಗೂ ವರ್ತಕರಿಂದ ಸರ್ಕಾರಕ್ಕೆ ಪ್ರತಿನಿತ್ಯ ಕೋಟಿಗಟ್ಟಲೆ ಆದಾಯ ಹೋಗುತ್ತದೆ. ಆದರೆ, ರೈತರಿಗೆ ಮೌಲಸೌಕರ್ಯ ಹಾಗೂ ಮಾರುಕಟ್ಟೆಗೆ ಬರುವ ವಾಹನಗಳಿಗೆ ಸೂಕ್ತ ಪಾರ್ಕಿಂಗ್ ವ್ಯವಸ್ಥೆ ಇಲ್ಲವಾಗಿದೆ. ಇಷ್ಟೆಲ್ಲ ರಾಶಿ ರಾಶಿ ಸಮಸ್ಯೆಗಳಿದ್ದರೂ ಕೂಡ ಎಪಿಎಂಸಿ ಅಧಿಕಾರಿಗಳು ದಿವ್ಯ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ರೈತರು, ವರ್ತಕರು ಆಕ್ರೋಶ ಹೊರಹಾಕಿದ್ದಾರೆ.

ಹುಸ್ಕೂರು ಹಣ್ಣಿನ ಮಾರುಕಟ್ಟೆ ರಾಜ್ಯದಲ್ಲೇ ಖ್ಯಾತಿ ಪಡೆದಿದೆ. ಆದರೆ ಇಲ್ಲಿ ಮೂಲಸೌಕರ್ಯಗಳೇ ಇಲ್ಲ. ಪ್ರತಿದಿನ ಇಲ್ಲಿಗೆ ಬರುವ ವ್ಯಾಪಾರಸ್ಥರು ಕೊಳಚೆಯಲ್ಲಿ ನಿಂತು ಹಣ್ಣು ಖರೀದಿ ಮಾಡಿ ಹೋಗಬೇಕಾದ ಪರಿಸ್ಥಿತಿ ಇದೆ.ರವೀಂದ್ರ, ಹಣ್ಣಿನ ವ್ಯಾಪಾರಿಹುಸ್ಕೂರು ಹಣ್ಣಿನ ಮಾರುಕಟ್ಟೆಗೆ ಪ್ರತಿದಿನ ಪತಿಯ ಜತೆ ಬಂದು ಹಣ್ಣು ಖರೀದಿ ಮಾಡಿ ಬೆಂಗಳೂರಿಗೆ ತೆಗೆದುಕೊಂಡು ಹೋಗುತ್ತೇವೆ. ಆದರೆ, ಇಲ್ಲಿ ವಾಹನ ಒಳಗೆ ನಿಲ್ಲಿಸಲು ಸಾಧ್ಯ ಆಗದ ಪರಿಸ್ಥಿತಿ ಇದೆ. ಮೂಲಸೌಕರ್ಯಗಳೇ ಇಲ್ಲ.ಶಾಂತಮ್ಮ, ಹಣ್ಣಿನ ವ್ಯಾಪಾರಿ