ಸಿದ್ದಾಪುರ: ಕಾಫಿ ನಾಡು ಕಟ್ಟಡ ಕಾರ್ಮಿಕ ಸಂಘಟನೆಯ 2022-23ನೇ ಸಾಲಿನ ವಾರ್ಷಿಕ ಮಹಾಸಭೆಯನ್ನು ಜ.21ರ ಭಾನುವಾರ ನಡೆಸಲು ತೀರ್ಮಾನಿಸಲಾಗಿದೆ ಎಂದು ಜಿಲ್ಲಾಧ್ಯಕ್ಷ ಕೆ.ವಿ.ಸುನಿಲ್ ತಿಳಿಸಿದರು.
ಜಿಲ್ಲೆಯ ಕಟ್ಟಡ ಕಾರ್ಮಿಕರ ನೈಜ ಸಮಸ್ಯೆಗಳನ್ನು ಹೊತ್ತು ಹೋರಾಟ ನಡೆಸಿಕೊಂಡು ಸೌಲಭ್ಯಗಳನ್ನು ನೀಡುತ್ತಿರುವ ಎಐಟಿಯುಸಿ ಸಂಘಟನೆಯ ಕಟ್ಟಡ ಕಾರ್ಮಿಕರ ವಾರ್ಷಿಕ ಮಹಾಸಭೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಕಾರ್ಮಿಕ ವಿರೋಧಿ ನೀತಿಗಳನ್ನು ಸಂಘದ ಸದಸ್ಯರಿಗೆ ಮನವರಿಕೆ ಮಾಡಿಸುವ ಜತೆಗೆ ಕಳೆದ ಒಂದು ವರ್ಷದ ಲೆಕ್ಕಪತ್ರ ಮಂಡನೆ ಕಾರ್ಯಕ್ರಮವನ್ನು ಗುಹ್ಯ ಅಗಸ್ತ್ಯೇಶ್ವರ ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ಆಯೋಜಿಸಲಾಗಿದ್ದು ನಮ್ಮ ಸಂಘಟನೆಯ ಕಟ್ಟಡ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳುವಂತೆ ಕರೆ ನೀಡಿದರು.
ಸಂಘದ ಜಿಲ್ಲಾ ಕಾರ್ಯದರ್ಶಿ ಎಂ.ಎ.ಕೃಷ್ಣ ಮಾತನಾಡಿ, ಜಿಲ್ಲೆಯಲ್ಲಿನ ಖಾಸಗಿ ಆಸ್ಪತ್ರೆಗಳನ್ನು ಮಂಡಳಿಯಲ್ಲಿ ನೋಂದಣಿ ಮಾಡದೇ ಇರುವುದರಿಂದ ನೈಜ ಕಟ್ಟಡ ಕಾರ್ಮಿಕರು ಚಿಕಿತ್ಸಾ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ. ಅಲ್ಲದೆ ನೈಜ ಕಟ್ಟಡ ಕಾರ್ಮಿಕರ ಮಕ್ಕಳ ಶೈಕ್ಷಣಿಕ ಸೌಲಭ್ಯಗಳ ಮೇಲೆ ಕಾಂಗ್ರೆಸ್ ಸರ್ಕಾರ ಕಡಿತಗೊಳಿಸಿದ್ದು, ಜಿಲ್ಲೆಯ ಕಟ್ಟಡ ಕಾರ್ಮಿಕರು ಅನುಭವಿಸುತ್ತಿರುವ ಸಮಸ್ಯೆಗಳನ್ನು ಆಲಿಸಿ ಹೋರಾಟ ರೂಪಿಸಲು ಕ್ರಮವಹಿಲಾಗುವುದು ಎಂದರು.
ಕಟ್ಟಡ ಕಾರ್ಮಿಕ ಸಂಘಟನೆಯ ಕೆ.ವಿ.ಸುನಿಲ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಎಐಟಿಯುಸಿ ರಾಜ್ಯ ಉಪಾಧ್ಯಕ್ಷ ಅಂಜಾದ್, ಕಟ್ಟಡ ಕಾರ್ಮಿಕ ಸಂಘಟನೆ ರಾಜ್ಯ ಕಾರ್ಯದರ್ಶಿ ಗಿರೀಶ್ ತುಮಕೂರು, ಮಲೆನಾಡು ಕಟ್ಟಡ ಕಾರ್ಮಿಕ ಸಂಘಟನೆಯ ಗೌರವಾಧ್ಯಕ್ಷ ಧರ್ಮರಾಜ್ ಮೊದಲಾದವರು ಆಗಮಿಸಲಿದ್ದಾರೆ ಎಂದರು.