ರಾಯಚೂರಿನ ಕನ್ನಡ ಭವನದಲ್ಲಿ ಡಾ.ಬಸವರಾಜ ಸಬರದರ ರಾಯಚೂರು ಜಿಲ್ಲೆಯ ತತ್ತ್ವಪದಕಾರರು ಕೃತಿಯನ್ನು ಕನ್ನಡ ಅಭಿವೃದ್ಧಿ ಪ್ರಾಕಾರದ ಮಾಜಿ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ಧರಾಮಯ್ಯ ಭಾನುವಾರ ಲೋಕಾರ್ಪಣೆ ಮಾಡಿದರು. ಸಚಿವ ಎನ್.ಎಸ್.ಬೋಸರಾಜು, ಕಸಾಪ ಜಿಲ್ಲಾಧ್ಯಕ್ಷ ರಂಗಣ್ಣ ಪಾಟೀಲ್ ಅಳ್ಳುಂಡಿ, ಮಾಜಿ ಅಧ್ಯಕ್ಷ ಮಹಾಂತೇಶ ಮಸ್ಕಿ, ತಾಲೂಕು ಅಧ್ಯಕ್ಷ ವೆಂಕಟೇಶ ಬೇವಿನಬೆಂಚಿ, ಸಾಹಿತಿಗಳಾದ ಡಾ.ಚನ್ನಬಸವ ಹಿರೇಮಠ ಇದ್ದರು. 
ಜಿಲ್ಲೆ

ಪುರಾತನರು ಸನಾತನಕ್ಕೆ ವಿರುದ್ಧವಾಗಿ ಬದುಕಿದರು

ರಾಚಯ್ಯ ಸ್ವಾಮಿ

ರಾಯಚೂರು: ಪುರಾತನ ಎನ್ನುವುದು ಒಂದು ಪರಂಪರೆಯಾಗಿದ್ದು, ಸನಾತನ ಜಡತ್ವವುಳ್ಳದ್ದಾಗಿದೆ. ನಮ್ಮ ಪುರಾತನರು ಸನಾತನದ ವಿರುದ್ಧವಾಗಿ ನಡೆ, ನುಡಿಯಲ್ಲಿ ವ್ಯತ್ಯಾಸವಿಲ್ಲದಂತೆ ಬದುಕಿ ತೋರಿಸಿದ್ದಾರೆ ಎಂದು ಕನ್ನಡ ಅಭಿವೃದ್ಧಿ ಪ್ರಾಕಾರದ ಮಾಜಿ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ದರಾಮಯ್ಯ ತಿಳಿಸಿದರು.
ಸ್ಥಳೀಯ ಕನ್ನಡ ಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್‌ನಿಂದ ಭಾನುವಾರ ಹಮ್ಮಿಕೊಂಡಿದ್ದ ಸಾಹಿತಿ ಡಾ.ಬಸವರಾಜ ಸಬರದರ ರಾಯಚೂರು ಜಿಲ್ಲೆಯ ತತ್ತ್ವಪದಕಾರರು ಕೃತಿ ಲೋಕಾರ್ಪಣೆ ಮಾಡಿ ಮಾತನಾಡಿ, ವಚನ ಸಾಹಿತ್ಯ ಮತ್ತು ತತ್ತ್ವಪದ ಸಾಹಿತ್ಯಗಳು ನಮ್ಮ ಪುರಾತನ ಪರಂಪರೆಯಾಗಿವೆ ಎಂದರು.
ಇಂದು ನಾವು ಸಾಂಸ್ಕೃತಿಕವಾಗಿ, ರಾಜಕೀಯವಾಗಿ ಸರಿಯಾಗಿ ಹೆಜ್ಜೆಗಳನ್ನಿಡುತ್ತಿಲ್ಲ. ನಿಜವಾದ ಚರಿತ್ರೆಯ ಪಟ್ಟಿಯನ್ನು ಅರ್ಥ ಮಾಡಿಕೊಳ್ಳದಿದ್ದರೆ ಮುಂದಿನ ಪೀಳಿಗೆ ನಮ್ಮನ್ನು ಶಪಿಸಿಕೊಳ್ಳುವಂತಾಗಲಿದೆ. ಸಮಾಜವನ್ನು ಮುನ್ನಡೆಸುವ ಜವಾಬ್ದಾರಿ ಹೊತ್ತವರು ಅದನ್ನು ಅರ್ಥ ಮಾಡಿಕೊಳ್ಳಬೇಕಾಗಿದೆ.
ಭಾಷೆಯನ್ನು ಧರ್ಮ, ಜಾತಿಯನ್ನಿಟ್ಟುಕೊಂಡು ವ್ಯಾಖ್ಯಾಸುತ್ತಿರುವುದು ಕಳವಳಕಾರಿಯಾಗಿದೆ. ಬಹುತ್ವದ ಭಾರತಕ್ಕೆ ಎರವಾಗುವ ಸ್ಥಿತಿಯನ್ನು ಬೆಳೆಸುತ್ತಿದ್ದೇವೆ. ಈ ಬಗ್ಗೆ ಆತ್ಮಾವಲೋಕನ ಮಾಡಿಕೊಂಡು ಉತ್ತರ ಪಡೆಯಬೇಕಾದ ಸ್ಥಿತಿ ಎದುರಾಗಿದೆ.
ಕನ್ನಡ ಸಾಹಿತ್ಯ ಲೋಕದಲ್ಲಿ ಕಳೆದ ಹತ್ತು ವರ್ಷಗಳ ವಿದ್ಯಮಾನಗಳನ್ನು ನೋಡಿದಾಗ ಅವಕಾಶವಾದಿತನ ಹೆಚ್ಚಾಗಿದೆ. ಸಾಹಿತಿ ಸಾಮಾಜಿಕ ಹೊಣೆಗಾರಿಕೆ ಮತ್ತು ಉತ್ತರದಾಯಿತ್ವವನ್ನು ತೋರುವಂತಹ ಸಾಹಿತ್ಯವನ್ನು ರಚನೆ ಮಾಡಬೇಕಾಗಿದೆ ಎಂದು ಪ್ರೊ.ಎಸ್.ಜಿ.ಸಿದ್ದರಾಮಯ್ಯ ಹೇಳಿದರು.
ಸಣ್ಣ ನೀರಾವರಿ ಖಾತೆ ಸಚಿವ ಎನ್.ಎಸ್.ಬೋಸರಾಜು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಅನ್ಯ ಭಾಷೆಯ ಪ್ರಭಾವ ಹೆಚ್ಚಾಗಿರುವ ಗಡಿನಾಡು ಪ್ರದೇಶದಲ್ಲಿ ಕನ್ನಡವನ್ನು ಬೆಳೆಸುವ ಜವಾಬ್ದಾರಿ ಕಸಾಪ ಮತ್ತು ಎಲ್ಲರದ್ದಾಗಿದೆ. ಕನ್ನಡವನ್ನು ಉಳಿಸಿ ಬೆಳೆಸುವ ಕಾರ್ಯವನ್ನು ಮಾಡಬೇಕಾಗಿದ್ದು, ಅದಕ್ಕೆ ಜನಪ್ರತಿನಿಗಳ ಬೆಂಬಲ ಸದಾ ಇರುತ್ತದೆ.
ಕಸಾಪದ ಕಾರ್ಯಕ್ರಮವನ್ನು ಕಲ್ಯಾಣ ಕರ್ನಾಟಕ ಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹಮ್ಮಿಕೊಳ್ಳುವಂತೆ ಪರಿಷತ್ ರಾಜ್ಯಾಧ್ಯಕ್ಷರಿಗೆ ಮನವಿ ಮಾಡಲಾಗಿದೆ. ಕನ್ನಡ ಭವನದ ಮೇಲ್ಮಹಡಿ ನಿರ್ಮಾಣಕ್ಕೆ 50 ಲಕ್ಷ ರೂ. ಹಾಗೂ ಕರ್ನಾಟಕ ಸಂಘದಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ಒಂದು ಕೋಟಿ ರೂ. ನೀಡಲಾಗುವುದು ಎಂದು ಭರವಸೆ ನೀಡಿದರು.
ಕಸಾಪ ಮಾಜಿ ಜಿಲ್ಲಾಧ್ಯಕ್ಷ ಮಹಾಂತೇಶ ಮಸ್ಕಿ ಮಾತನಾಡಿ, ಜನರ ಬದುಕಿನಿಂದ ರಚನೆಯಾಗಿದ್ದು ತತ್ತ್ವಪದಗಳು. ಅವುಗಳಲ್ಲಿ ಜಾತ್ಯಾತೀತೆಯನ್ನು ಕಾಣಬಹುದಾಗಿದೆ. ಜತೆಗೆ ಕನ್ನಡದ ಅಸ್ಮಿಯತೆಯನ್ನು ವಚನಕಾರರು ಮತ್ತು ತತ್ತ್ವಪದಕಾರರು ತಮ್ಮ ಹಾಡುಗಳ ಮೂಲಕ ಉಳಿಸಿಕೊಂಡು ಬಂದಿದ್ದಾರೆ. 600 ವರ್ಷಗಳ ಕಾಲ ಭಾಷೆ ದಾಸ್ಯದಲ್ಲಿ ಬದುಕಿದ ನಾವು ಕನ್ನಡವನ್ನು ಉಳಿಸಿಕೊಂಡು ಬರಬೇಕಾದ ಸಂದರ್ಭದಲ್ಲಿದ್ದೇವೆ ಎಂದರು.
ಈ ಸಂದರ್ಭದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಾಹಿತಿ ರಾಮಣ್ಣ ಹವಳೆ, ಕಾಳಪ್ಪ ವಿಶ್ವಕರ್ಮರನ್ನು ಸನ್ಮಾನಿಸಿ, ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಕಸಾಪ ಜಿಲ್ಲಾಧ್ಯಕ್ಷ ರಂಗಣ್ಣ ಪಾಟೀಲ್ ಅಳ್ಳುಂಡಿ, ತಾಲೂಕು ಅಧ್ಯಕ್ಷ ವೆಂಕಟೇಶ ಬೇವಿನಬೆಂಚಿ, ಸಾಹಿತಿಗಳಾದ ಡಾ.ಚನ್ನಬಸವ ಹಿರೇಮಠ, ಡಾ.ಬಸವರಾಜ ಸಬರದ ಉಪಸ್ಥಿತರಿದ್ದರು.