ಯಕ್ಸಂಬಾದಲ್ಲಿ ಜೊಲ್ಲೆ ಶಿಕ್ಷಣ ಸಂಸ್ಥೆಯ ವಿವಿಧ ಅಂಗ ಸಂಸ್ಥೆಗಳ ವಾರ್ಷಿಕ ಸಿಬ್ಬಂದಿ ಸಭೆ, ವ್ಯಕ್ತಿತ್ವ ವಿಕಸನ ಶಿಬಿರ ಹಾಗೂ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ವಿ.ಆರ್.ಭಿವಸೆ ಅವರಿಗೆ ಉತ್ತಮ ಮುಖ್ಯಶಿಕ್ಷಕ ಪ್ರಶಸ್ತಿಯನ್ನು ಶಾಸಕಿ ಶಶಿಕಲಾ ಜೊಲ್ಲೆ , ಬಸವಪ್ರಸಾದ ಜೊಲ್ಲೆ ಕೊಡಮಾಡಿದರು. 
ಜಿಲ್ಲೆ

ಮಕ್ಕಳ ಸರ್ವಾಂಗೀಣ ಅಭಿವೃದ್ಧಿ ಶಿಕ್ಷಕರ ಆದ್ಯ ಕರ್ತವ್ಯ

ಚಿಕ್ಕೋಡಿ ಗ್ರಾಮೀಣ: ಗಡಿಭಾಗದಲ್ಲಿ ಗುಣಮಟ್ಟದ ಶಿಕ್ಷಣ ನೀಡುತ್ತಿರುವ ಜೊಲ್ಲೆ ಶಿಕ್ಷಣ ಸಂಸ್ಥೆ ಯುವ ಜನರ ಆಶಾಕಿರಣವಾಗಿದೆ. ಮಕ್ಕಳ ಸರ್ವಾಂಗೀಣ ಅಭಿವೃದ್ಧಿ ಶಿಕ್ಷಕರ ಕರ್ತವ್ಯವಾಗಿದ್ದು, ಈ ನಿಟ್ಟಿನಲ್ಲಿ ಶಿಕ್ಷಕರು, ಸಿಬ್ಬಂದಿ ಸಭೆ ಆಯೋಜನೆ ಮತ್ತು ವ್ಯಕ್ತಿತ್ವ ವಿಕಸನ ತರಬೇತಿ ಕಾರ್ಯಾಗಾರ ಅವಶ್ಯಕವಾಗಿದೆ ಎಂದು ಶಾಸಕಿ ಶಶಿಕಲಾ ಜೊಲ್ಲೆ ಹೇಳಿದರು.

ಚಿಕ್ಕೋಡಿ ತಾಲೂಕಿನ ಯಕ್ಸಂಬಾದಲ್ಲಿ ಬುಧವಾರ ಜೊಲ್ಲೆ ಶಿಕ್ಷಣ ಸಂಸ್ಥೆಯ ವಿವಿಧ ಅಂಗ ಸಂಸ್ಥೆಗಳ ವಾರ್ಷಿಕ ಸಿಬ್ಬಂದಿ ಸಭೆ, ವ್ಯಕ್ತಿತ್ವ ವಿಕಸನ ಶಿಬಿರ ಹಾಗೂ ಪ್ರಶಸ್ತಿ ವಿತರಣಾ ಸಮಾರಂಭ ಉದ್ಘಾಟಿಸಿ ಮಾತನಾಡಿ, ಶಿಕ್ಷಕರು ಸಮಯಪ್ರಜ್ಞೆ, ಪ್ರಾಮಾಣಿಕತೆಯಿಂದ ಕೆಲಸ ಮಾಡಿದಲ್ಲಿ ಮಕ್ಕಳ ಜತೆಗೆ ಸಂಸ್ಥೆಯು ಬೆಳೆಯುತ್ತದೆ ಎಂದು ಹೇಳಿದರು.

ಮರಾಠಾ ಮಂಡಳ ಇಂಜಿನಿಯರಿಂಗ್ ಕಾಲೇಜು ನಿರ್ದೇಶಕ ಡಾ. ಡಿ.ಜಿ. ಕುಲಕರ್ಣಿ ಮಾತನಾಡಿ, ಶಿಕ್ಷಕರು ಮಕ್ಕಳಲ್ಲಿ ಅಡಗಿರುವ ಸೂಕ್ತ ಕಲೆ ಗುರುತಿಸಿ ಪ್ರೋತ್ಸಾಹಿಸಬೇಕು. ನಿತ್ಯ ಹೊಸ ವಿಷಯಗಳ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಬೇಕು. ಪಾಲಕರ ಬೇಡಿಕೆಗಳಿಗೆ ಅನುಗುಣವಾಗಿ ಮಕ್ಕಳನ್ನು ತಯಾರಿ ಮಾಡಬೇಕು ಎಂದರು. ಸಮಾರಂಭದಲ್ಲಿ ಸಂಸ್ಥೆಯ ವಿವಿಧ ಅಂಗ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿ ವಿಶೇಷ ಕಾರ್ಯ ಗುರುತಿಸಿ ಅತ್ಯುತ್ತಮ ಮುಖ್ಯ ಶಿಕ್ಷಕ, ಅತ್ಯುತ್ತಮ ಶಿಕ್ಷಕ, ಅತ್ಯುತ್ತಮ ಉಪನ್ಯಾಸಕ, ಅತ್ಯುತ್ತಮ ಗುಮಾಸ್ತ, ಅತ್ಯುತ್ತಮ ಶಾಲೆ, ಅತ್ಯುತ್ತಮ ಕಾಲೇಜು ಹೀಗೆ ಆರು ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು. ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ, ಆಶಾಜ್ಯೋತಿ ವಿಶೇಷ ಮಕ್ಕಳ ಶಾಲೆಯ ಅಧ್ಯಕ್ಷ ಜ್ಯೋತಿಪ್ರಸಾದ ಜೊಲ್ಲೆ, ಜೊಲ್ಲೆ ಗ್ರುಪ್ ಸಂಸ್ಥೆಗಳ ಉಪಾಧ್ಯಕ್ಷ ಬಸವಪ್ರಸಾದ ಜೊಲ್ಲೆ, ಸಂಯೋಜಕ ಎಂ.ಎಂ.ಪಾಟೀಲ ಇತರರು ಇದ್ದರು.