ಶಿರಹಟ್ಟಿ: ಕಂದಾಯ ಹಾಗೂ ಇತರ ಪ್ರಮುಖ ಸರ್ಕಾರಿ ಕಚೇರಿಗಳಿರುವ ಮಿನಿವಿಧಾನಸೌಧದ ಆವರಣದಲ್ಲಿಯೇ ಪಾರ್ಕಿಂಗ್ ನಿರ್ವಹಣೆಯನ್ನು ತಾಲೂಕು ಆಡಳಿತ ಮರೆತಿದೆ.
ಪಟ್ಟಣದ ಹೊರವಲಯದಲ್ಲಿರುವ ಮಿನಿವಿಧಾನಸೌಧ ಪ್ರವೇಶ ದ್ವಾರ ಸೇರಿ ಒಳ ಆವರಣದಲ್ಲಿ ಎಲ್ಲೆಂದರಲ್ಲಿ ವಾಹನ ನಿಲುಗಡೆ ಮಾಡುವುದರಿಂದ ಸಾರ್ವಜನಿಕರು ಯಾತನೆ ಅನುಭವಿಸುತ್ತಿದ್ದಾರೆ.
ಹಿಂದೆ ತಹಸೀಲ್ದಾರ್ ಆಗಿದ್ದ ಜೆ.ಬಿ. ಮಜ್ಜಗಿ ಅವರು ಆವರಣದ ಒಂದು ಬದಿಯಲ್ಲಿ ಮಾತ್ರ ವಾಹನ ನಿಲುಗಡೆ ಮಾಡುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿ, ಅದನ್ನು ಕಾರ್ಯರೂಪಕ್ಕೆ ತಂದಿದ್ದರು. ಆದರೆ, ಅವರು ವರ್ಗಾವಣೆಯಾದ ನಂತರ ಮತ್ತೆ ಸಮಸ್ಯೆ ಮುಂದುವರಿದಿದೆ.
ವಾಹನಗಳನ್ನು ಮನಬಂದAತೆ ನಿಲುಗಡೆ ಮಾಡುವ ಪ್ರವೃತ್ತಿ ಮುಂದುವರಿದಿದೆ.
ಪಟ್ಟಣದ ಹೊರವಲಯದಲ್ಲಿರುವ ಮಿನಿವಿಧಾನಸೌಧ ಸಂಕೀರ್ಣದಲ್ಲಿನ ಕಚೇರಿ, ಜನಸ್ನೇಹಿ ಅಟಲ್‌ಜೀ ಕೇಂದ್ರ ಸೇರಿ ತಮ್ಮ ಕೆಲಸ ಕಾರ್ಯಗಳಿಗೆ ಬರಲು ಸಾರ್ವಜನಿಕರು ಕಾರು, ದ್ವಿಚಕ್ರ ವಾಹನ, ರಿಕ್ಷಾ ತರುವುದು ಸಹಜ.
ಆದರೆ, ಒಳಪ್ರವೇಶಿಸಿದಂತೆ ಎಲ್ಲೆಂದರಲ್ಲಿ ವಾಹನ ನಿಲ್ಲಿಸಿ ಹೋಗುವುದರಿಂದ ಕಚೇರಿಗೆ ಬರುವ ಸಾರ್ವಜನಿಕರು ದಾರಿ ಕಾಣದೆ ಹರಸಾಹಸಪಡುತ್ತಿದ್ದಾರೆ. ವಾಹನ ಮಾಲೀಕರಿಗೆ ಸರಿಯಾದ ಸೂಚನೆ ನೀಡುವ ಭದ್ರತಾ ಸಿಬ್ಬಂದಿಯೂ ಸ್ಥಳದಲ್ಲಿ ಇರುವುದಿಲ್ಲ.
ಕಚೇರಿ ಆವರಣದಲ್ಲಿ ಅಡ್ಡಾದಿಡ್ಡಿ ವಾಹನ ಪಾರ್ಕಿಂಗ್‌ನಿAದ ಉಂಟಾಗುತ್ತಿರುವ ತೊಂದರೆಯು ಗಮನಕ್ಕೆ ಬಂದಿದೆ. ಶೀಘ್ರದಲ್ಲಿಯೇ ಒಂದು ಬದಿಯಲ್ಲಿ ದ್ವಿಚಕ್ರವಾಹನ, ಮತ್ತೊಂದು ಕಡೆ ನಾಲ್ಕು ಚಕ್ರದ ವಾಹನ ನಿಲುಗಡೆಗೆ ವ್ಯವಸ್ಥೆ ಕಲ್ಪಿಸಲಾಗುವುದು. ಸಿಬ್ಬಂದಿ ಕೊರತೆಯ ಕಾರಣ ಕಂದಾಯ, ಉಪ ನೋಂದಣಿ ಕಚೇರಿ, ಭೂಮಾಪನ ಇಲಾಖೆಯಿಂದ ತಲಾ ಒಬ್ಬರು ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗುವುದು. ಎಲ್ಲೆಂದರಲ್ಲಿ ಮೂತ್ರ ವಿಸರ್ಜನೆಗೆ ಕಡಿವಾಣ ಹಾಕಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು. | ಅನಿಲ ಬಡಿಗೇರ ತಹಸೀಲ್ದಾರ್ ಶಿರಹಟ್ಟಿ