ನಗರದ ವೀರಶೈವ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಅಭಿನಂದನಾ ಕಾರ್ಯಕ್ರಮವನ್ನು ಶ್ರೀ ಕರಿವೃಷಭ ದೇಶೀಕೇಂದ್ರ ಶಿವಯೋಗೀಶ್ವರ ಸ್ವಾಮೀಜಿ ಉದ್ಘಾಟಿಸಿದರು. ಶಿವಯ್ಯ, ಷಡಕ್ಷರಿ, ಸಿದ್ದರಾಜು, ಸುರೇಶ್, ಪ್ರವೀಣ್, ಶಿವು, ಚಂದ್ರಣ್ಣ ಇದ್ದರು. 
ಜಿಲ್ಲೆ

ಅಡ್ಡಪಲ್ಲಕ್ಕಿ ಉತ್ಸವ ನಿರೀಕ್ಷೆಗೂ ಮೀರಿ ಯಶ

ಅರಸೀಕೆರೆ: ಜಗತ್ತಿಗೆ ಗುರು ಪರಂಪರೆ ಶ್ರೇಷ್ಠತೆ ಸಾರುವ ಕೇದಾರನಾಥ ರಾವುಲು ಶ್ರೀ ಭೀಮಾಶಂಕರಲಿಂಗ ಶಿವಾಚಾರ್ಯ ಸ್ವಾಮೀಜಿ ಅವರ ಅಡ್ಡಪಲ್ಲಕ್ಕಿ ಉತ್ಸವ ನಿರೀಕ್ಷೆಗೂ ಮೀರಿ ಯಶಸ್ವಿಯಾಗಿದೆ ಎಂದು ನೊಣವಿನಕೆರೆ ಕಾಡಸಿದ್ಧೇಶ್ವರ ಶ್ರೀ ಮಠದ ಕರಿವೃಷಭ ದೇಶೀಕೇಂದ್ರ ಸ್ವಾಮೀಜಿ ಹೇಳಿದರು.

ಇಷ್ಟಲಿಂಗ ಆಚರಣೆ ಧಾರ್ಮಿಕ ಸಮಿತಿ ಹಾಗೂ ವೀರಶೈವ ಲಿಂಗಾಯತ ಸಮಾಜದ ವತಿಯಿಂದ ನಗರದ ವೀರಶೈವ ಸಮುದಾಯ ಭವನದಲ್ಲಿ  ಆಯೋಜಿಸಿದ್ದ ಗೌರವ ಸಮರ್ಪಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ತಾಲೂಕಿನ ಸದ್ಬಕ್ತರ ಬಹುದಿನಗಳ ಆಶಯದಂತೆ ಕೇದಾರನಾಥ ಶ್ರೀಗಳನ್ನು ಆಹ್ವಾನಿಸಿ ಅಡ್ಡಪಲ್ಲಕ್ಕಿ ಮಹೋತ್ಸವ ನೆರವೇರಿಸಿದ ಕ್ಷಣವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ಬಣ್ಣಿಸಿದರು.

ಗೀಜಿಹಳ್ಳಿ ಬಳಿ ವೀರಶೈವ-ಲಿಂಗಾಯತ ಸಮುದಾಯಕ್ಕೆ ರುದ್ರಭೂಮಿ ಮಂಜೂರಾಗಿದೆ ಎನ್ನುವ ವಿಷಯ ತಿಳಿದಿದೆ. ಎಲ್ಲರೂ ಒಗ್ಗೂಡಿ ನಿಧಿ ಸಂಗ್ರಹಿಸಿ ಅಭಿವೃದ್ಧಿ ಕೆಲಸ ಆರಂಭಿಸಬೇಕು. ಪರಸ್ಪರ ಆರೋಪ ಪ್ರತ್ಯಾರೋಪದಿಂದ ಯಾವುದೇ ಪ್ರಯೋಜನವಿಲ್ಲ. ಸಂಘಟಿತ ಹೋರಾಟದಿಂದ ಮಾತ್ರವೇ ಜನಪರ ಕೆಲಸ ಅನುಷ್ಠಾನ ಮಾಡಲು ಸಾಧ್ಯ ಎಂಬುದನ್ನು ಮನಗಾಣಬೇಕೆಂದು ಸೂಚ್ಯವಾಗಿ ಹೇಳಿದರು.

ಇಷ್ಟಲಿಂಗ ಮಹಾಪೂಜಾ ಸಮಿತಿ ಅಧ್ಯಕ್ಷ ಅಣ್ಣೇನಹಳ್ಳಿ ಸಿದ್ದರಾಜು ಮಾತನಾಡಿ, ಸರ್ವರ ಸಹಕಾರದಿಂದ ಧಾರ್ಮಿಕ ಕಾರ್ಯಕ್ರಮ ಯಶಸ್ವಿಯಾಗಿ ನಡೆದಿದೆ. ಇದಕ್ಕಾಗಿ ನೆರವು ನೀಡಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಲು ನೊಣವಿನಕೆರೆ ಶ್ರೀಗಳು ಪ್ರೇರಣೆ ನೀಡಿದ್ದಾರೆ ಎಂದರು.

ಮುಖಂಡ ಕೆ.ವಿ.ನಿರ್ವಾಣಸ್ವಾಮಿ ಮಾತನಾಡಿ, ಬಂಡಿಹಳ್ಳಿ ರೇವಣಸಿದ್ದೇಶ್ವರ ದೇವಾಲಯದ ವಿವಾದ ಬಗೆಹರಿಸಲು ಶ್ರೀ ಗಳು ಮುಂದಾಗಬೇಕು ಎಂದರು.

ಹಿರಿಯ ನಾಗರಿಕರ ವೇದಿಕೆ ಅಧ್ಯಕ್ಷ ಶ್ರೀಕಾಂತ್ ನವಲಗುಂದ ಸೇರಿದಂತೆ ಹಲವರು ಮಾತನಾಡಿದರು. ಎಪಿಎಂಸಿ ಮಾಜಿ ಅಧ್ಯಕ್ಷ ಮುರುಂಡಿ ಶಿವಯ್ಯ, ಗಂಡಸಿ ಷಡಕ್ಷರಿ, ಮುರಿಗೇಂದ್ರಪ್ಪ, ಗೀಜಿಹಳ್ಳಿ ಪ್ರವೀಣ್, ಕೆವಿಎನ್ ಶಿವು, ಮಾಡಾಳು ಚಂದ್ರಶೇಖರ್, ಬಿ.ಪಿ.ಸುರೇಶ್, ಮಂಜುನಾಥ್, ಶಿಲ್ಪಾ ಸತೀಶ್, ವಿಜಯ್ ಕುಮಾರ್ ಹಲವರು ಹಾಜರಿದ್ದರು.