ಜಿಲ್ಲೆ

ಯಕ್ಷಗಾನದಿಂದ ಸಂಸ್ಕಾರ ವರ್ಗಾವಣೆ ಕಾರ್ಯ

ಯಲ್ಲಾಪುರ: ಸಂಸ್ಕಾರವನ್ನು ಪೀಳಿಗೆಯಿಂದ ಪೀಳಿಗೆಗೆ ವರ್ಗಾಯಿಸುವ ಕಾರ್ಯವನ್ನು ಯಕ್ಷಗಾನ ಕಲೆ ನಿರಂತರವಾಗಿ ಮಾಡಿಕೊಂಡು ಬಂದಿದೆ ಎಂದು ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಹರಿಪ್ರಕಾಶ ಕೋಣೆಮನೆ ಹೇಳಿದರು.

ತಾಲೂಕಿನ ಮಾಗೋಡ ಮಹಾಗಣಪತಿ ದೇವಸ್ಥಾನದಲ್ಲಿ ಸೋಮವಾರ ರಾತ್ರಿ ಯಕ್ಷಗಾನ ಹಾಗೂ ಗೌರವಾರ್ಪಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಹಿರಿಯ ಕಲಾವಿದರ ಸಾಧನೆಯನ್ನು ಸ್ಮರಿಸುವುದು, ಅವರನ್ನು ಗೌರವಿಸುವುದರಿಂದ ಯುವ ಕಲಾವಿದರಿಗೆ ಸ್ಪೂರ್ತಿದೊರೆಯುತ್ತದೆ ಎಂದರು.

ಯಕ್ಷಗಾನ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಹಿರಿಯ ಭಾಗವತ ವಿದ್ವಾನ್ ಗಣಪತಿ ಭಟ್ಟ ಮೊಟ್ಟೆಗದ್ದೆ ಅವರನ್ನು ಗೌರವಿಸಿ ಅಭಿನಂದಿಸಲಾಯಿತು. ಪ್ರಸಿದ್ಧ ಭಾಗವತ ಅನಂತ ಹೆಗಡೆ ದಂತಳಿಗೆಯವರನ್ನು ಗೌರವಿಸಲಾಯಿತು. ನರಸಿಂಹ ಭಟ್ಟ ಕುಂಕಿಮನೆ ಹಾಗೂ ಡಾ. ಶಿವರಾಮ ಭಾಗ್ವತ ಮಣ್ಕುಳಿ ಅಭಿನಂದನಾ ನುಡಿಗಳನ್ನಾಡಿದರು.

ಟಿಎಂಎಸ್ ಅಧ್ಯಕ್ಷ ಎನ್.ಕೆ. ಭಟ್ಟ ಅಗ್ಗಾಶಿಕುಂಬ್ರಿ ಅಧ್ಯಕ್ಷತೆ ವಹಿಸಿದ್ದರು. ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಆರ್.ಎಸ್. ಭಟ್ಟ, ಟಿಎಂಎಸ್ ನಿರ್ದೇಶಕ ವೆಂಕಟರಮಣ ಭಟ್ಟ ಕಿರಕುಂಭತ್ತಿ, ಎಲ್‌ಎಸ್‌ಎಂಪಿ ಸೊಸೈಟಿ ಅಧ್ಯಕ್ಷ ನಾಗರಾಜ ಕವಡಿಕೆರೆ, ಉಪಾಧ್ಯಕ್ಷ ಟಿ.ಆರ್. ಹೆಗಡೆ, ನಿರ್ದೇಶಕ ಎಂ.ಎನ್. ಭಟ್ಟ ಹಾಗೂ ಸಂಘಟಕರು ಉಪಸ್ಥಿತರಿದ್ದರು. ಮಂಜುನಾಥ ಜೋಶಿ ನಿರ್ವಹಿಸಿದರು.

ನಂತರ ಮೆಕ್ಕೆಕಟ್ಟು ಮೇಳ ಹಾಗೂ ಅತಿಥಿ ಕಲಾವಿದರಿಂದ ಪ್ರದರ್ಶನಗೊಂಡ ದಕ್ಷಯಜ್ಞ ಹಾಗೂ ಮಾಯಾ ಮೃಗಾವತಿ ಯಕ್ಷಗಾನ ಪ್ರೇಕ್ಷಕರನ್ನು ರಂಜಿಸಿತು.