ಸಾಗರದ ಮಂಕಳಲೆ ಸಂತ ಜೊಸೆಫ್ ಪ್ರೌಢಶಾಲೆಯ ವಿದ್ಯಾರ್ಥಿನಿ ಮಾನ್ವಿ ಕೆ ಪಿ. ಕರೂರು 18ನೇ ಜಿಲ್ಲಾಮಟ್ಟದ ಮಕ್ಕಳ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ನಿಯೋಜನೆಗೊಂಡಿರುವ ಹಿನ್ನೆಲೆಯಲ್ಲಿ ಸನ್ಮಾನಿಸಲಾಯಿತು. ಪರಶುರಾಮಪ್ಪ, ಥೆರೇಸಾ, ವಿ.ಟಿ.ಸ್ವಾಮಿ, ಡಾ. ಅನ್ನಪೂರ್ಣಾ, ಬಿ.ಡಿ.ರವಿಕುಮಾರ್, ಚಂದ್ರಶೇಖರ ಶಿರವಂತೆ ಇತರರಿದ್ದರು. 
ಜಿಲ್ಲೆ

ಸಾಗರದ ಬರಹಗಾರರ ಸಾಧನೆ ದೊಡ್ಡದು

ಸಾಗರ: ಸಾಗರ ಕ್ಷೇತ್ರದಲ್ಲಿ ಎಲ್ಲ ಕಲೆಗಳಲ್ಲಿಯೂ ಮಕ್ಕಳಿಂದ ಹಿರಿಯರವರೆಗೆ ಪ್ರಜ್ಞಾವಂತರಿದ್ದು ಯಶಸ್ಸು ಸಾಧಿಸುತ್ತ ಬಂದಿದ್ದಾರೆ. ಸಾಹಿತ್ಯ ಕ್ಷೇತ್ರದಲ್ಲಿ ಸಾಗರದ ಬರಹಗಾರರ ಸಾಧನೆ ದೊಡ್ಡದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಪರಶುರಾಮಪ್ಪ ಹೇಳಿದರು.
ನಗರದ ಮಂಕಳಲೆ ಸಂತ ಜೋಸೆಫ್ ಪ್ರೌಢಶಾಲೆಯ ವಿದ್ಯಾರ್ಥಿನಿ ಮಾನ್ವಿ ಕೆ.ಪಿ.ಕರೂರು 18ನೇ ಜಿಲ್ಲಾಮಟ್ಟದ ಮಕ್ಕಳ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ನಿಯೋಜನೆಗೊಂಡಿರುವ ಹಿನ್ನೆಲೆಯಲ್ಲಿ ಗುರುವಾರ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ವತಿಯಿಂದ ಸನ್ಮಾನಿಸಿ ಮಾತನಾಡಿದರು.
ಪ್ರತಿಯೊಬ್ಬರಲ್ಲೂ ಒಂದಿಲ್ಲೊಂದು ಪ್ರತಿಭೆ ಇರುತ್ತದೆ. ಅದನ್ನು ಅಭಿವ್ಯಕ್ತಗೊಳಿಸುವ ವೇದಿಕೆ ಅಗತ್ಯ. ಪ್ರತಿಭೆ ಇರುವವರು ಅದನ್ನು ಇನ್ನಷ್ಟು ಅಭಿವೃದ್ದಿಪಡಿಸಿಕೊಳ್ಳುವತ್ತ ಗಮನಹರಿಸಬೇಕು. ಪ್ರಸ್ತುತ ಮಾನ್ವಿ ಕರೂರು ಜಿಲ್ಲಾಮಟ್ಟದ ಮಕ್ಕಳ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿರುವುದು ಸಾಗರದ ಕೀರ್ತಿ ಹೆಚ್ಚಿಸಿದೆ. ಪಠ್ಯದ ಜತೆಗೆ ಪಠ್ಯೇತರವಾಗಿ ಸಹ ಮಕ್ಕಳು ತೊಡಗಿಸಿಕೊಳ್ಳಬೇಕು ಎಂದರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವಿ.ಟಿ.ಸ್ವಾಮಿ ಮಾತನಾಡಿ, ನಿರಂತರ ಪರಿಶ್ರಮದಿಂದ ನಾವು ಉನ್ನತ ಸ್ಥಾನಕ್ಕೆ ತಲುಪಲು ಸಾಧ್ಯವಿದೆ. ಮಕ್ಕಳು ತಮಗೆ ಸಿಗುವ ಅವಕಾಶವನ್ನು ಸದ್ಬಳಕೆ ಮಾಡಿಕೊಂಡು ಓದಿನ ಜತೆಗೆ ಸಾಹಿತ್ಯ, ಸಾಂಸ್ಕೃತಿಕ, ಜಾನಪದ ಇತರ ಕಲೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಹೇಳಿದರು.
ಮುಖ್ಯಶಿಕ್ಷಕಿ ಥೆರೇಸಾ ಅಧ್ಯಕ್ಷತೆ ವಹಿಸಿದ್ದರು. ಸಮನ್ವಯಾಧಿಕಾರಿ ಡಾ. ಅನ್ನಪೂರ್ಣಾ, ಪ್ರಮುಖರಾದ ಕಸ್ತೂರಿ ಸಾಗರ್, ಬಿ.ಡಿ.ರವಿಕುಮಾರ್, ಚಂದ್ರಶೇಖರ ಶಿರವಂತೆ, ಎಸ್.ಡಿ.ಸತ್ಯನಾರಾಯಣ, ಪರಮೇಶ್ವರ ಕರೂರು, ಪೂರ್ಣಿಮಾ ಕರೂರು, ಉಮೇಶ್, ಸ್ಟ್ಯಾನಿ ಲೋಪಿಸ್ ಇತರರಿದ್ದರು.