ಜಿಲ್ಲೆ

ಬಾರ್‌ನಲ್ಲಿ ದಾಂಧಲೆ ಎಸಗಿದ ಆರೋಪಿಗಳು ಸೆರೆ

ಬಂಟ್ವಾಳ: ಬಾರ್‌ನಲ್ಲಿ ಕುಡಿದು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದ ಆರೋಪಿಗಳನ್ನು ಪುಂಜಾಲಕಟ್ಟೆ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಬಂಟ್ವಾಳ ನಿವಾಸಿಗಳಾದ ಸಂತೋಷ್ ಮತ್ತು ವಿಶ್ವನಾಥ ಆರೋಪಿಗಳಾಗಿದ್ದು, ಘಟನೆಯ ಬಳಿಕ ತಲೆಮರೆಸಿಕೊಂಡಿದ್ದರು. ಬುಧವಾರ ಪೊಲೀಸರ ತಂಡ ಮಂಗಳೂರಿನಲ್ಲಿ ಬಂಧಿಸಿದೆ.

ಆಗಸ್ಟ್ 4ರಂದು ರಾತ್ರಿ ವಾಮದಪದವಿನ ಪಾಂಗಲ್ಪಪಾಡಿಯಲ್ಲಿರುವ ಪ್ರಕಾಶ್ ಬಾರ್‌ನಲ್ಲಿ ಗಲಾಟೆ ನಡೆದಿತ್ತು. ಬಂಟ್ವಾಳದಿಂದ ವಾಮದಪದವಿಗೆ ತೆರಳಿದ ಇಬ್ಬರು ರೌಡಿಗಳು ಬಾರ್‌ನಲ್ಲಿ ಕುಡಿದು ಬಳಿಕ ಅಲ್ಲಿನ ಸಿಬ್ಬಂದಿಗೆ ಹಾಗೂ ಅಡುಗೆಯವನ ಮೇಲೆ ರಾಡ್‌ನಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದರು. ಕಂಪ್ಯೂಟರ್ ಮತ್ತಿತರ ವಸ್ತುಗಳನ್ನು ಪುಡಿಗೈದಿದ್ದರು. ಇದೆಲ್ಲಾ ದೃಶ್ಯಗಳು ಇಲ್ಲಿನ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ವಿಡಿಯೋ ವೈರಲ್ ಆಗಿತ್ತು.

ಆರೋಪಿಗಳ ಪೈಕಿ ಸಂತೋಷ್ ಕೆಲ ಸಮಯದ ಹಿಂದೆ ಕೊಲೆಯತ್ನ ಆರೋಪದಲ್ಲಿ ಜೈಲುಪಾಲಾಗಿದ್ದು, ಜಾಮೀನಿನ ಮೇಲೆ ಹೊರಗಡೆ ಬಂದಿದ್ದ. ಬಂಟ್ವಾಳದ ವ್ಯಕ್ತಿಯೋರ್ವನ ಕೈ ಕಡಿದು ಜೈಲು ಸೇರಿದ್ದ ಈತ ಇದೀಗ ಮತ್ತೆ ವಾಮದಪದವಿನಲ್ಲಿ ಗಲಾಟೆ ಮಾಡಿದ್ದಾನೆ.