ಜಿಲ್ಲೆ

ಆರೋಪಿ ಕಾಲಿಗೆ ಪೊಲೀಸರ ಗುಂಡು

ಹುಬ್ಬಳ್ಳಿ: ಹಳೇ ಹುಬ್ಬಳ್ಳಿ ಠಾಣೆ ವ್ಯಾಪ್ತಿಯಲ್ಲಿ ಇಬ್ಬರಿಗೆ ಸೋಮವಾರ ಸಂಜೆ ಚಾಕು ಇರಿದಿದ್ದ ಆರೋಪಿಯನ್ನು ಪೊಲೀಸರು ಸ್ಥಳ ಮಹಜರಿಗೆ ಕರೆದುಕೊಂಡು ಹೋಗಿದ್ದರು. ಈ ವೇಳೆ ಪೊಲೀಸರ ಮೇಲೆ ಹಲ್ಲೆ ಮಾಡಲು ಯತ್ನಿಸಿದ ಆರೋಪಿ ಮುಜಾಮಿಲ್ ಮಗಮಿ ಕಾಲಿಗೆ ಪೊಲೀಸರು ಮಂಗಳವಾರ ಗುಂಡು ಹಾರಿಸಿದ್ದಾರೆ.

ಸಮೀರ್ ಹಾಗೂ ಜಾವಿದ್ ಎನ್ನುವವರಿಗೆ ಮುಜಾಮಿಲ್ ತನ್ನ ಸಹಚರರೊಂದಿಗೆ ಸೇರಿ ಚಾಕು ಇರಿದಿದ್ದ. ನನ್ನ ಮೇಲೆ ದೂರು ನೀಡಿದರೆ ನಿಮ್ಮನ್ನು ಬಿಡುವುದಿಲ್ಲ. ನಿಮ್ಮ ಮನೆಯ ಹೆಣ್ಣು ಮಕ್ಕಳನ್ನೂ ಬಿಡುವುದಿಲ್ಲ. ನನಗೆ ಇಂತಿಷ್ಟು ಹಣ ಕೊಡಬೇಕು ಎಂದು ಬೇಡಿಕೆ ಇಟ್ಟು ಬೆದರಿಕೆ ಹಾಕಿ ಮುಜಾಮಿರ್ ತನ್ನ ಸಹಚರರೊಂದಿಗೆ ಪರಾರಿಯಾಗಿದ್ದ. ನಂತರ ನಗರ ಹೊರವಲಯದಲ್ಲಿ ವಾಹನ ಸವಾರರಿಂದ ಹಣ ಪೀಕಿದ್ದಾರೆ. ಇದೆಲ್ಲದರ ಚಲನವಲನ ಗಮನಿಸುತ್ತಿದ್ದ ಹಳೇ ಹುಬ್ಬಳ್ಳಿ ಠಾಣೆ ಪೊಲೀಸರು, ಮುಜಾಮಿಲ್‌ನನ್ನು ಬಂಧಿಸಿದ್ದಾರೆ.

ಬೆಳಗ್ಗೆ ಇತರ ಆರೋಪಿಗಳನ್ನು ತೋರಿಸುವುದಾಗಿ ಕರೆದುಕೊಂಡು ಹೋಗಿದ್ದ ಮುಜಾಮಿಲ್, ಇನ್‌ಸ್ಪೆಕ್ಟರ್ ಸುರೇಶ ಯಳ್ಳೂರ, ಕಾನ್ಸ್‌ಟೇಬಲ್ ಸುಬ್ರಾಯ್ ಗಾಮದ್ ಮೇಲೆ ಹಲ್ಲೆ ಮಾಡಿ ಪರಾರಿಯಾಗಲು ಯತ್ನಿಸಿದ್ದಾನೆ. ಗಾಳಿಯಲ್ಲಿ ಎರಡು ಸುತ್ತು ಗುಂಡು ಹಾರಿಸಿದ ಸುರೇಶ ಯಳ್ಳೂರ, ಆರೋಪಿ ಕಾಲಿಗೆ ಗುಂಡು ಹೊಡೆದಿದ್ದಾರೆ. ಪೊಲೀಸ್ ಸಿಬ್ಬಂದಿ ಹಾಗೂ ಆರೋಪಿಯನ್ನು ಕೆಎಂಸಿಆರ್‌ಐನಲ್ಲಿ ಚಿಕಿತ್ಸೆಗೆ ದಾಖಲಾಗಿಸಲಾಗಿದೆ ಎಂದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ, ಸುದ್ದಿಗಾರರಿಗೆ ತಿಳಿಸಿದ್ದಾರೆ.