ಹನೂರು: ಮಲೆಮಹದೇಶ್ವರ ವನ್ಯಜೀವಿ ಧಾಮದ ಪಚ್ಚೆದೊಡ್ಡಿ ಅರಣ್ಯ ಪ್ರದೇಶದಲ್ಲಿ ಹುಲಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿದ್ದ ಇಬ್ಬರು ಆರೋಪಿಗಳನ್ನು ಬುಧವಾರ ನ್ಯಾಯಾಧೀಶರು ಅ.23ರವರೆಗೆ ನ್ಯಾಯಾಂಗ ವಶಕ್ಕೆ ನೀಡಿದ್ದಾರೆ.
ಪ್ರಕರಣದಲ್ಲಿ ಆರಂಭದಲ್ಲೇ ಬಂಧಿತರಾಗಿದ್ದ ಪಚ್ಚೆದೊಡ್ಡಿ ಗ್ರಾಮದ ಪಚ್ಚಮಲ್ಲು, ಗಣೇಶ್, ಸಿದ್ದು ಹಾಗೂ ಕಾಂಚಳ್ಳಿ ಗ್ರಾಮದ ಸಂಪಿಗೆ ಮಾದೇವನನ್ನು ಅರಣ್ಯಾಧಿಕಾರಿಗಳು ವಿಚಾರಣೆ ನಡೆಸಿ ಅ.10 ರಂದು ಕೊಳ್ಳೇಗಾಲದ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಅವರನ್ನು ಅ.23 ರವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಿದ್ದು, ಕಾರಾಗೃಹದಲ್ಲಿದ್ದಾರೆ. ತಲೆಮರೆಸಿಕೊಂಡಿದ್ದ ಕಾಂಚಳ್ಳಿ ಗ್ರಾಮದ ಹಸುವಿನ ಮಾಲೀಕ ಚಂದು ಹಾಗೂ ಅಭೀಷೇಕ್ ಅವರನ್ನು ಮಂಗಳವಾರ ಕುಟುಂಬಸ್ಥರೇ ಹನೂರಿನ ಅರಣ್ಯ ಇಲಾಖೆಯ ಕಚೇರಿಗೆ ಕರೆ ತಂದು ಒಪ್ಪಿಸಿದ್ದರು.
ಈ ಇಬ್ಬರು ಆರೋಪಿಗಳನ್ನು ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿ ಮಾಹಿತಿ ಪಡೆದಿದ್ದರು. ಬುಧವಾರ ಅರೋಪಿಗಳನ್ನು ಹನೂರಿನ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯಕೀಯ ತಪಾಸಣೆ ನಡೆಸಿದ ಬಳಿಕ ಎಸಿಎಫ್ ವಿರಾಜ್ ಹೊಸೂರ್, ಆರ್‌ಎಫ್‌ಒಗಳಾದ ಉಮಾಪತಿ ಹಾಗೂ ನಾಗರಾಜು ಅವರು ನ್ಯಾಯಾಲಯಕ್ಕೆ ಹಾಜರುಪಡಿಸಿದರು.
ವಿಚಾರಣೆ ನಡೆಸಿದ ನ್ಯಾಯಾಧೀಶರು ಇವರನ್ನು ಸಹ ಅ.23ರವರೆಗೆ ನ್ಯಾಯಾಂಗ ಬಂಧನಕ್ಕೆ ಆದೇಶಿಸಿದರು. ಮತ್ತೊಬ್ಬ ಆರೋಪಿ ಗೋವಿಂದನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.
ಕುಟುಂಬಸ್ಥರಲ್ಲಿ ಜಾಗೃತಿ ಮೂಡಿಸಿದ ಪಿಸಿಸಿಎಫ್: ಆರೋಪಿ ಚಂದು ಹಾಗೂ ಅಭಿಷೇಕ್ ಕುಟುಂಬಸ್ಥರು ಬುಧವಾರ ಹನೂರಿನ ಅರಣ್ಯ ಇಲಾಖೆಯ ಕಚೇರಿಗೆ ಆಗಮಿಸಿ ಕಾದು ನಿಂತಿದ್ದರು. ಈ ವೇಳೆ ಸ್ಥಳಕ್ಕಾಗಮಿಸಿದ ತನಿಖಾಧಿಕಾರಿ ಪಿಸಿಸಿಎಫ್ ಸ್ಮಿತಾ ಬಿಜ್ಜೂರು ಅವರು ಕುಟುಂಬಸ್ಥರಿಗೆ ಕಾನೂನಿನ ಬಗ್ಗೆ ಜಾಗೃತಿ ಮೂಡಿಸಿದರು. ಬಳಿಕ ಸ್ಮಿತಾ ಬಿಜ್ಜೂರು ಅವರು ತನಿಖೆ ಸಂಬಂಧ ಅಧಿಕಾರಿಗಳಿಂದ ಮಾಹಿತಿ ಪಡೆದರು. ಡಿಸಿಎಫ್ ಭಾಸ್ಕರ್, ಎಸಿಎಫ್ ವಿರಾಜ್ ಹೊಸೂರ್, ಆರ್‌ಎಫ್‌ಒಗಳಾದ ಉಮಾಪತಿ, ನಾಗರಾಜು ಇದ್ದರು.