ಕಾಸರಗೋಡು: ಕುಂಬಳೆ ಪಿಎಚ್‌ಸಿ ರಸ್ತೆಯಲ್ಲಿ ಸಂಶಯಾಸ್ಪದ ರೀತಿಯಲ್ಲಿ ಸುತ್ತಾಡುತ್ತಿದ್ದ ಸಂದರ್ಭ ಬಂಧಿತರಾಗಿದ್ದ ಮೂರು ಮಂದಿ ಮನೆಯೊಂದರಿಂದ ಕಳವಿಗೆ ಸಂಚುರೂಪಿಸಿದ್ದ ಮಾಹಿತಿ ತನಿಖೆಯಿಂದ ಬಹಿರಂಗಗೊಂಡಿದೆ. ಪೆರಿಯಡ್ಕ ನಿವಾಸಿ ಅನ್ಸಾರ್, ಮಧೂರು ಕೆ.ಕೆ ಪಉರಂ ನಿವಾಸಿ ಉಸ್ಮಾನ್, ಉಳಿಯತ್ತಡ್ಕ ನೇಶನಲ್ ನಗರ ನಿವಾಸಿ ಅಶ್ರಫ್ ದರೋಡೆಗೆ ಸಂಚು ರೂಪಿಸಿದವರು.
ಶನಿವಾರ ನಸುಕಿಗೆ ಪಿಎಚ್‌ಸಿ ರಸ್ತೆಯ ಕೆ.ಬಿ ಅಬ್ಬಾಸ್ ಎಂಬುವರ ಮನೆಯಿಂದ ಕಳವಿಗೆ ಯತ್ನಿಸುತ್ತಿದ್ದಂತೆ ಎಚ್ಚೆತ್ತ ಮನೆಯವರು ಶಬ್ದ ಮಾಡಿದಾಗ ತಂಡ ಕಾರುಶೆಡ್ಡಿನ ಬಳಿ ಅಡಗಿ ಕೂತಿದೆ. ಈ ಸಂದರ್ಭ ಕ್ರಿಕೆಟ್ ಪಂದ್ಯಾಟ ಕಳೆದು ಆ ಹಾದಿಯಾಗಿ ಆಗಮಿಸಿದ ಯುವಕರನ್ನು ಕಂಡು ಆರೋಪಿಗಳು ಪರಾರಿಯಾಗಲು ಯತ್ನಿಸಿದ್ದು, ತಕ್ಷಣ ಅವರನ್ನು ಊರವರ ಸಹಾಯದಿಂದ ಸೆರೆಹಿಡಿದು, ಪೆಟ್ರೋಲಿಂಗ್ ನಿರತರಾಗಿದ್ದ ಪೊಲೀಸರಿಗೊಪ್ಪಿಸಲಾಗಿತ್ತು. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ.