ಜಿಲ್ಲೆ

ಮೆಚ್ಚುಗೆಗೆ ಪಾತ್ರವಾದ ನಾ ರಾಜಗುರು ನಾಟಕ

ವಿನಯ ಹೆಗಡೆ

ಶಿರಸಿ: ಸಂಗೀತ ಕ್ಷೇತ್ರಕ್ಕೆ ಸಾವಿರಾರು ಕಲಾವಿದರನ್ನು ಕೊಡುಗೆಯಾಗಿ ನೀಡಿದ ಸ್ವರ ಸಾಮ್ರಾಟ್ ಪಂಡಿತ್ ಬಸವರಾಜ ರಾಜಗುರು ಅವರ ಬದುಕಿನ ವೃತ್ತಾಂತ ನಾ ರಾಜಗುರು ಸಂಗೀತ ನಾಟಕ ಪ್ರದರ್ಶನ ನಗರದ ಟಿಎಂಎಸ್ ಸಭಾಂಗಣದಲ್ಲಿ ಭಾನುವಾರ ಪ್ರದರ್ಶನ ಗೊಂಡಿತು.

ಪಂಡಿತ್ ಬಸವರಾಜ ರಾಜಗುರು ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಒಂದುವರೆ ಗಂಟೆಗಳ ಅವಧಿಯಲ್ಲಿ ಹಾಡಿನ ಜೊತೆ ರಾಜಗುರು ಅವರ ಜೀವನ ಚರಿತ್ರೆ, ಹಾಡು ಮಾತಿನ ನಡುವೆ ಬದುಕಿನ ಪುಟಗಳು ಅನಾವರಣಗೊಂಡವು.

ರಾಜಗುರು ಅವರ ಮೊಮ್ಮಗ ವಿಶ್ವರಾಜ ರಾಜಗುರು ಅವರು ಹಾಡು, ಅಭಿನಯದ ಮೂಲಕ ರಂಗ ಪ್ರಯೋಗ ಮೆಚ್ಚುಗೆಗಳಿಸಿದವು. ರಂಗ ನಿರ್ದೇಶಕ ಮಹಾದೇವ ಹಡಪದ ರಂಗರೂಪ ಪರಿಕಲ್ಪನೆಯ ಈ ಸಂಗೀತ ನಾಟಕದಲ್ಲಿ ತಬಲಾದಲ್ಲಿ ಅಕ್ಷಯ ಜೋಶಿ, ಹಾಮೋನಿಯಂನಲ್ಲಿ ವೆಂಕಟೇಶ ರೆಡ್ಡಿ ಸಾಥ್ ನೀಡಿದರು. ಸಂಗಮೇಶ ಸೊರಗಾಂವಿ ಬೆಳಕಿನ ವ್ಯವಸ್ಥೆ, ಉದಯ ಪೂಜಾರ ಧ್ವನಿ ವ್ಯವಸ್ಥೆ ಮಾಡಿದ್ದರು.

ಇದಕ್ಕೂ ಮೊದಲು ಹಾಸಣಗಿ ಗಣಪತಿ ಭಟ್ಟರ ಶಿಷ್ಯೆ ವಿದುಷಿ ಮೇಧಾ ಭಟ್ಟ ಅವರಿಂದ ಗಾಯನ ಪ್ರಸ್ತುತಗೊಂಡಿತು. ತಬಲಾದಲ್ಲಿ ಗುರುರಾಜ ಆಡುಕಳ, ಹಾಮೋನಿಯಂನಲ್ಲಿ ಸತೀಶ ಭಟ್ಟ ಹೆಗ್ಗಾರ್, ಪಕ್ಕ ವಾದ್ಯದಲ್ಲಿ ಐಶ್ವರ್ಯ ಹೆಗಡೆ,ಅನಂತಮೂರ್ತಿ ಹೆಗಡೆ ಸಾಥ್ ನೀಡಿದರು. ಇದಕ್ಕೂ ಮೊದಲು ನಡೆದ ಸಭಾ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಪಂ.ಗಣಪತಿ ಭಟ್ಟ ಹಾಸಣಗಿ, ರಾಜುಗುರು ಅವರ ಪರಂಪರೆ ಸದಾ ಉಳಿಯುತ್ತದೆ. ರಾಜಗುರು ಅವರ ಶ್ರೇಷ್ಠ ಕಲಾವಿದರು. ಸಾಧಕ ವ್ಯಕ್ತಿಗಳ ಬಗ್ಗೆ ಏಕ ವ್ಯಕ್ತಿ ನಾಟಕ ನಡೆಸುವದು ಅಪರೂಪ. ಇದೊಂದು ಸಂಗೀತಮಯ ನಾಟಕ ಎಂದರು.

ಅಧ್ಯಕ್ಷತೆವಹಿಸಿಕೊಂಡ ರಾಷ್ಟಿ›ೕಯ ಸ್ಮಾರಕ ಟ್ರಸ್ಟ್ ಅಧ್ಯಕ್ಷ ಚಂದ್ರಕಾಂತ ಬೆಲ್ಲದ ಅವರು ಟ್ರಸ್ಟಿನ ಕಾರ್ಯದ ಕುರಿತು ಹೇಳಿದರು.

ಈ ವೇಳೆ ಟ್ರಸ್ಟ್ ಸದಸ್ಯೆ ಭಾರತಿದೇವಿ ರಾಜಗುರು, ನಿಜಗುಣ ರಾಜಗುರು, ಮಂಜುಳಾ ನಿಜಗುಣ, ಸಹಾಯಕ ನಿರ್ದೇಶಕ ಕುಮಾರ ಬೇಕ್ಕೇರಿ, ರಂಜಾನ್, ಇತರರು ಇದ್ದರು. ಪಂಡಿತ್ ಕೃಷ್ಣಮೂರ್ತಿ ಭಟ್ಟ ನಿರ್ವಹಿಸಿದರು