ಜಿಲ್ಲೆ

25ರಂದು ಶೋಷಿತರ ಸಂಘರ್ಷ ದಿನಾಚರಣೆ

ಎಚ್.ಡಿ.ಕೋಟೆ: ಮಾ. 25ರಂದು ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಶೋಷಿತರ ಸಂಘರ್ಷ ದಿನಾಚರಣೆ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಜಿಲ್ಲಾ ಜಿಲ್ಲಾ ಪ್ರಧಾನ ಸಂಚಾಲಕ ಮಲ್ಲಳ್ಳಿ ನಾರಾಯಣ ತಿಳಿಸಿದರು.

ಡಾ.ಬಿ.ಆರ್. ಅಂಬೇಡ್ಕರ್ ಅವರು ಮಹಾರಾಷ್ಟ್ರದ ರಾಯಗಡ ಜಿಲ್ಲೆಯ ಮಹಾಡ್‌ನಲ್ಲಿ 1927 ಮಾ. 20 ರಂದು ಸಾರ್ವಜನಿಕ ಕೆರೆಯ ನೀರನ್ನು ಮುಟ್ಟುವ ಮೂಲಕ ನೈಸರ್ಗಿಕ ಸಂಪತ್ತು ಎಲ್ಲರಿಗೂ ಸೇರಿದ್ದು ಎನ್ನುವುದನ್ನು ಸಾರಿ ಹೇಳಿದರು. ಆ ಮೂಲಕ ಮಾನವ ಹಕ್ಕುಗಳನ್ನು ಎತ್ತಿ ಹಿಡಿದರು. ಇದರ ನೆನಪಿಗಾಗಿ ಮಹಾಡ್ ಸತ್ಯಾಗ್ರಹ ಆಧುನಿಕ ಭಾರತ ಇತಿಹಾಸದಲ್ಲಿ ಅತ್ಯಂತ ಮಹತ್ವದ್ದು ಘಟನೆಯಾಗಿದೆ ಎಂದು ಪಟ್ಟಣದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಇದರ ಆಚರಣೆಗಾಗಿ ಮಾ. 25ರಂದು ಪಟ್ಟಣದ ಡಾ.ಬಿಆರ್.ಅಂಬೇಡ್ಕರ್ ಭವನದಲ್ಲಿ ಬೆಳಗ್ಗೆ 11 ಗಂಟೆಗೆ ಶೋಷಿತರ ಸಂಘರ್ಷ ದಿನಾಚರಣೆ ಜಿಲ್ಲಾ ಮಟ್ಟದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಸಂಘಟನೆಯ ರಾಜ್ಯ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್ ಕಾರ್ಯಕ್ರಮ ಉದ್ಘಾಟಿಸಲಿದ್ದು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಪ್ರಧಾನ ಸಂಚಾಲಕ ಮಲ್ಲಳ್ಳಿ ನಾರಾಯಣ್ ವಹಿಸಲ್ಲಿದ್ದಾರೆ.

ಶ್ರೀಜ್ಞಾನಪ್ರಕಾಶ ಸ್ವಾಮೀಜಿ ಅವರು ಉಪಸ್ಥಿತಿಯಲ್ಲಿ ನಡೆಯುವ ಈ ಕಾರ್ಯಕ್ರಮಕ್ಕೆ ಚಿತ್ರನಟ ಚೇತನ್, ಪ್ರಗತಿಪರ ಚಿಂತಕ ಜನಾರ್ದನ್(ಜನ್ನಿ), ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಇನ್ನು ಹಲವಾರು ಪ್ರಮುಖರು ಭಾಗವಹಿಸಲಿದ್ದಾರೆ. ತಾಲೂಕಿನ ಪ್ರಗತಿಪರ ಚಿಂತಕರು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.

ಜಿಲ್ಲಾ ದಲಿತ ಮಹಿಳಾ ಒಕ್ಕೂಟದ ಸಂಚಾಲಕಿ ಕಟ್ಟೆಮಳವಾಡಿ ಮಹದೇವಮ್ಮ, ತಾಲೂಕು ಸಂಚಾಲಕ ಸಣ್ಣ ಕುಮಾರ್, ಜಿಲ್ಲಾ ಸಂಘಟನ ಸಂಚಾಲಕಿ ಅನುಷಾ, ಸರಗೂರು ತಾಲೂಕು ಪ್ರಧಾನ ಸಂಚಾಲಕ ಕೂಡಗಿ ಗೋವಿಂದರಾಜು, ದಲಿತ ವಿದ್ಯಾರ್ಥಿ ಒಕ್ಕೂಟ ಜಿಲ್ಲಾ ಸಂಚಾಲಕ ದಮ್ಮ ಅಶೋಕ, ಕಾಳಪ್ಪಾಜಿ, ಚಂದ್ರು ಹಾದನೂರು, ಉದಯ ಕೋಟೆ, ಕುರ್ಣೇಗಾಲ ಕೃಷ್ಣ, ಕೂಲ್ಯ ಮಹಾದೇವಸ್ವಾಮಿ ಇದ್ದರು.