ಶಿವಮೊಗ್ಗದಲ್ಲಿ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಪ್ರಮುಖರಾದ ಇ.ವಿಶ್ವಾಸ್, ಕಾಚಿನಕಟ್ಟೆ ಸತ್ಯನಾರಾಯಣ, ವಾಗೀಶ್, ಎಸ್.ಜಿ.ಬಾಲು, ಮಹಾಲಿಂಗಶಾಸ್ತ್ರಿ, ರಾಜು, ರವಿ, ಶ್ರೀಕಾಂತ್ ಸುದ್ದಿಗೋಷ್ಠಿಯಲ್ಲಿದ್ದರು. 
ಜಿಲ್ಲೆ

ಅದು ಈದ್ಗಾ ಅಲ್ಲ, ಆಟದ ಮೈದಾನ

ನವೀನ ಬಿ.ಎಂ

ಶಿವಮೊಗ್ಗ: ಜಿಲ್ಲಾಧಿಕಾರಿ ಕಚೇರಿ ಎದುರಿನ 30 ಗುಂಟೆ ಜಾಗ ಈದ್ಗಾ ಮೈದಾನವಲ್ಲ. ಅದು ಆಟದ ಮೈದಾನ ಎನ್ನುವುದಕ್ಕೆ ನಮ್ಮಲ್ಲಿ ಹಲವು ದಾಖಲೆಗಳಿವೆ. ಇನ್ಮುಂದೆ ಪ್ರತಿಯೊಬ್ಬರೂ ಅದನ್ನು ಆಟದ ಮೈದಾನ ಎಂದೇ ಕರೆಯುವಂತೆ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಅವರು ಸಾರ್ವಜನಿಕರಲ್ಲಿ ವಿನಂತಿಸಿದರು.

ಮೈದಾನದ ವಿಚಾರದಲ್ಲಿ ಜಿಲ್ಲಾಧಿಕಾರಿ ಮತ್ತು ಮಹಾನಗರ ಪಾಲಿಕೆ ಆಯುಕ್ತರು ಎಚ್ಚರಿಕೆ ಹೆಜ್ಜೆ ಇಡುತ್ತಿದ್ದಾರೆ. ಇದು ಒಳ್ಳೆಯ ಬೆಳವಣಿಗೆ. ಎರಡು ಕಡೆಯ ದಾಖಲೆಗಳನ್ನು ಪರಿಶೀಲಿಸಿ ಯೋಚನೆ ಮಾಡಿ ಮುಂದಿನ ನಿರ್ಧಾರ ತೆಗೆದುಕೊಳ್ಳಬೇಕಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಶಿವಮೊಗ್ಗ ನಗರಾಭಿವೃದ್ಧಿ ಪ್ರಾಧಿಕಾರದ ಯೋಜನೆ ಪ್ರಕಾರ ಆ ಜಾಗವು ಉದ್ಯಾನ, ತೆರೆದ ಜಾಗ ಅಥವಾ ಆಟದ ಮೈದಾನವನ್ನಾಗಿ ಮಾಡಬಹುದು. ಪ್ರಾಧಿಕಾರದ ನಕ್ಷೆಯಲ್ಲಿ ಅದು ಸ್ಪಷ್ಟವಾಗಿದೆ. ಅದನ್ನು ಹೊರತುಪಡಿಸಿ ಬೇರೆ ಯಾವುದೇ ಉದ್ದೇಶಕ್ಕೂ ಆ ಜಾಗ ಕೊಡುವುದಕ್ಕೆ ಅವಕಾಶ ಇಲ್ಲ. ತುರ್ತಾಗಿ ಅಲ್ಲಿಂದ ಅವರನ್ನು ತೆರವುಗೊಳಿಸಬೇಕು ಎಂದು ಜಿಲ್ಲಾಡಳಿತಕ್ಕೆ ಮನವಿ ಮಾಡಿದರು.

ಮಹಾವೀರ ವೃತ್ತದಲ್ಲಿರುವ ಸೈಯ್ಯದ್ ಷಾ ಅಲೀಂ ದಿವಾನ್ ದರ್ಗಾದ ಸ್ಕೆಚ್ ಎಂದು ಇದ್ದು, ಈದ್ಗಾ ಮೈದಾನ 36 ಗುಂಟೆ ಎಂದಾಗಿದೆ. ಆದರೆ ಆ ನಕ್ಷೆಯಲ್ಲಿ ಭೂಮಾಪಕರ ಸಹಿ ಮಾತ್ರ ಇದ್ದು, ಆ ಇಲಾಖೆ ಮುಖ್ಯಸ್ಥರ ಸಹಿ ಇಲ್ಲ. ಗೆಜೆಟ್ ನೋಟಿಫಿಕೇಶನ್‌ನಲ್ಲಿ 7, 8, 12 ಮತ್ತು 16ರಲ್ಲಿ ಈದ್ಗಾ ಸುನ್ನಿ ಶಿವಮೊಗ್ಗ ನಗರ ಎಂದಷ್ಟೆ ಇದ್ದು, 1.20 ಗುಂಟೆ ಅಳತೆ ಇರುತ್ತದೆ. ಈ ಸ್ಥಳದ ವಿಳಾಸವು ಗೆಜೆಟ್ ನೋಟಿಫಿಕೇಶನ್‌ನಲ್ಲಿ ಇಲ್ಲ. ಕೇವಲ ಸ್ಥಳ ತನಿಖೆ ವರದಿ ಮೇರೆಗೆ ಹಾಗೂ ಗೆಜೆಟ್ ನೋಟಿಫಿಕೇಶನ್ ಆಧಾರದ ಮೇಲೆ ಮನವಿದಾರರ ಕೋರಿಕೆಯಂತೆ ಅಳತೆ ದಾಖಲಿಸುವುದು ಸೂಕ್ತವಲ್ಲ ಎಂದು ಕೆ.ಎಸ್.ಈಶ್ವರಪ್ಪ ಹೇಳಿದರು. ದರ್ಗಾದ ಒಳಗಡೆ ಮೈದಾನಕ್ಕಾಗಿ 36 ಗುಂಟೆ ಮೀಸಲಿದೆ. ಇದೀಗ ಮೈದಾನದ ನೆಪದಲ್ಲಿ ಜಾಗವನ್ನು ಕಾನೂನು ಬಾಹಿರವಾಗಿ ವಿಸ್ತರಿಸಲು ಹೊರಟಿದ್ದಾರೆ. ನಕ್ಷೆಯಲ್ಲಿ ಭೂ ಮಾಪಕರ ಸಹಿ ಇದೆ. ಆದರೆ ಇಲಾಖೆ ಮುಖ್ಯಸ್ಥರ ಸಹಿ ಇಲ್ಲ ಎಂದು 2018ರಲ್ಲೇ ಪಾಲಿಕೆ ಆಯುಕ್ತರು ಡಿಸಿಗೆ ಪತ್ರ ಬರೆದಿದ್ದಾರೆ. ಮುಖ್ಯಸ್ಥರ ಸಹಿ ಇಲ್ಲದಿದ್ದರೆ ಅದನ್ನು ಕಸದ ಪುಟ್ಟಿಗೆ ಎಸೆಯಬೇಕಾಗುತ್ತದೆ. ಹಾಗಾಗಿ ಖಾತೆ ಆಗಿದೆ ಎನ್ನುವುದೇ ಕಾನೂನು ಬಾಹಿರ ಎಂದರು.

ಪ್ರಮುಖರಾದ ಇ.ವಿಶ್ವಾಸ್, ಕಾಚಿನಕಟ್ಟೆ ಸತ್ಯನಾರಾಯಣ, ವಾಗೀಶ್, ಎಸ್.ಜಿ.ಬಾಲು, ಮಹಾಲಿಂಗಶಾಸ್ತ್ರಿ, ರಾಜು, ರವಿ, ಶ್ರೀಕಾಂತ್ ಸುದ್ದಿಗೋಷ್ಠಿಯಲ್ಲಿದ್ದರು.