ಜಿಲ್ಲೆ

ಆಡಳಿತ ವ್ಯವಸ್ಥೆ ಪಾರದರ್ಶಕತೆಗೆ ತರಲು ಮುಂದಾಗಿ: ಅಧಿಕಾರಿಗಳಿಗೆ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಸಲಹೆ

ಹಲಗೂರು: ಕ್ಷೇತ್ರದಲ್ಲಿ ಐದು ವರ್ಷಗಳಿಂದ ಯಾವುದೇ ಅಭಿವೃದ್ಧಿ ಕೆಲಸಗಳು ಆಗಿಲ್ಲ. ಜಡ್ಡುಗಟ್ಟಿರುವ ಆಡಳಿತ ವ್ಯವಸ್ಥೆಯನ್ನು ಪಾರದರ್ಶಕತೆಗೆ ತರಲು ಅಧಿಕಾರಿಗಳು ಮುಂದಾಗಬೇಕು. ಸಾರ್ವಜನಿಕರ ಕೆಲಸ ಮಾಡಿದರೆ ನನ್ನಿಂದ ಯಾವುದೇ ತೊಂದರೆ ಇರುವುದಿಲ್ಲ ಎಂದು ಶಾಸಕ ಪಿ.ಎಂ.ನರೇಂದ್ರಸ್ವಾಮಿ ಹೇಳಿದರು.

ಸಮೀಪದ ಬಾಳೆಹೊನ್ನಿಗ ಗ್ರಾಮದಲ್ಲಿ ಬಸವೇಶ್ವರಸ್ವಾಮಿಗೆ ಪೂಜೆ ಸಲ್ಲಿಸಿ ನಂತರ ದಳವಾಯಿ ಕೋಡಿಹಳ್ಳಿ, ಎಚ್.ಬಸಾಪುರ, ಬ್ಯಾಡರಹಳ್ಳಿ, ಹಲಗೂರು, ಲಿಂಗಪಟ್ಟಣ, ನಿಟ್ಟೂರು, ತೊರೆಕಾಡನ ಹಳ್ಳಿಗಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಿಗೆ ಭೇಟಿ ನೀಡಿ ಸಾರ್ವಜನಿಕರ ಆಲಿಸಿದರು. ದಳವಾಯಿ ಕೋಡಿಹಳ್ಳಿ ಗ್ರಾಮದಲ್ಲಿ ಸರ್ಕಾರಿ ಪ್ರೌಢಶಾಲೆಗೆ ರಸ್ತೆ ವ್ಯವಸ್ಥೆ ಕಲ್ಪಿಸಬೇಕಿದೆ. ಭೀಮ ಜಲಾಶಯಕ್ಕೆ ನೀರು ತುಂಬಿಸುವ ಯೋಜನೆ ಅರ್ಧಕ್ಕೆ ನಿಂತಿದ್ದು, ಕಾಮಗಾರಿ ಪೂರ್ಣಗೊಳಿಸಬೇಕು ಎಂದರು.

ನಂದಿಪುರ ಸರ್ಕಾರಿ ಪ್ರೌಢಶಾಲೆಗೆ ಒಬ್ಬ ಶಿಕ್ಷಕರನ್ನು ನೇಮಿಸಿಕೊಡುವಂತೆ, ರಸ್ತೆ, ಚರಂಡಿ, ಕುಡಿಯುವ ನೀರಿನ ವ್ಯವಸ್ಥೆ ಮಾಡಿಸಿ ಕೊಡುವಂತೆ ಶಾಸಕರಿಗೆ ಸ್ಥಳೀಯರು ಮನವಿ ಸಲ್ಲಿಸಿದರು.

ಜನರು ನನ್ನಿಂದ ಬಯಸಿದಂತೆ ಅಭಿವೃದ್ಧಿ ಮಾಡುತ್ತೇನೆ. ಆಡಳಿತದಲ್ಲಿ ಬದಲಾವಣೆ, ಕಾನೂನು ಸುವ್ಯವಸ್ಥೆ ಭದ್ರವಾಗಿರಬೇಕು. ನನ್ನಲ್ಲಿ ಅಕ್ರಮಗಳಿಗೆ ಅವಕಾಶವಿಲ್ಲ. ಶ್ರೀಸಾಮಾನ್ಯರಿಗೆ ಸರ್ಕಾರದ ಯೋಜನೆಗಳನ್ನು ತಲುಪಿಸಬೇಕು. ನಮ್ಮ ಸರ್ಕಾರ ಘೋಷಿಸಿರುವ ಗ್ಯಾರಂಟಿ ಯೋಜನೆಗಳು ಬಡ ಕುಟುಂಬಗಳಿಗೆ ನೆರವಾಗಿದೆ ಎಂದರು.

ಒಂದು ತಿಂಗಳ ನಂತರ ಕ್ಷೇತ್ರದ ಗ್ರಾಮಗಳಿಗೆ ಭೇಟಿ ನೀಡಿ ಕೃತಜ್ಞತೆ ಸಲ್ಲಿಸಲು ಬಂದಿದ್ದೇನೆ. ಹಿಂದೆ ಮಳವಳ್ಳಿ ಪಟ್ಟಣದ ತಾಲೂಕು ಕೇಂದ್ರಕ್ಕೆ ಭೇಟಿ ನೀಡಿದ್ದೆ. ಸರ್ಕಾರ ರಚನೆಯಾದ ಮೇಲೆ ನನ್ನ ಬೇಡಿಕೆಗಳನ್ನು ಇಟ್ಟು ಬಂದಿದ್ದೇನೆ. ನಾನು ಅಧಿಕಾರಿಗಳೊಡನೆ ಮುಂದೆ ಪ್ರತಿ ತಾಲೂಕಿನಲ್ಲೂ ಸಾರ್ವಜನಿಕರ ಸಭೆ ನಡೆಸಿ ಜನರ ಅಹವಾಲುಗಳನ್ನು ಸ್ವೀಕರಿಸಿ ಪರಿಹರಿಸಲು ಪ್ರಯತ್ನಿಸುತ್ತೇನೆ ಎಂದು ಭರವಸೆ ನೀಡಿದರು.

ಮುಖಂಡರಾದ ಸುಂದರ್ ರಾಜ್, ಪದ್ಮನಾಭ, ಚಂದ್ರ ಕುಮಾರ್, ಬಸವರಾಜು, ಶಿವಕೆಂಚೇಗೌಡ, ಬಿ.ಕೆ.ಕೀರ್ತಿ, ಮಂಡ್ಯ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿರ್ದೇಶಕ ಎಚ್.ವಿ.ಅಶ್ವಿನ ಕುಮಾರ, ಬಾ.ಗೊ.ಕುಮಾರ್, ಅಬ್ದುಲ್ ಸತ್ತರ್ ಸಾಬ್, ರಾಜಣ್ಣ, ನಾಗಸಿದ್ದಯ್ಯ, ಕೆಂಪಣ್ಣ, ರವೀಶ್, ಜಮೀಲ್ ಇದ್ದರು.