ತಮ್ಮಡಿಕೊಪ್ಪ ಶಾಲೆಮುಖ್ಯಶಿಕ್ಷಕರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ಕೃಷ್ಣಮೂರ್ತಿ, ರಾಜು, ಶೇಖರಪ್ಪ, ಸುರೇಂದ್ರ, ಸರಿತಾ, ಜ್ಯೋತಿ ಇತರರಿದ್ದರು.  
ಜಿಲ್ಲೆ

ಮುಖ್ಯಶಿಕ್ಷಕರ ವಿರುದ್ಧ ತಮ್ಮಡಿಕೊಪ್ಪ ಗ್ರಾಮಸ್ಥರ ಪ್ರತಿಭಟನೆ

Shivamogga - Desk - Vinayakumar D B

ರಿಪ್ಪನ್‌ಪೇಟೆ: ಅರಸಾಳು ಗ್ರಾಪಂ ವ್ಯಾಪ್ತಿಯ ತಮ್ಮಡಿಕೊಪ್ಪ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿ ಗ್ರಾಮಸ್ಥರು ಶುಕ್ರವಾರ ಶಾಲಾ ಆವರಣದಲ್ಲಿ ಪ್ರತಿಭಟನೆ ನಡೆಸಿದರು.

ಎಸ್‌ಡಿಎಂಸಿ ಅಧ್ಯಕ್ಷ ಉಮೇಶ್ ನೇತೃತ್ವದಲ್ಲಿ ಪ್ರತಿಭಟನೆ ಮಾಡಿದ ಗ್ರಾಮಸ್ಥರು, ಮುಖ್ಯಶಿಕ್ಷಕ ಗಂಗಾನಾಯ್ಕ ಕೆಲವು ತಿಂಗಳಿಂದ ಶಾಲೆಗೆ ಸರಿಯಾಗಿ ಬರುತ್ತಿಲ್ಲ. ಮಕ್ಕಳ ಶಿಕ್ಷಣಕ್ಕೆ ತೊಡಕುಂಟು ಮಾಡುತ್ತಿದ್ದಾರೆ. ಹಣಕಾಸಿನ ಲೆಕ್ಕಾಚಾರಗಳನ್ನು ಸರಿಯಾಗಿ ನೀಡದೆ ಅಕ್ರಮ ಎಸಗಿದ್ದಾರೆ ಎಂದು ಆರೋಪಿಸಿದರು.
ಹಲವು ಬಾರಿ ಗಮನಕ್ಕೆ ತಂದರೂ ತಿದ್ದಿಕೊಳ್ಳುವ ಪ್ರಯತ್ನ ಮಾಡಲಿಲ್ಲ. 1ರಿಂದ 7ನೇ ತರಗತಿವರೆಗಿನ ಒಟ್ಟು 50 ಮಕ್ಕಳ ವಿದ್ಯಾಭ್ಯಾಸಕ್ಕೆ ನಾಲ್ಕು ಜನ ಶಿಕ್ಷಕರಿದ್ದಾರೆ. ಮುಖ್ಯಶಿಕ್ಷಕರೇ ಅನಧಿಕೃತ ಗೈರಾಗುವುದರಿಂದ ಶಾಲೆಯ ವ್ಯವಸ್ಥೆಯನ್ನು ಸುಸ್ಥಿತಿಯಲ್ಲಿಡಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಇಲಾಖೆಯು ಮುಖ್ಯಶಿಕ್ಷಕರ ವಿರುದ್ಧ ಶಿಸ್ತುಕ್ರಮ ಜರುಗಿಸಿ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.
ಸ್ಥಳಕ್ಕಾಗಮಿಸಿ ಮನವಿ ಸ್ವೀಕರಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣಮೂರ್ತಿ, ಮೇಲಧಿಕಾರಿಗಳ ಗಮನಕ್ಕೆ ತಂದು ಶೀಘ್ರವಾಗಿ ಸಮಸ್ಯೆಯನ್ನು ಪರಿಹರಿಸುವ ಭರವಸೆ ನೀಡಿದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಪ್ರತಿಭಟನೆಯನ್ನು ಹಿಂಪಡೆದರು. ಪಿಎಸ್‌ಐ ಪ್ರವೀಣ್ ಹಾಜರಿದ್ದರು.
ಗ್ರಾಮಸ್ಥರಾದ ಕೃಷ್ಣಮೂರ್ತಿ, ರಾಜು, ಶೇಖರಪ್ಪ, ಸುರೇಂದ್ರ, ಸರಿತಾ, ಜ್ಯೋತಿ ಇತರರಿದ್ದರು.