ಜಿಲ್ಲೆ

ತಲಪಾಡಿ ಗಡಿ ಪಾಸ್ ವ್ಯವಸ್ಥೆ ಚುರುಕು

Dakshina Kannada

ಮಂಗಳೂರು: ಗಡಿನಾಡಿನಲ್ಲಿರುವ ಸ್ವಪಕ್ಷೀಯರಿಂದಲೇ ತೀವ್ರ ವಿರೋಧ ಎದುರಿಸಿದ ಬಳಿಕ ತಲಪಾಡಿಯಲ್ಲಿ ಕೇರಳ-ಕರ್ನಾಟಕ ಗಡಿ ದಾಟುವ ದಕ್ಷಿಣ ಕನ್ನಡ ಮತ್ತು ಕಾಸರಗೋಡು ನಿವಾಸಿಗಳ ವಿಷಯದಲ್ಲಿ ದಕ್ಷಿಣ ಕನ್ನಡ ಜಿಲ್ಲಾಡಳಿತದ ಭಾಗವಾಗಿರುವ ಜನಪ್ರತಿನಿಧಿಗಳು ಮೃದುವಾಗಿದ್ದಾರೆ.

ತಲಪಾಡಿಯಲ್ಲಿ ದಕ್ಷಿಣ ಕನ್ನಡ ಜಿಲ್ಲಾಳಿತದಿಂದ ಸೋಮವಾರ ಮೂರು ಹೆಲ್ಪ್ ಡೆಸ್ಕ್‌ಗಳನ್ನು ತಾತ್ಕಾಲಿಕವಾಗಿ ತೆರೆಯಲಾಗಿದೆ. ಇದು ವೆಬ್‌ಸೈಟ್ ಮೂಲಕ ಪಾಸ್‌ಗೆ ಅರ್ಜಿ ಸಲ್ಲಿಸಲು ತಿಳಿಯದವರು ಈ ಹೆಲ್ಪ್ ಡೆಸ್ಕ್‌ನ ನೆರವು ಪಡೆಯಬಹುದು. ಸ್ಥಳದಲ್ಲೇ ಪಾಸ್ ಅನುಮೋದನೆ ಪಡೆಯುವುದಿಲ್ಲ. ಅದನ್ನು ಕ್ರಮ ಪ್ರಕಾರ ಅನುಮೋದನೆಗೊಳಿಸುವುದು ವ್ಯವಸ್ಥೆಯ ಉದ್ದೇಶ.

ಸಲ್ಲಿಸಿದ ಅರ್ಜಿಗಳ ವಿಲೇಗೂ ವೇಗ ದೊರೆತಿದೆ. ಸೋಮವಾರ ಸಾಯಂಕಾಲ ತನಕ ಪಾಸ್ ಕೋರಿ ಕಾಸರಗೋಡು ಜಿಲ್ಲೆಯಿಂದ 4,500 ಅರ್ಜಿಗಳು ಸಲ್ಲಿಕೆಯಾಗಿದ್ದು, 2,300 ಅರ್ಜಿಗಳ ವಿಲೇವಾರಿ ಮಾಡಲಾಗಿದೆ. 800 ಪಾಸ್‌ಗಳನ್ನು ವಿತರಿಸಲಾಗಿದೆ.

ಜಿಲ್ಲಾ ಉಸ್ತುವಾರಿ ಸಚಿವರ ನಿರ್ದೇಶನದಂತೆ ತಲಪಾಡಿ ಜತೆಗೆ ದಕ್ಷಿಣ ಕನ್ನಡ ಮತ್ತು ಕಾಸರಗೋಡು ಜಿಲ್ಲೆಗಳ ಇತರ ಗಡಿ ಪ್ರದೇಶಗಳನ್ನು ದಾಟಲು ಕೂಡ ಅವಕಾಶ ಮಾಡಿಕೊಡುವ ಸಿದ್ಧತೆ ನಡೆದಿದೆ ಎಂದು ಸಹಾಯಕ ಆಯುಕ್ತ ಮದನ್ ಮೋಹನ್ ವಿಜಯವಾಣಿಗೆ ತಿಳಿಸಿದ್ದಾರೆ.

ಸ್ವಂತ ವಾಹನ ಇಲ್ಲದವರು ಕೂಡ ಗಡಿ ದಾಟಲು ವೆಬ್‌ಸೈಟ್ ಮೂಲಕ ಪಾಸ್‌ಗೆ ಅರ್ಜಿ ಸಲ್ಲಿಸಬಹುದು ಎಂದವರು ತಿಳಿಸಿದರು. ಪ್ರಸ್ತಾವಿತ ಪಾಸ್ ವ್ಯವಸ್ಥೆ ಸಂಬಂಧಿಸಿ ಬಿಜೆಪಿ ಕಾಸರಗೋಡು ಜಿಲ್ಲಾ ಕಮಿಟಿ ಸೋಮವಾರ ಬೆಳಗ್ಗೆ ತಲಪಾಡಿ ಗಡಿ ಪ್ರದೇಶದಲ್ಲಿ ಬೃಹತ್ ಪ್ರತಿಭಟನೆ ಆಯೋಜಿಸಿತ್ತು.