ತರೀಕೆರೆ: ಹಲವು ಪ್ರಥಮಗಳಿಗೆ ಮುನ್ನುಡಿ ಬರೆದು ಜನಮನ್ನಣೆ ಗಳಿಸಿರುವ ತಾಲೂಕಿನ ಅಮೃತಾಪುರ ಗ್ರಾಪಂ, ಇದೀಗ ಮತ್ತೊಂದು ಹೆಜ್ಜೆ ಮುಂದೆ ಸಾಗಿ ಡಿಜಿಟಲ್ ಗ್ರಂಥಾಲಯ ಆರಂಭಿಸಿದೆ. ವಿಶ್ವದ ವಿದ್ಯಮಾನ ಬೆರಳ ತುದಿಯಲ್ಲಿ ಎಂಬ ಮಾತಿಗೆ ಪೂರಕವಾಗಿ ಜಿಲ್ಲೆಯಲ್ಲೇ ಮೊದಲ ಡಿಜಿಟಲ್ ಗ್ರಂಥಾಲಯ ಹೊಂದಿದ ಹೆಗ್ಗಳಿಕೆಗೆ ಪಾತ್ರವಾಗಿದೆ.
ಜ್ಞಾನ ಅಮೃತ ಹೆಸರಿನ ಈ ಡಿಜಿಟಲ್ ಗ್ರಂಥಾಲಯದಲ್ಲಿ ಕಲೆ, ಸಾಹಿತ್ಯ, ವಿಜ್ಞಾನ, ಸಾಮಾನ್ಯ ಜ್ಞಾನ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಗತ್ಯವಿರುವ 6 ಸಾವಿರಕ್ಕೂ ಅಧಿಕ ಪುಸ್ತಕ ಲಭ್ಯವಿದೆ. ಓದುಗರ ಅಭಿರುಚಿಗೆ ಪೂರಕವಾದ ವಾತಾವರಣ ಕಲ್ಪಿಸಲಾಗಿದೆ.
ಓದುಗರಿಗೆ ವ್ಯವಸ್ಥಿತವಾದ ಆಸನ, ವಿದ್ಯುನ್ಮಾನ ಸೌಲಭ್ಯ ಒದಗಿಸಲಾಗಿದೆ. ಮಹಿಳಾ ಓದುಗರು ಮತ್ತು ಲೈಬ್ರರಿಯಲ್ಲಿರುವ ವಿವಿಧ ಪರಿಕರಗಳ ಸುರಕ್ಷತೆ ದೃಷ್ಟಿಯಿಂದ ಸಿಸಿ ಟಿವಿ ಅಳವಡಿಸಲಾಗಿದೆ. ಕುಡಿಯುವ ನೀರು ಮತ್ತು ಶೌಚಗೃಹದ ವ್ಯವಸ್ಥೆ ಮಾಡಲಾಗಿದೆ.
ಗ್ರಾಮಸ್ಥರ ದೂರದೃಷ್ಟಿ ಮತ್ತು ಜನಪರ ಕಾಳಜಿಗೆ ಈ ಗ್ರಂಥಾಲಯ ಸಾಕ್ಷಿ. ಜಿಲ್ಲೆಯ ಇತರೆ ಗ್ರಾಪಂಗಳಿಗೆ ಮಾದರಿಯಾಗಿ ಹೊರಹೊಮ್ಮುತ್ತಿರುವ ಅಮೃತಾಪುರ ಅಭಿವೃದ್ಧಿಗೆ ಗ್ರಾಮಸ್ಥರು ಕಾಲ ಕಾಲಕ್ಕೆ ಕಂದಾಯ ಪಾವತಿಸುತ್ತಿದ್ದಾರೆ. ಜತೆಗೆ ಉದಾರವಾಗಿ ದೇಣಿಗೆಯನ್ನೂ ನೀಡುತ್ತಿದ್ದಾರೆ. ಕರೊನಾ ಸಂದರ್ಭ ಮಾಸ್ಕ್ ವಿತರಣೆಗೆ 30 ಸಾವಿರ ರೂ. ಸಂಗ್ರಹಿಸಿಕೊಟ್ಟ ಗ್ರಾಮಸ್ಥರು, ಡಿಜಿಟಲ್ ಗ್ರಂಥಾಲಯ ನಿರ್ವಣಕ್ಕೆ ಕೈಲಾದಷ್ಟು ನೆರವು ನೀಡಿದ್ದಾರೆ. ಗ್ರಾಪಂ ಮಾಜಿ ಉಪಾಧ್ಯಕ್ಷ ಎ.ಆರ್.ರವಿಕುಮಾರ್ ಗ್ರಾಪಂ ಕಚೇರಿ ನವೀಕರಣಕ್ಕೆ 90 ಸಾವಿರ ರೂ. ದೇಣಿಗೆ ನೀಡಿದ್ದಾರೆ.
ಗ್ರಂಥಾಲಯದಲ್ಲಿ ಏನಿದೆ?: ಒಂದು ಸಾವಿರ ಜಿಬಿ ಸಾಮರ್ಥ್ಯದ ಹಾರ್ಡ್ಡಿಸ್ಕ್ನಲ್ಲಿ ಸಾಹಿತ್ಯ, ವಿಜ್ಞಾನ, ಸಾಮಾನ್ಯ ಜ್ಞಾನ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅವಶ್ಯವಿರುವ 6 ಸಾವಿರದಷ್ಟು ಪರಾಮರ್ಶನಾ ಗ್ರಂಥಗಳ ಸಾಫ್ಟ್ ಪ್ರತಿ ಹೊರತಾಗಿಯೂ ಮೂರು ಸಾವಿರ ಪುಸ್ತಕಗಳನ್ನು ಹಾರ್ಡ್ ಡಿಸ್ಕ್ನಲ್ಲಿ ಅಳವಡಿಸಲಾಗಿದೆ. ಹಾರ್ಡ್ ಡಿಸ್ಕ್ನಲ್ಲಿ ಅಡಕವಾಗಿರುವ ಮೂರು ಸಾವಿರ ಪುಸ್ತಕಗಳ ಪಿಡಿಎಫ್ ಪ್ರತಿಯನ್ನು ಇಂಟರ್ನೆಟ್ ವ್ಯವಸ್ಥೆ ಇಲ್ಲದೆಯೂ ಗ್ರಂಥಾಲಯದ ಕಂಪ್ಯೂಟರ್ನಲ್ಲಿ ಓದಬಹುದು. ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳ ಅನುಕೂಲಕೆ ನಿರ್ಬಂಧಿತ ನಿಯಮಾನುಸಾರ ವೈ-ಫೈ ಬಳಕೆಗೆ ಅವಕಾಶ ಕಲ್ಪಿಸಲಾಗಿದೆ.
ಕರೊನಾ ಮಹಾಮಾರಿ ಆವರಿಸಿರುವ ಈ ಸಂದರ್ಭದಲ್ಲಿ ಅಮೃತಾಪುರ ಗ್ರಾಮದಲ್ಲಿ ತೆರೆದಿರುವ ಡಿಜಿಟಲ್ ಗ್ರಂಥಾಲಯ ಓದುಗರ ಜ್ಞಾನ ಹೆಚ್ಚಿಸಲು ಪ್ರಯೋಜನಕಾರಿಯಾಗಿದೆ. ರಾಜ್ಯದ ಯಾವುದೇ ಭಾಗಗಳ ಓದುಗರು ಕ್ಯೂ-ಆರ್ ಕೋಡ್ ಸ್ಕ್ಯಾನ್ ಮಾಡುವ ಮೂಲಕ ಡಿಜಿಟಲ್ ಲೈಬ್ರರಿಗೆ ಲಾಗಿನ್ ಆಗಿ ಪಠ್ಯ, ಸ್ಪರ್ಧಾತ್ಮಕ ಪರೀಕ್ಷೆಯ ಕಲಿಕಾ ಸಂಪನ್ಮೂಲ ಅಧ್ಯಯನ ಮಾಡಬಹುದು ಎನ್ನುತ್ತಾರೆ ಗ್ರಾಪಂ ಆಡಳಿತಾಧಿಕಾರಿ ಟಿ.ಎಸ್.ಗಣೇಶ್.
ಅಮೃತಾಪುರ ಗ್ರಾಪಂಗೆ 2018-19ನೇ ಸಾಲಿನಲ್ಲಿ ಘೊಷಿಸಲಾದ ಗಾಂಧಿ ಗ್ರಾಮ ಪುರಸ್ಕಾರ ಅನುದಾನದ ಜತೆಗೆ ಸ್ಥಳೀಯರು, ಜನಪ್ರತಿನಿಧಿಗಳು ಉದಾರತೆ ತೋರಿ ದೇಣಿಗೆ ನೀಡಿದ್ದರಿಂದ ಡಿಜಿಟಲ್ ಗ್ರಂಥಾಲಯ ನಿರ್ವಣದ ಗುರಿ ಸಾಧಿಸಲಾಗಿದೆ. ಎಲ್ಲರ ಸಹಕಾರ ಮುಂದಿನ ಯೋಜನೆಗಳ ಅನುಷ್ಠಾನಕ್ಕೆ ಸಹಕಾರಿಯಾಗಿದೆ ಎಂಬುದು ಪಿಡಿಒ ಎನ್.ಕೆ.ಪವಿತ್ರಾ ಅವರ ಅಭಿಪ್ರಾಯ.
ಕ್ಯೂ-ಆರ್ ಕೋಡ್ನಿಂದ ಮನೆಗೇ ಲೈಬ್ರರಿ: ಡಿಜಿಟಲ್ ಲೈಬ್ರರಿ ಉಪಯೋಗಕ್ಕಾಗಿಯೇ ಕ್ಯೂ-ಆರ್ ಕೋಡ್ (ಕ್ವಿಕ್ ರೆಸ್ಪಾನ್ಸ್ ಕೋಡ್) ರೂಪಿಸಲಾಗಿದ್ದು, ಗ್ರಾಪಂ ವ್ಯಾಪ್ತಿಯ ಪ್ರತಿ ಮನೆಮನೆಗೆ ಹಂಚಿಕೆ ಮಾಡುವ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಗ್ರಾಪಂನಿಂದ ವಿತರಣೆಯಾಗುವ ಕ್ಯೂ-ಆರ್ ಕೋಡ್ ಅನ್ನು ಓದುಗರು ಮನೆಯಲ್ಲಿ ಅಂಟಿಸಿಕೊಳ್ಳಬೇಕು. ಸ್ಮಾರ್ಟ್ಫೋನ್ ಮೂಲಕ ಕ್ಯೂ-ಆರ್ ಕೋಡ್ ಅಪ್ಲಿಕೇಷನ್ ಇನ್ಸ್ಟಾಲ್ ಮಾಡಿ ಡಿಜಿಟಲ್ ಲೈಬ್ರರಿ ಪೇಜ್ಗೆ ಸೇರ್ಪಡೆಗೊಳ್ಳಬೇಕು. ಪತ್ರಿಕೆಗಳಲ್ಲಿ ಪ್ರಕಟವಾಗುವ ಕ್ಯೂ-ಆರ್ ಕೋಡ್ ಸಂಕೇತದಿಂದಲೂ ಯಾವುದೇ ಭಾಗದ ಓದುಗರು ಇನ್ಸ್ಟಾಲ್ ಮಾಡಿ ಪೇಜ್ಗೆ ಸೇರಬಹುದು. ಈ ಮೂಲಕ ವಿವಿಧ ಸಾಹಿತಿಗಳು, ಲೇಖಕರು, ಚಿಂತಕರು ಬರೆದ ಪುಸ್ತಕಗಳು, ಕಲಿಕೆಗೆ ಪೂರಕವಾದ ಯೂಟ್ಯೂಬ್ ಚಾನಲ್ ವಿಡಿಯೋಗಳನ್ನು ಉಪಯೋಗಿಸಿಕೊಳ್ಳಬಹುದು.
ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳಿಗೆ ಟ್ಯಾಬ್: ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುತ್ತಿರುವ ಓದುಗರ ಅನುಕೂಲಕ್ಕಾಗಿ ಎರಡು ಟ್ಯಾಬ್ಲೆಟ್ ಒದಗಿಸಲಾಗಿದೆ. ಟ್ಯಾಬ್ಗಳಲ್ಲಿ ಲಕ್ಷಾಂತರ ಪುಸ್ತಕಗಳನ್ನು ಅಂಗೈಯಲ್ಲೇ ಪರಾಮಶಿಸುವ ಸಲುವಾಗಿ ಉಪಯುಕ್ತ ಆಪ್ಗಳನ್ನು ಇನ್ಸ್ಟಾಲ್ ಮಾಡಲಾಗಿದೆ. ಕೆಪಿಎಸ್ಸಿ ಹಾಗೂ ಯುಪಿಎಸ್ಸಿ ಪರೀಕ್ಷೆ ಒಳಗೊಂಡಂತೆ ಹಲವು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಗತ್ಯ ಮಾರ್ಗದರ್ಶನ, ಪರಾಮರ್ಶನ ಸಾಹಿತ್ಯ ನೀಡಬಲ್ಲ ಜ್ಞಾನದೀಪ, ವಿಜಯೀಭವ, ಮಕ್ಕಳವಾಣಿ ಯೂಟ್ಯೂಬ್ಗಳು ಸೇರಿ ವಿವಿಧ ಜಾಲತಾಣಗಳ ವಿಡಿಯೋ ಮತ್ತು ವಿಳಾಸ ಅಡಕಗೊಳಿಸಲಾಗಿದೆ.
ಪಠ್ಯಪುಸ್ತಕವೂ ಲಭ್ಯ: ಡಿಜಿಟಲ್ ಲೈಬ್ರರಿಗೆ ಪ್ರತ್ಯೇಕ ಇ-ಮೇಲ್ ಇದೆ. ಇ-ಮೇಲ್ ಐಡಿಯಾ ಗೂಗಲ್ ಡ್ರೖೆವ್ನಲ್ಲಿ 15 ಜಿಬಿ ಸಾಮರ್ಥ್ಯದ ಮೆಮೊರಿ ಕಾರ್ಡ್ ಅಳವಡಿಸಲಾಗಿದೆ. ಗೂಗಲ್ ಡ್ರೖೆವ್ನಲ್ಲಿ ಸ್ಥಾಪಿಸಿರುವ ಡಾಕ್ಯೂಮೆಂಟ್ ಶೀಟ್ನಲ್ಲಿ ಎಲ್ಲ ರೀತಿಯ ವೆಬ್ಸೈಟ್ ಹೈಪರ್ ಲಿಂಕ್ ಕಾಪಿ ಮಾಡಲಾಗಿದೆ. ಓದುಗರು ಲಿಂಕ್ ಮೇಲೆ ಕ್ಲಿಕ್ ಮಾಡಿದಾಕ್ಷಣ ಕರ್ನಾಟಕ ರಾಜ್ಯ ಪುಸ್ತಕ ಮಂಡಳಿ (ಕೆಎಸ್ಡಿಬಿಸಿ) ಲಿಂಕ್ ಓಪನ್ ಆಗುತ್ತದೆ. ಅದರಲ್ಲಿ 1ರಿಂದ 10ನೇ ತರಗತಿವರೆಗಿನ ರಾಜ್ಯ ಮತ್ತು ಕೇಂದ್ರೀಯ ಪಠ್ಯಕ್ರಮದ ಪುಸ್ತಕಗಳು ಲಭ್ಯವಾಗಲಿದೆ. ಜತೆಗೆ ಇ-ಸಾರ್ವಜನಿಕ ಗ್ರಂಥಾಲಯದ ವೆಬ್ಸೈಟ್ ಕೂಡ ಲಿಂಕ್ ಆಗಿದೆ. ಇದರಲ್ಲಿ ಬೆಂಗಳೂರು ಕೇಂದ್ರ ಗ್ರಂಥಾಲಯದಲ್ಲಿ ಲಭ್ಯವಿರುವ ಎಲ್ಲ ಪ್ರಕಾರಗಳ ಪುಸ್ತಕಗಳು ತೆರೆದುಕೊಳ್ಳಲಿವೆ. ಓದುಗರು ಮನೆಯಲ್ಲೇ ಕುಳಿತು ಗ್ರಂಥಾಲಯದ ಡ್ರೖೆವ್ ಲಿಂಕ್ ಬಳಸಿ ಪುಸ್ತಕ ಓದಬಹುದು. ಮಕ್ಕಳ ಕಲಿಕಾ ಕೌತುಕ ತಣಿಸುವ ಪುಸ್ತಕಗಳನ್ನೊಳಗೊಂಡ ‘ಚಿಲನ್ ಕಾರ್ನರ್’ ಲಿಂಕ್ ಕೂಡ ಇದೆ.