ಬೆಂಗಳೂರು : ಸಾರ್ವಜನಿಕ ಶಿಕ್ಷಣ ಇಲಾಖೆ ನಡೆಸಿದ್ದ 2019ರ ಶಿಕ್ಷಕರ ಅರ್ಹತಾ ಪರೀಕ್ಷೆಯ ಫಲಿತಾಂಶವನ್ನು ಶನಿವಾರ ಬಿಡುಗಡೆ ಮಾಡಿದೆ. ಅರ್ಹತಾ ಪರೀಕ್ಷೆಗೆ ಹಾಜರಾಗಿದ್ದ 2,02,991 ಅಭ್ಯರ್ಥಿಗಳ ಪೈಕಿ 7,980 ಅಭ್ಯರ್ಥಿಗಳು ಉತ್ತೀರ್ಣರಾಗಿದ್ದು, ಈ ವರ್ಷ ಶೇ.3.93 ಫಲಿತಾಂಶ ಬಂದಿದೆ. ಕಳೆದ ವರ್ಷ ಶೇ.12.6 ಲಿತಾಂಶ ಇತ್ತು. ಈ ಬಾರಿ ತುಂಬಾ ಕಡಿಮೆ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಕಳೆದ ಬಾರಿ ಪತ್ರಿಕೆ ಸುಲಭ ಮತ್ತು ಕೆಲವು ಪ್ರಶ್ನೆಗಳಿಗೆ ಕೃಪಾಂಕ ನೀಡಿದ ಪರಿಣಾಮ ಫಲಿತಾಂಶ ಹೆಚ್ಚಳವಾಗಿತ್ತು ಎಂದು ಶಿಕ್ಷಣ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಪರೀಕ್ಷೆಯು ಅಕ್ಟೋಬರ್‌ನಲ್ಲಿ ನಡೆದಿತ್ತು. ಸಾಮಾನ್ಯ ವರ್ಗದವರಿಗೆ ಶೇ.60 ಮತ್ತು ಹಿಂದುಳಿದ ಮತ್ತು ಪ.ಜಾ ಮತ್ತು ಪ.ಪಂ ಹಾಗೂ ವಿಕಲಚೇತನ ಅಭ್ಯರ್ಥಿಗಳಿಗೆ ಶೇ.55 ಅರ್ಹತಾ ಅಂಕಗಳನ್ನು ನಿಗದಿ ಪಡಿಸಿ ಫಲಿತಾಂಶ ಪ್ರಕಟಿಸಿದೆ. ಪತ್ರಿಕೆ-1ರಲ್ಲಿ 1,342 ಮತ್ತು ಪತ್ರಿಕೆ-2ರಲ್ಲಿ 6,638 ಅಭ್ಯರ್ಥಿಗಳು ಉತ್ತೀರ್ಣರಾಗಿದ್ದಾರೆ. ಅರ್ಹತೆ ಅಂಕಗಳನ್ನು ಗಳಿಸಿದ ಅಭ್ಯರ್ಥಿಗಳಿಗೆ ಗಣಕೀಕೃತ ಅಂಕಪಟ್ಟಿಯನ್ನು ಇಲಾಖೆಯು ವಿತರಿಸಲಿದ್ದು, ಯಾವುದೇ ಮುದ್ರಿತ ಅಂಕಪಟ್ಟಿ ವಿತರಿಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಅಭ್ಯರ್ಥಿಗಳೇ ಇಲಾಖೆ ವೆಬ್‌ಸೈಟ್‌ಗೆ ಹೋಗಿ ನೋಂದಣಿ ಸಂಖ್ಯೆ ನೀಡಿ ಅಂಕಪಟ್ಟಿ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ.
2019ರಲ್ಲಿ ಟಿಇಟಿಗೆ ಅರ್ಜಿ ಆಹ್ವಾನಿಸಲಾಗಿತ್ತು, ಮಾರ್ಚ್‌ನಲ್ಲಿ ಪರೀಕ್ಷೆ ಆಯೋಜಿಸಲು ಉದ್ದೇಶಿಸಲಾಗಿತ್ತು. ಕರೊನಾ ಬಂದ ಹಿನ್ನೆಲೆಯಲ್ಲಿ ಅಕ್ಟೋಬರ್‌ನಲ್ಲಿ ಪರೀಕ್ಷೆ ನಡೆಸಿತ್ತು. ಒಟ್ಟಾರೆ ಪರೀಕ್ಷೆ ನಡೆಸಿದ 45 ದಿನದೊಳಗೆ ಫಲಿತಾಂಶವನ್ನು ಪ್ರಕಟಿಸಿದೆ. ಈ ಬಾರಿ ಪ್ರಶ್ನೆಗಳಿಗೆ 1,039 ಆಕ್ಷೇಪಣೆ ಬಂದಿದ್ದವು. ಎಲ್ಲವನ್ನೂ ತಜ್ಞರ ಸಮಿತಿ ಪರಿಶೀಲಿಸಿ ಯಾವುದೇ ಕೃಪಾಂಕ ನೀಡುವ ಅವಶ್ಯಕತೆ ಇಲ್ಲ ಎಂದು ಹೇಳಿತ್ತು. ಈ ಹಿನ್ನೆಲೆಯಲ್ಲಿ ಅಂತಿಮವಾಗಿ ಉತ್ತರಗಳನ್ನು ಬಿಡುಗಡೆ ಮಾಡಿ, ಇದೀಗ ಫಲಿತಾಂಶವನ್ನು ಸಹ ಬಿಡುಗಡೆ ಮಾಡಿದೆ.