ಬೆಂಗಳೂರು: ಸಾರ್ವಜನಿಕ ಶಿಕ್ಷಣ ಇಲಾಖೆಯು ಅ.4ರಂದು 604 ಪರೀಕ್ಷಾ ಕೇಂದ್ರಗಳಲ್ಲಿ ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ(ಟಿಇಟಿ) ನಡೆಸಲಿದ್ದು, ಈ ಬಾರಿ ಪತ್ರಿಕೆ-1ಕ್ಕೆ 74,977 ಮತ್ತು ಪತ್ರಿಕೆ-2ಕ್ಕೆ 1,69,716 ಸೇರಿದಂತೆ ಒಟ್ಟಾರೆ 2,44,693 ಅಭ್ಯರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದಾರೆ.
ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ವರ್ಷ 21,395 ಅಭ್ಯರ್ಥಿಗಳು ಕಡಿಮೆಯಾಗಿದ್ದಾರೆ. ಕಳೆದ ವರ್ಷ ಪತ್ರಿಕೆ-1ಕ್ಕೆ 87,170 ಮತ್ತು ಪತ್ರಿಕೆ-2ಕ್ಕೆ 1,72,91 ಸೇರಿದಂತೆ ಒಟ್ಟಾರೆ 2,66,088 ಅಭ್ಯರ್ಥಿಗಳು ನೋಂದಾಯಿಸಿಕೊಂಡಿದ್ದರು. ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳಿಗೆ ಪ್ರವೇಶ ಪತ್ರಗಳನ್ನು ಡೌನ್‌ಲೋಡ್ ಮಾಡಿಕೊಳ್ಳಲು ಇಲಾಖೆ ಸೂಚಿಸಿದೆ.
ಈ ಹಿಂದೆ ಡೌನ್‌ಲೋಡ್ ಮಾಡಿಕೊಂಡಿರುವ ಪ್ರವೇಶ ಪತ್ರಗಳು ಊರ್ಜಿತವಾಗುವುದಿಲ್ಲ. ಆದ್ದರಿಂದ ಅಭ್ಯರ್ಥಿಯು ಹೊಸದಾಗಿ ಡೌನ್‌ಲೋಡ್ ಮಾಡಿಕೊಳ್ಳಬೇಕಿದೆ. ವಿದ್ಯಾರ್ಥಿಗಳು ಅರ್ಜಿ ಸಂಖ್ಯೆ ಮತ್ತು ಜನ್ಮದಿನಾಂಕವನ್ನು ನಮೂದಿಸಿ ಡೌನ್‌ಲೋಡ್ ಮಾಡಿಕೊಳ್ಳಬೇಕು. ವಿದ್ಯಾರ್ಥಿಗಳು ಪರೀಕ್ಷೆ ಆರಂಭಕ್ಕಿಂತ ಒಂದು ಗಂಟೆಯ ಮೊದಲೇ ಪರೀಕ್ಷಾ ಕೇಂದ್ರಕ್ಕೆ ಹಾಜರಾಗಬೇಕಿದೆ. ಕೇಂದ್ರದಲ್ಲಿರುವ ಆರೋಗ್ಯ ತಪಾಸಣಾ ಕೌಂಟರ್‌ನಲ್ಲಿ ಆರೋಗ್ಯ ತಪಾಸಣೆಗೆ ಒಳಪಡಬೇಕಿದೆ. ಪ್ರವೇಶ ಪತ್ರವಿಲ್ಲದ ಯಾವುದೇ ಅಭ್ಯರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶವಿರುವುದಿಲ್ಲ. ಈ ಬಗ್ಗೆ ಯಾವುದೇ ವಿನಾಯಿತಿ ಸಹ ಇರುವುದಿಲ್ಲವೆಂದು ಎಚ್ಚರಿಕೆಯನ್ನು ನೀಡಿದೆ. ಪರೀಕ್ಷೆಯ ಬೆಲ್ ನಂತರ ಕೇಂದ್ರಕ್ಕೆ ಬರುವ ಯಾವುದೇ ಅಭ್ಯರ್ಥಿಯ ಪ್ರವೇಶಕ್ಕೆ ಅವಕಾಶವಿರುವುದಿಲ್ಲ.
ಕರೊನಾ ಸೋಂಕಿತರು: ಕರೊನಾ ಸೋಂಕಿತ ಅಭ್ಯರ್ಥಿಗಳಿಗೂ ಪರೀಕ್ಷೆಗೆ ಪ್ರವೇಶ ಕಲ್ಪಿಸಿದೆ. ಕರೊನಾ ಪಾಸಿಟಿವ್ ಅಭ್ಯರ್ಥಿ ತಾಲೂಕು ಕರೊನಾ ಕೇರ್ ಸೆಂಟರ್‌ನಲ್ಲಿ ಚಿಕತ್ಸೆ ಪಡೆಯುತ್ತಿದ್ದರೂ ಜಿಲ್ಲಾ ಕರೊನಾ ಸೆಂಟರ್‌ಗೆ ಸಂಚರಿಸಲು ಅದಕ್ಕಾಗಿ ನಿಗದಿ ಪಡಿಸಿದ ಆಂಬುಲೆನ್ಸ್ ಬಳಕೆ ಮಾಡಿಕೊಳ್ಳಬೇಕು. ಕರೊನಾ ಪಾಸಿಟಿವ್ ಅಭ್ಯರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡಲು ಉಪನಿರ್ದೇಶಕರು ಸಾಕಷ್ಟು ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳಬೇಕಿದೆ. ಅದ್ದರಿಂದ ಪರೀಕ್ಷೆ ಬರೆಯುವ ಕರೊನಾ ಸೋಂಕಿತ ಅಭ್ಯರ್ಥಿಗಳು ಎರಡು ದಿನ ಮುಂಚಿತವಾಗಿ ಸಂಬಂಧಪಟ್ಟ ಜಿಲ್ಲಾ ಉಪನಿರ್ದೇಶಕರಿಗೆ ತಿಳಿಸಬೇಕು. ಸೋಂಕಿತ ಅಭ್ಯರ್ಥಿ ಆರೋಗ್ಯದ ಬಗ್ಗೆ ವೈದ್ಯಾಧಿಕಾರಿಗಳಿಂದ ಪಡೆದ ವೈದ್ಯಕೀಯ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ಸಂಬಂಧಿಸಿದ ಜಿಲ್ಲಾ ಉಪನಿರ್ದೇಶಕರಿಗೆ ಸಲ್ಲಿಸಬೇಕು.
ಹೋಮ್ ಐಸೋಲೇಶನ್‌ನಲ್ಲಿರುವ ಕರೊನಾ ಸೋಂಕಿತ ಅಭ್ಯರ್ಥಿ ಪರೀಕ್ಷೆ ಬರೆಯಲು ಅಪೇಕ್ಷಿಸಿದ್ದಲ್ಲಿ ಅಂತಹ ಅಭ್ಯರ್ಥಿಯ ಆರೋಗ್ಯ ಸುಸ್ಥಿತಿಯಲ್ಲಿದೆಯೆಂದು ಅವರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯಾಧಿಕಾರಿಗಳಿಂದ ಪಡೆದ ವೈದ್ಯಕೀಯ ಪ್ರಮಾಣ ಪತ್ರ ಸಲ್ಲಿಸಿಸದ್ದಲ್ಲಿ ಮಾತ್ರ ಆ ಅಭ್ಯರ್ಥಿಗಳಿಗೆ ಜಿಲ್ಲಾ ಕರೊನಾ ಕೇರ್ ಸೆಂಟರ್‌ನಲ್ಲಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗುತ್ತದೆ. ಈ ವೇಳೆ ಅಭ್ಯರ್ಥಿಯ ಪಾಲಕರು ‘ಅಪಾಯ ಒಪ್ಪಿಗೆ’ ಪತ್ರವನ್ನು ಉಪನಿರ್ದೇಶಕರಿಗೆ ಸಲ್ಲಿಸುವುದು ಕಡ್ಡಾಯ. ಉಳಿದಂತೆ ಸಾಮಾನ್ಯವಾಗಿ ವಿದ್ಯಾರ್ಥಿಗಳು ಮಾಡಬೇಕಿರುವುದು ಮತ್ತು ಮಾಡಬಾರದ ಸೂಚನೆಗಳನ್ನು ಈಗಾಗಲೇ ನೀಡುದ್ದು, ಇದನ್ನು ಅನುಸರಿಸಬೇಕೆಂದು ಇಲಾಖೆ ಸೂಚನೆ ನೀಡಿದೆ.