ಶಿಕ್ಷಕರಿಗೆ ಟಿಇಟಿ ಪರೀಕ್ಷೆ : ಸುಪ್ರೀಂ ತೀರ್ಪಿನ ಪ್ರಕಾರ ಕ್ರಮ ಎಂದ ಸಚಿವ ಮಧು ಬಂಗಾರಪ್ಪಮೈಸೂರು: ಸೇವಾನಿರತ ಶಿಕ್ಷಕರು ಕಡ್ಡಾಯವಾಗಿ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ) ಬರೆಯಬೇಕೆಂದು ಸುಪ್ರಿಂ ಕೋರ್ಟ್ ಆದೇಶ ನೀಡಿದ್ದು, ನ್ಯಾಯಾಲಯದ ತೀರ್ಪಿಗೆ ಬದ್ಧವಾಗಿ ಮುಂದಿನ ಕ್ರಮ ವಹಿಸಲಾಗುವುದು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.
ನಗರದ ಕಲಾಮಂದಿರದಲ್ಲಿ ಆಯೋಜಿಸಿದ್ದ ಮಕ್ಕಳ ದಸರಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಟಿಇಟಿ ಪರೀಕ್ಷೆ ರದ್ದು ಪಡಿಸಬೇಕು ಎಂಬುದು ಎಲ್ಲ ಶಿಕ್ಷಕರ ಒತ್ತಾಯವಾಗಿದೆ. ಆದರೆ, ಟಿಇಟಿ ಕಡ್ಡಾಯಗೊಳಿಸಿರುವುದು ರಾಜ್ಯ ಸರ್ಕಾರವಲ್ಲ. ಸುಪ್ರೀಂ ಕೋರ್ಟ್ ಈ ಬಗ್ಗೆ ತೀರ್ಪು ನೀಡಿದೆ ಎಂದರು.
ಮಕ್ಕಳು ಯಾವ ಮಾಧ್ಯಮದಲ್ಲಿ ವ್ಯಾಸಂಗ ಮಾಡಬೇಕು ಎಂಬುದು ಪಾಲಕರಿಗೆ ತೀರ್ಮಾನಕ್ಕೆ ಬಿಟ್ಟ ವಿಚಾರ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಆದರೆ, ರಾಜ್ಯದಲ್ಲಿ ಕನ್ನಡವನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ಎಲ್ಲ ಭಾಷೆಯ ಪಠ್ಯಪುಸ್ತಕಗಳಲ್ಲೂ (ಇಂಗ್ಲಿಷ್, ಹಿಂದಿ, ತಮಿಳು ಹಾಗೂ ಇತರೆ) ಕನ್ನಡವನ್ನು ಮುದ್ರಿಸಲು ಉದ್ದೇಶಿಸಲಾಗಿದೆ. ಈ ಬಗ್ಗೆ ಮುಖ್ಯಮಂತ್ರಿ ಅವರೊಂದಿಗೆ ಚರ್ಚಿಸಲಾಗಿದೆ. 1995ರಿಂದ ಕನ್ನಡ ಶಾಲೆಗಳನ್ನು ಅನುದಾನಕ್ಕೆ ಒಳಪಡಿಸಿಲ್ಲ. ಕನ್ನಡ ಶಾಲೆಗಳನ್ನು ಅನುದಾನಕ್ಕೆ ಒಳಪಡಿಸಲು ಮುಖ್ಯಮಂತ್ರಿ ಅವರಲ್ಲಿ ಮನವಿ ಮಾಡಿದ್ದೇನೆ ಎಂದರು.
ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಎಲ್ಲ ರೀತಿಯ ಕ್ರಮಗಳನ್ನು ರಾಜ್ಯ ಸರ್ಕಾರ ಕೈಗೊಳ್ಳುತ್ತಿದೆ. ದೇಶ ಉತ್ತಮ ದಿಕ್ಕಿಗೆ ಸಾಗಲು ಶಾಲೆಗಳು ಉತ್ತಮವಾಗಿ ಕಾರ್ಯನಿರ್ವಹಿಸುವ ಅವಶ್ಯಕತೆ ಇದೆ. ಸಂವಿಧಾನದ ಆಶಯಗಳು ಸರಿಯಾಗಿ ಜಾರಿಯಾಗಲು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರೆಯಬೇಕು ಎಂದರು.
ಶಾಲೆಗಳಲ್ಲಿ ಮಕ್ಕಳಿಗೆ ಸಂವಿಧಾನ ಪೀಠಿಕೆ ಓದಿಸುತ್ತಿದ್ದೇವೆ. ದೇಶದ ಪ್ರತಿಯೊಬ್ಬ ಪ್ರಜೆ ಪೀಠ ಓದಿದರೆ ಸಂವಿಧಾನಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರಿಗೆ ಸಲ್ಲಿಸುವ ಗೌರವವಾಗಿದೆ. ಜಾತಿ, ಮತ ಬಿಟ್ಟು ಎಲ್ಲರು ಸೌಹಾರ್ದತೆಯಿಂದ ಬದುಕಲು ಈ ಸಂವಿಧಾನ ಪೀಠಿಕೆ ಸಹಕಾರಿಯಾಗಿದೆ ಎಂದರು.
ವಿಧಾನ ಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ ಮಾತನಾಡಿ, ಸಂವಿಧಾನಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಹೇಳಿದಂತೆ ವಿದ್ಯಾರ್ಥಿಗಳು ಗ್ರಂಥಾಲಯದ ಬಳಿ ಇರಬೇಕು. ಪಾಲಕರು ಮಕ್ಕಳನ್ನು ಯಾವ ರೀತಿಯಾಗಿ ಓದಿಸಬೇಕು ಹಾಗೂ ಅವರಿಗೆ ಯಾವ ರೀತಿ ಸಂಸ್ಕೃತಿಯನ್ನು ತಿಳಿಸಿ ಕೊಡಬೇಕಾಗುತ್ತದೆ ಎಂಬುದು ಬಹಳ ಮುಖ್ಯವಾಗುತ್ತದೆ ಎಂದರು.
ಈ ಸಂದರ್ಭ ಬಾಲಪ್ರತಿಭೆಗಳಾದ ಆರ್. ರಕ್ಷಿತಾ, ಚಿರಸ್ವಿ ಬಾಲಸುಬ್ರಹ್ಮಣ್ಯನ್, ಅರ್ಪಿತ್ ಕಲಾಗುಡಿ ಹಾಗೂ ಪ್ರಥಮ್ ಗೌಡ ಅವರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರ ಅಧ್ಯಕ್ಷ ಡಾ.ಮಾನಸ, ಮಹಿಳಾ ಮತ್ತು ಮಕ್ಕಳ ದಸರಾ ಉಪ ಸಮಿತಿ ಅಧ್ಯಕ್ಷೆ ಮಲ್ಲಿಗೆ ವೀರೇಶ್, ಉಪ ವಿಶೇಷಾಧಿಕಾರಿ ಬಿ.ಎಂ. ಸವಿತಾ, ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಎಸ್.ಟಿ. ಜವರೇಗೌಡ, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷೆ ಮಂಜುಳಾ ಮಂಜುನಾಥ್ ಹಾಗೂ ಇತರರು ಇದ್ದರು.