ಜಿಲ್ಲೆ

ಟೆಸ್ಟ್, ಟ್ರ್ಯಾಕ್, ಟ್ರೀಟ್ ಮಾರ್ಗಸೂಚಿ ಜಾರಿ

Gadag

ಗದಗ: ಜಿಲ್ಲೆಯಾದ್ಯಂತ ಕೋವಿಡ್-19 ವೈರಸ್ ಹರಡುವುದನ್ನು ತಡೆಗಟ್ಟಲು ಮತ್ತು ಸಾರ್ವಜನಿಕರ ಆರೋಗ್ಯ ಹಿತದೃಷ್ಟಿಯಿಂದ ಏ.1ರಿಂದ ಏ.30ರವರೆಗೆ ಟೆಸ್ಟ್, ಟ್ರ್ಯಾಕ್, ಟ್ರೀಟ್ (ಪರೀಕ್ಷೆ, ಪತ್ತೆ, ಚಿಕಿತ್ಸೆ) ಸಂಬಂಧಿಸಿದ ಮಾರ್ಗಸೂಚಿ ಜಾರಿಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಸುಂದರೇಶಬಾಬು ತಿಳಿಸಿದ್ದಾರೆ.

ಮುಖಗವಸು ಧರಿಸದಿದ್ದರೆ ಅಂತಹವರ ವಿರುದ್ಧ ನಗರ ಪಾಲಿಕೆ ವ್ಯಾಪ್ತಿಯ ಪ್ರದೇಶಗಳಲ್ಲಿ 250 ರೂ. ಮತ್ತು ಇನ್ನಿತರ ಪ್ರದೇಶಗಳಲ್ಲಿ 100 ರೂ. ದಂಡವನ್ನು ವಿಧಿಸಲಾಗುವುದು. ಈ ಆದೇಶವನ್ನು ಉಲ್ಲಂಘಿಸುವವರ ವಿರುದ್ಧ ಭಾರತೀಯ ದಂಡ ಸಂಹಿತೆಯ ಕಲಂ 188 ಹಾಗೂ ವಿಪತ್ತು ನಿರ್ವಹಣಾ ಕಾಯ್ದೆ 2005ರ ಪ್ರಕಾರ ಕ್ರಮ ಜರುಗಿಸಲಾಗುವುದು.

ಕೋವಿಡ್ 19 ಸೋಂಕು ಹರಡುವಿಕೆ ತಡೆಗಟ್ಟಲು ಸಾರ್ವಜನಿಕ ಸ್ಥಳಗಳಲ್ಲಿ, ವಾರದ ಸಂತೆ, ಸಾರ್ವಜನಿಕ ಸಾರಿಗೆ ಮತ್ತು ಜನಸಂದಣಿ ಪ್ರದೇಶಗಳಲ್ಲಿ ಕಟ್ಟುನಿಟ್ಟಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ಸೂಚಿಸಿದ್ದಾರೆ.

65 ವರ್ಷದ ಮೇಲ್ಪಟ್ಟವರು, 10 ವರ್ಷದೊಳಗಿನ ಮಕ್ಕಳು ಹಾಗೂ ರೋಗಪೀಡಿತರು, ಗರ್ಭಿಣಿಯರು ವಿನಾಕಾರಣ ಮನೆಯಿಂದ ಹೊರಗೆ ಬರಬಾರದು. ಹೋಟೆಲ್ ಮತ್ತು ರೆಸ್ಟೋರೆಂಟ್​ಗಳು, ಶಾಪಿಂಗ್ ಮಾಲ್​ಗಳು, ಮಲ್ಟಿಪ್ಲೆಕ್ಸ್​ಗಳು, ಉದ್ಯಾನಗಳು, ಯೋಗ ಕೇಂದ್ರಗಳು, ಪ್ರದರ್ಶನ ಮಳಿಗೆಗಳಲ್ಲಿ ನಿಗದಿಗಿಂತ ಹೆಚ್ಚಿನ ಜನರು ಸೇರುವುದನ್ನು ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.