ಚಿತ್ರದುರ್ಗ: ಹೊರವಲಯದ ಮಲ್ಲಾಪುರ ಗ್ರಾಮ ಸಮೀಪದ ರಾಷ್ಟ್ರೀಯ ಹೆದ್ದಾರಿ 13ರಲ್ಲಿ ಭಾನುವಾರ ಮುಂಜಾನೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ವಿಜಯಪುರ ಜಿಲ್ಲೆಯ ಬಸನವಬಾಗೇವಾಡಿ ತಾಲೂಕಿನ ಕುದರಿಸಾಲವಾಡಗಿ ಗ್ರಾಮದ ಐವರು ಮೃತಪಟ್ಟಿದ್ದಾರೆ.
ಕುದರಿಸಾಲವಾಡಗಿ ಗ್ರಾಮದ ಎಸ್‌ಕೆಎಸ್ ಭಾರತ ಫೈನಾನ್ಸ್ ನೌಕರ ಸಂಗನಬಸವ ಮಲ್ಲಣ್ಣ ವಂದಾಲ (36), ಪತ್ನಿ ರೇಖಾ ಸಂಗನಬಸವ ವಂದಾಲ (29), ಪುತ್ರ ಅಗಸ್ತ್ಯ (7) ಹಾಗೂ ಸಹೋದರ ಸಂಬಂಧಿ ಯಾಳಗಿ ಗ್ರಾಮದ ಭೀಮಾಶಂಕರ ವಂದಾಲ (28) ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಭೀಮಾಶಂಕರನ ಗೆಳೆಯ ಮಧುಸೂದನ (28) ಆಸ್ಪತ್ರೆಯಲ್ಲಿ ಅಸುನೀಗಿದ್ದಾರೆ.
ಘಟನೆ ವಿವರ: ಸಂಗನಬಸವ ಕುಟುಂಬಸ್ಥರು ಹಾಗೂ ಸಹೋದರ ಸಂಬಂಧಿ ಭೀಮಾಶಂಕರ, ಗೆಳೆಯ ಮಧುಸೂದನ ಸೇರಿ ಏಳು ಜನರು ರಜೆ ಹಿನ್ನೆಲೆಯಲ್ಲಿ ತಮ್ಮ ಸ್ವಂತ ಕಾರಿನಲ್ಲಿ ಚಿಕ್ಕಮಗಳೂರಿಗೆ ಪ್ರವಾಸಕ್ಕೆ ತೆರಳುತ್ತಿದ್ದರು.
ಇಡೀ ಕುಟುಂಬ ಶನಿವಾರ ರಾತ್ರಿ 11 ಗಂಟೆಗೆ ವಿಜಯಪುರದ ಗಣೇಶ ನಗರದಲ್ಲಿರುವ ಮನೆಯಿಂದ ಕಾರಿನಲ್ಲಿ ಪ್ರಯಾಣ ಬೆಳೆಸಿತ್ತು. ಭಾನುವಾರ ನಸುಕಿನ ಜಾವ 3.30ಕ್ಕೆ ಲಾರಿಗೆ ಹಿಂಬದಿಯಿಂದ ಕಾರು ಡಿಕ್ಕಿಯಾಗಿ ಈ ಅವಘಡ ಸಂಭವಿಸಿದೆ. ನಿದ್ದೆಯ ಮಂಪರಿನಲ್ಲಿದ್ದ ಕಾರಣ ಈ ಅಪಘಾತ ಸಂಭವಿಸಿರಬಹುದು ಎಂಬುದು ಮೇಲ್ನೋಟಕ್ಕೆ ಕಂಡುಬಂದಿದೆ.
ಮೃತ ಸಂಗನಬಸವ ವಂದಾಲ ಪುತ್ರಿ ಅನ್ವಿತಾ (5), ಪುತ್ರ ಆದರ್ಶ್ ಅವರಿಗೆ ಗಾಯವಾಗಿದ್ದು, ಅವರನ್ನು ಹೆಚ್ಚಿನ ಚಿಕಿತ್ಸೆಗೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಗನ ಸಾವಿನ ಸುದ್ದಿ ಕೇಳಿದ ತಾಯಿಯ ರೋದನ ಮುಗಿಲು ಮುಟ್ಟಿತ್ತು. ವಂದಾಲ ಕುಟುಂಬಸ್ಥರ ಸಾವಿನಿಂದ ಕುದರಿಸಾಲವಾಡಗಿ ಗ್ರಾಮದಲ್ಲಿ ಶೋಕ ಮಡುಗಟ್ಟಿದೆ.