ಜಿಲ್ಲೆ

ವೈಯಕ್ತಿಕ ಅಪಘಾತ ವಿಮೆ ಸೇವಾ ನ್ಯೂನ್ಯತೆ ಸಾಬೀತು; 10 ಲಕ್ಷ ರೂ. ನೀಡಲು ವಿಮಾ ಕಂಪೆನಿಗೆ ಕೋರ್ಟ ಅದೇಶ

ಗೋಪಾಲಕೃಷ್ಣ ಪಾದೂರ್

ಉಡುಪಿ: ವೈಯಕ್ತಿಕ ಅಪಘಾತ ವಿಮೆ ಹೊಂದಿದ್ದ ವ್ಯಕ್ತಿಯೊಬ್ಬರು ನೀರಲ್ಲಿ ಮುಳುಗಿ ಮೃತಪಟ್ಟ ಮಾಹಿತಿಯನ್ನು ವಿಮಾ ಕಂಪೆನಿಗೆ ವಿಳಂಬವಾಗಿ ನೀಡಿದ ಕಾರಣ ನೀಡಿ ಕ್ಲೆಮ್​ ಮೊತ್ತ ಪಾವತಿಸಲು ನಿರಾಕರಿಸಿದ ವಿಮಾ ಕಂಪೆನಿ ಸೇವಾ ನ್ಯೂನ್ಯತೆ ಸಾಬೀತಾಗಿದ್ದು, ಮೃತ ವ್ಯಕ್ತಿಯ ವಾರಸುದಾರರಿಗೆ 10 ಲಕ್ಷ ರೂ. ವಿಮೆ ನೀಡಲು ಜಿಲ್ಲಾ ಗ್ರಾಹಕ ನ್ಯಾಯಾಲಯ ಅದೇಶ ಹೊರಡಿಸಿದೆ.

2018ರಲ್ಲಿ ಹೆಬ್ರಿಯ ನಿವಾಸಿ ಸಂತೋಷ್​ ಶೆಟ್ಟಿ ಎಂಬವರು ಕೆಬಿಎಲ್​ ಸುರಕ್ಷಾ ಗುಂಪು ವೈಯಕ್ತಿಕ ಅಪಘಾತ ವಿಮೆಯನ್ನು ಕಂಪೆನಿ ಬಳಿ ಪಡೆದುಕೊಂಡಿದ್ದರು. 2019 ರಂದು ಕಲ್ಲಿಲು ಜಾರ ಬಳಿ ನದಿಯಲ್ಲಿ ಸ್ನಾನಕ್ಕೆಂದು ಹೋದಾಗ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದರು. ಈ ಹಿನ್ನೆಲೆಯಲ್ಲಿ ಮೃತ ವ್ಯಕ್ತಿಯ ವಾರೀಸುದಾರರು ಪಾಲಿಸಿ ಮೊತ್ತವನ್ನು ನೀಡುವಂತೆ ಕಂಪೆನಿಯ ಬಳಿ ಅರ್ಜಿ ಸಲ್ಲಿಸಿದಾಗ ಕಂಪೆನಿಯು ಮಾಹಿತಿ ಹಾಗೂ ಕ್ಲೀಮ್​ನ್ನು ವಿಳಂಬವಾಗಿ ನೀಡಿರುವ ಕಾರಣವನ್ನು ನೀಡಿ 2021ರಲ್ಲಿ ಕ್ಲೆಮ್​ ಮೊತ್ತ ನೀಡಲು ನಿರಾಕರಿಸಿತ್ತು.

ನಂತರ ವಿಮಾದಾರರು ನ್ಯಾಯಕ್ಕಾಗಿ ಉಡುಪಿ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ನ್ಯಾಯಾಲಯದಲ್ಲಿ ದೂರು ಅರ್ಜಿ ದಾಖಲಿಸಿದ್ದರು. ದೂರುದಾರರು ಹಾಗೂ ಕಂಪೆನಿಯ ವಾದ ಪ್ರತಿವಾದಗಳನ್ನು ಆಲಿಸಿ ದಾಖಲೆಗಳನ್ನು ಪರಿಶೀಲಿಸಿದ ನ್ಯಾಯಾಲಯ "ಇನ್ಸುರೆನ್ಸ್​ ರೆಗ್ಯುಲೇಟರಿ ಅಥೋರಿಟಿ ಆಫ್​ ಇಂಡಿಯಾ" ಸುತ್ತೋಲೆ ಹಾಗೂ ರಾಷ್ಟ್ರೀಯ ಗ್ರಾಹಕ ಆಯೋಗ ನೀಡಿರುವ ಪ್ರಮುಖ ತೀರ್ಪನ್ನು ಆಧರಿಸಿ ಕಂಪೆನಿಗೆ ಅಪಘಾತ ವಿಮಾ ಮೊತ್ತ ರೂ.10 ಲಕ್ಷಕ್ಕೆ ಶೇ.10 ಬಡ್ಡಿಯಂತೆ ರೂ.25,000 ಹಾಗೂ ದಾವೆಯ ಖರ್ಚು ರೂ.10,000 ಸೇರಿಸಿ ಮೃತ ವಾರೀಸುದಾರರಾದ ಪುಷ್ಪ ಶೆಟ್ಟಿ ಮತ್ತು ದಿವ್ಯ ಶೆಟ್ಟಿಯವರಿಗೆ ಆ.30ರೊಳಗೆ ನೀಡುವಂತೆ ಆದೇಶಿಸಿದೆ. ದೂರುದಾರರ ಪರವಾಗಿ ಕಾರ್ಕಳದ ವಕೀಲ ವಿವೇಕಾನಂದ ಮಲ್ಯ ವಾದ ಮಂಡಿಸಿದ್ದರು.