ತೇರದಾಳ: ಕೇಂದ್ರ ಹಾಗೂ ರಾಜ್ಯ ಸರ್ಕಾರ ರೈತ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ ಸೋಮವಾರ ರೈತಪರ ಸಂಘಟನೆಗಳು ಕರೆ ನೀಡಿದ್ದ ಕರ್ನಾಟಕ ಬಂದ್‌ಗೆ ನಗರದಲ್ಲಿ ರೈತ ಸಂಘ, ಕರವೇ, ಕಾಂಗ್ರೆಸ್, ಜೆಡಿಎಸ್ ಹಾಗೂ ದಲಿತ ಸಂಘಟನೆಯವರು ಬೆಂಬಲಿಸಿ ಬೃಹತ್ ಪ್ರತಿಭಟನೆ ನಡೆಸಿದರು.
ಅಲ್ಲಮಪ್ರಭುದೇವರ ದೇವಸ್ಥಾನದಿಂದ ಪ್ರತಿಭಟನಾಕಾರರು ರ‌್ಯಾಲಿ ನಡೆಸಿ ಸಿದ್ಧೇಶ್ವರ ಗಲ್ಲಿ, ಜವಳಿ ಬಜಾರ್, ಕನ್ನಡ ಶಾಲೆ, ಚಾವಡಿ ವೃತ್ತ, ವಿಶೇಷ ತಹಸೀಲ್ದಾರ್ ಕಚೇರಿ, ಜಾಮೀಯಾ ಮಸೀದಿ, ಬಸ್ ನಿಲ್ದಾಣ, ಮಹಾವೀರ ವೃತ್ತ ಮುಖಾಂತರ ಸಾಗಿ ಬಸವೇಶ್ವರ ವೃತ್ತದ ಬಳಿ ರಾಜ್ಯ ಹೆದ್ದಾರಿಯಲ್ಲಿ ಕುಳಿತು ಪ್ರತಿಭಟನೆ ನಡೆಸಿದರು.
ರೈತ ಮುಖಂಡ ಮೃತ್ಯುಂಜಯ ತೆಳಗಿನಮನಿ, ಕಾಂಗ್ರೆಸ್ ಮುಖಂಡ ಪ್ರವೀಣ ನಾಡಗೌಡ ಮಾತನಾಡಿ, ಜಾರಿಗೊಳಿಸುತ್ತಿರುವ ಕೃಷಿ ಮಸೂದೆಗಳನ್ನು ಕೂಡಲೇ ವಾಪಸ್ ಪಡೆಯಬೇಕು. ಇಲ್ಲದಿದ್ದರೆ ಮುಂಬರುವ ದಿನಗಳಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಹರಿಹಾಯ್ದರು.
ಮುಖಂಡರಾದ ನೇಮಣ್ಣ ಸಾವಂತನವರ, ವಿಠ್ಠಲ ಸಿಂಗೆ ಸೇರಿ ಇನ್ನಿತರರು ಮಾತನಾಡಿದರು. ರಾಜ್ಯಪಾಲರಿಗೆ ಬರೆದ ಮನವಿ ಪತ್ರವನ್ನು ಉಪ ತಹಸೀಲ್ದಾರ್ ಶ್ರೀಕಾಂತ ಮಾಯನ್ನವರ ಅವರಿಗೆ ಸಲ್ಲಿಸಲಾಯಿತು. ಕರವೇ ಅಧ್ಯಕ್ಷ ಮೈನುದ್ದೀನ ಮೊಕಾಸಿ, ಕಾಂಗ್ರೆಸ್ ಅಧ್ಯಕ್ಷ ಅಶೋಕ ಆಳಗೊಂಡ, ಜೆಡಿಎಸ್‌ನ ಭುಜಬಲಿ ಕೆಂಗಾಲಿ, ದಲಿತ ಸಂಘಟನೆಯ ಸಿದ್ದು ದೊಡಮನಿ ಸೇರಿ ಜನಪ್ರತಿನಿಧಿಗಳು, ಮುಖಂಡರು ಪಾಲ್ಗೊಂಡಿದ್ದರು.
EndFragment