ಜಿಲ್ಲೆ

ಕೋವಿಡ್-19 ನಿಯಮ ಪಾಲನೆ

ತೇರದಾಳ: ಸಸಾಲಟ್ಟಿ ಜಿಪಂ ವ್ಯಾಪ್ತಿಯ ಏಳು ಗ್ರಾಮಗಳ ಐದು ಗ್ರಾಮ ಪಂಚಾಯಿತಿಗಳಲ್ಲಿ ಮೊದಲ ಹಂತದ ಮತದಾನ ಮಂಗಳವಾರ ಬಹುತೇಕವಾಗಿ ಶಾಂತಿಯುತವಾಗಿ ನಡೆಯಿತು. ಮತದಾನ ಕೇಂದ್ರಗಳಲ್ಲಿ ಕೋವಿಡ್-19 ನಿಯಮ ಕಟ್ಟುನಿಟ್ಟಾಗಿ ಪಾಲಿಸಲಾಯಿತು. ಮಧ್ಯಾಹ್ನ 2 ಗಂಟೆ ವೇಳೆಗೆ ಅಂದಾಜು ಶೇ.50ರಷ್ಟು ಮತದಾನವಾಯಿತು.

ಹಳಿಂಗಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿನ ಆರು ಮತಗಟ್ಟೆಗಳಿದ್ದವು. ತಮದಡ್ಡಿ, ಹನಗಂಡಿ, ಯರಗಟ್ಟಿ ಹಾಗೂ ಗೋಲಭಾವಿ ಗ್ರಾಮಗಳಲ್ಲಿ ಬಹುತೇಕ ಶಾಂತಿಯುತ ಮತದಾನ ನಡೆಯಿತು. ಕಾಲತಿಪ್ಪಿ, ಹಳಿಂಗಳಿ, ಸಸಾಲಟ್ಟಿಗಳಲ್ಲಿ ಮತಗಟ್ಟೆ ಬಳಿ ಮಾತಿನ ಚಕಮಕಿ ನಡೆದು ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿದಾಗ ಪೊಲೀಸರು ವಾತಾವರಣ ತಿಳಿಗೊಳಿಸಿದರು. ಹಳಿಂಗಳಿ ಸೂಕ್ಷ್ಮ ಮತಗಟ್ಟೆಗೆ ಜಿಲ್ಲಾ ಮೀಸಲು ಪಡೆ ನಿಯೋಜಿಸಲಾಗಿತ್ತು. ಸಸಾಲಟ್ಟಿ ಗ್ರಾಮದ ನೂತನ ಮತಗಟ್ಟೆ-50ರಲ್ಲಿ 110 ವಯಸ್ಸಿನ ಹಿರಿಯ ಜೀವಿ ಭಾಗವ್ವ ಪುಂಡಲೀಕ ಹುಕ್ಕೇರಿ ಮತ ಚಲಾಯಿಸಿದರು.

ಇಎಂಎಸ್ ಮೂಲಕ ಮಾಹಿತಿ ಸಂಗ್ರಹ
ಇಲೆಕ್ಷನ್ ಮಾನಿಟರಿಂಗ್ ಸಿಸ್ಟಂ (ಇಎಂಎಸ್) ಮೂಲಕ ಚುನಾವಣೆ ಇಲಾಖೆ ಇದೇ ಮೊದಲ ಬಾರಿಗೆ ತಂತ್ರಜ್ಞಾನಾಧಾರಿತ ಅಂಕಿ-ಅಂಶಗಳ ಸಂಗ್ರಹಣೆ ಮಾಡುವ ಕಾರ್ಯವನ್ನು ಪ್ರಾಯೋಗಿಕವಾಗಿ ಮೊದಲ ಹಂತದಲ್ಲಿ ಸಿಬ್ಬಂದಿಗೆ ಒದಗಿಸಿದೆ. ಈ ಮೂಲಕ ಕಣದಲ್ಲಿರುವ ಅಭ್ಯರ್ಥಿಗಳ ಮಾಹಿತಿ ಜತೆಗೆ ಪ್ರತಿ ಎರಡು ಗಂಟೆಗಳಿಗೊಮ್ಮೆ ಅಪ್‌ಲೋಡ್ ಮಾಡಲಾದ ಮತದಾನ ಸಮೀಕ್ಷೆಯ ವರದಿಯನ್ನು ಇಲಾಖೆಯ ಪ್ರತಿಯೊಬ್ಬರೂ ವೀಕ್ಷಿಸಲು ಅನುಕೂಲವಾಗಲಿದೆ. ಕ್ರೋಡೀಕೃತ ಅಂಕಿ-ಅಂಶಗಳ ಸಂಗ್ರಹಣೆಗಾಗಿ ಬಹಳಷ್ಟು ಸಹಾಯಕಾರಿಯಾಗಿದೆ.

EndFragment