ತೇರದಾಳ: ಅಂಬಿಗರ ಚೌಡಯ್ಯ (ತಳವಾರ) ಹಾಗೂ ಪರಿವಾರ ಸಮುದಾಯದವರು ಹಲವು ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಬುಧವಾರ ಮುಧೋಳ ನಗರದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆಗೆ ಮಹಾರಾಷ್ಟ್ರ ಹಾಗೂ ಬೆಳಗಾವಿ ಜಿಲ್ಲೆಯ ಜನ ಹೋಗದಿರಲು ಇಲ್ಲಿನ ಕುಡಚಿ ರಸ್ತೆಯ ನಾಲ್ಕನೇ ಕಾಲುವೆ ಹತ್ತಿರ ತೇರದಾಳ ಪೊಲೀಸರು ಸರ್ಪಗಾವಲು ವ್ಯವಸ್ಥೆ ಮಾಡಿದ್ದರು.
ಬನಹಟ್ಟಿ ಸಿಪಿಐ ಜೆ.ಕರುಣೇಶಗೌಡ, ಠಾಣಾಧಿಕಾರಿ ವಿಜಯ ಕಾಂಬಳೆ, ಸಿಬ್ಬಂದಿ ಕೆ.ಎಚ್. ಸನಹಟ್ಟಿ, ರಾಜು ಪೂಜಾರಿ, ಮಲ್ಲಿಕಾರ್ಜುನ ಕೆಂಚನ್ನವರ, ಸುಭಾಷ ಬೆವನೂರ, ಆನಂದ ಕೋಲೂರ ಹಾಗೂ ಒಂದು ಡಿಆರ್ ವಾಹನ ಸಿಬ್ಬಂದಿ ಚೆಕ್‌ಪೋಸ್ಟ್ ಗಡಿಯಲ್ಲಿ ನಿಂತು ಕುಡಚಿ ರಸ್ತೆಯಿಂದ ಬರುತ್ತಿದ್ದ ಪ್ರತಿಯೊಂದು ವಾಹನಗಳನ್ನು ತಪಾಸಣೆ ಮಾಡಿದರು.
ಪ್ರತಿಭಟನೆಗೆ ಆಗಮಿಸುತ್ತಿದ್ದ ಕೆಲವು ವಾಹನಗಳನ್ನು ತಡೆದು ವಾಪಸ್ ಕಳುಹಿಸುವ ಕೆಲಸ ಮಾಡಿದರು. ಮುಧೋಳ ನಗರದಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಜಿಲ್ಲೆಯ ಬೇರೆ ಬೇರೆ ಪ್ರದೇಶಗಳಿಂದ ಆಯಾ ಸಮುದಾಯದವರು ಪಾಲ್ಗೊಳ್ಳುತ್ತಿದ್ದಾರೆ. ವಿನಾಕಾರಣ ಬೇರೆ ಜಿಲ್ಲೆಯವರು ಬಂದು ಹೆಚ್ಚಿನ ಅನಾಹುತ ಸಂಭವಿಸಬಾರದು ಎಂದು ಮುಂಜಾಗ್ರತೆ ಕ್ರಮವಾಗಿ ಚೆಕ್‌ಪೋಸ್ಟ್‌ನಲ್ಲಿ ತಪಾಸಣೆ ನಡೆಸಲಾಗುತ್ತಿದೆ ಎಂದು ಸಿಪಿಐ ಜೆ. ಕರುಣೇಶಗೌಡ ತಿಳಿಸಿದರು.
EndFragment