ಗುರುಪುರ: ಎಡಪದವು ಗ್ರಾಪಂ ವ್ಯಾಪ್ತಿಯಲ್ಲಿ ಶತಮಾನೋತ್ಸವ ಆಚರಿಸುತ್ತಿರುವ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಕಳೆದ ಶೈಕ್ಷಣಿಕ ವರ್ಷದಿಂದ ‘ಮಕ್ಕಳಿದ್ದಾರೆ, ಶಿಕ್ಷಕರಿಲ್ಲ’ ಎಂಬಂತಾಗಿದ್ದರೂ ಶಾಲಾ ಆಡಳಿತ ಮಂಡಳಿ, ಪಾಲಕರ ಶತಾಯಗತ ಪ್ರಯತ್ನದ ಫಲವಾಗಿ ಈ ವರ್ಷವೂ ಶಾಲೆ ಉಸಿರಾಡುವಂತಾಗಿದೆ. ಆದರೆ ಶಾಲೆ ಎದುರಿಸುತ್ತಿರುವ ಸಮಸ್ಯೆಗಳು ನೂರಾರು!
ಒಂದರಿಂದ 7ನೇ ತರಗತಿ ಇರುವ ಈ ಶಾಲೆಯಲ್ಲಿ 40-50 ವರ್ಷಗಳ ಹಿಂದೆ 400ರಿಂದ 500 ವಿದ್ಯಾರ್ಥಿಗಳು ವಿದ್ಯಾರ್ಜನೆ ಮಾಡುತ್ತಿದ್ದರು. ಆಂಗ್ಲ ಮಾಧ್ಯಮ ಶಾಲೆ, ಖಾಸಗಿ ಶಾಲೆಗಳ ಭರಾಟೆಯಿಂದ ವರ್ಷದಿಂದ ವರ್ಷಕ್ಕೆ ಮಕ್ಕಳ ಸಂಖ್ಯೆ ಕ್ಷೀಣಿಸುತ್ತಾ ಬಂದಿದೆ. 2023-24ರಲ್ಲಿ ಮಕ್ಕಳ ಸಂಖ್ಯೆ 62 ಇದ್ದು, 2024-25ರಲ್ಲಿ 57, 2025-26ರಲ್ಲಿ 52ಕ್ಕೆ ಇಳಿದಿದೆ. 2022ರ ಮೇ 31ಕ್ಕೆ ಮುಖ್ಯ ಶಿಕ್ಷಕ ಕೃಷ್ಣ ನಾಯ್ಕ ನಿವೃತ್ತಿ ಬಳಿಕ ಇಲ್ಲಿಗೆ ಸರ್ಕಾರ ಶಿಕ್ಷಕರ ನಿಯೋಜನೆ ಮಾಡಿಲ್ಲ. ಹಾಗಾಗಿ 2023ರಿಂದ ಶಿಕ್ಷಕರಿಲ್ಲದ ಶಾಲೆಯಾಗಿದೆ.
2027-18ರಲ್ಲಿ ಇಲ್ಲಿಗೆ ಸುಂಕದಕಟ್ಟೆಯ ಶ್ರೀ ನಿರಂಜನ ಸ್ವಾಮಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಸನ್ನೊಳ್ಳಿ ಯು.ಡಿ. ನಿಯುಕ್ತರಾಗಿದ್ದು, 2024-25ರಲ್ಲಿ ಆ ಶಾಲೆ ಶೂನ್ಯ ಶಿಕ್ಷಕ ಶಾಲೆಯಾಗಿತ್ತು. ಆ ಹೊತ್ತಿಗೆ ಸನ್ನೊಳ್ಳಿಯವರು ಸುಂಕದಕಟ್ಟೆ ಶಾಲೆಗೆ ಮುಖ್ಯ ಶಿಕ್ಷಕರಾಗಿ ನಿಯುಕ್ತರಾಗಿದ್ದು, ಅವರಿಗೆ ತೆಂಕಎಡಪದವಿನಲ್ಲಿ ಶಾಲಾ ನಿರ್ವಹಣೆಯ ಹೆಚ್ಚುವರಿ ಕರ್ತವ್ಯ ಮಾತ್ರ ಸಿಕ್ಕಿತ್ತು. ಪರಿಣಾಮ ಕಳೆದ ವರ್ಷದಿಂದ ತೆಂಕಎಡಪದವು ಶಾಲೆಯಲ್ಲಿ ಶಿಕ್ಷಕರೇ ಇಲ್ಲದಂತಾಗಿದೆ!
ಹಿಂದೆ ಉಚ್ಛ್ರಾಯ ಸ್ಥಿತಿಯಲ್ಲಿದ್ದ ಈ ಶಾಲೆ ಇಂದು ದೈನ್ಯ ಸ್ಥಿತಿಯತ್ತ ಸಾಗಿದೆ. ಶಾಲೆ ಉಳಿಸುವ ನಿಟ್ಟಿನಲ್ಲಿ ಆಡಳಿತ ಮಂಡಳಿ ಪ್ರಯತ್ನ ಮುಂದುವರಿಸಿದೆ. ಈಗ ಕಾರ್ಪೊರೇಟ್ ಕಂಪನಿಗಳ ಸಿಆರ್‌ಎಸ್ ಇಲ್ಲ. ಸ್ಥಳೀಯ ಕೀರ್ತಿ ್ರೆಂಡ್ಸ್ ಸರ್ಕಲ್ ಶಾಲೆ ಉಳಿಸುವ ನಿಟ್ಟಿನಲ್ಲಿ ಸಾಕಷ್ಟು ಕೆಲಸ ಮಾಡುತ್ತಿದೆ. ಶಿಕ್ಷಣ ಇಲಾಖೆ ಇನ್ನಾದರೂ ಈ ಶಾಲೆಯ ಉನ್ನತಿಗೆ ಮನಸ್ಸು ಮಾಡಬೇಕು. ಸ್ಥಳೀಯ ಬಡ ಪಾಲಕರಿಗೆ ಈ ಶಾಲೆಯೇ ಆಧಾರ. ಎಂದು ಎಸ್‌ಡಿಎಂಸಿ ಸದಸ್ಯ ಪ್ರಸಾದ್ ಕುಮಾರ್ ಎಡಪದವು, ಪಾಲಕರಾದ ರೇಣುಕಾ, ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷೆ ಜಯಂತಿ ಮತ್ತಿತರರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಮೂವರು ಅತಿಥಿ ಶಿಕ್ಷಕರು
ಶಿಕ್ಷಕರಿಲ್ಲದ ಈ ಶಾಲೆಯಲ್ಲಿ ಶಾಲಾ ಆಡಳಿತ ವರ್ಗ, ಪಾಲಕರ ಸಹಕಾರದಿಂದ ಇಬ್ಬರು ಅತಿಥಿ ಶಿಕ್ಷಕರು ಕಾರ್ಯ ನಿರ್ವಹಿಸುತ್ತಿದ್ದರೆ, 2018-19ರಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿಯ ‘ಜ್ಞಾನದೀಪ’ ಯೋಜನೆಯಡಿ ಒಬ್ಬರು ಶಿಕ್ಷಕರು ಕೆಲಸ ಮಾಡುತ್ತಿದ್ದಾರೆ. ಸರ್ಕಾರದ ಶಿಕ್ಷಣ ನೀತಿಯನ್ವಯ ಅನುದಾನಿತ ಶಾಲೆಗಳಿಗೆ ಸರ್ಕಾರ ಅತಿಥಿ ಶಿಕ್ಷಕರ ನೇಮಕ ಮಾಡುವುದಿಲ್ಲ. ಸರ್ಕಾರಿ ಶಾಲೆಗಳ ಅತಿಥಿ ಶಿಕ್ಷಕರಿಗೆ ಸರ್ಕಾರಿ ವೇತನವಿದೆ. ಅನುದಾನಿತ ಶಾಲೆಗಳಿಗೆ ಹಿಂದೆ ಕಾರ್ಪೊರೇಟ್ ಕಂಪನಿಗಳ ಸಿಎಸ್‌ಆರ್ ನಿಧಿ ಲಭಿಸುತ್ತಿದ್ದರೂ, ಸರ್ಕಾರದ ನೀತಿಯಿಂದ ಈಗ ತೊಡಕುಂಟಾಗಿದೆ. ಸರ್ಕಾರದ ದ್ವಂದ್ವ ನೀತಿಯಿಂದ ಅನುದಾನಿತ ಶಾಲೆ ಮುಚ್ಚುವ ಸ್ಥಿತಿಗೆ ಬಂದಿವೆ. ಈ ಬಗ್ಗೆ ಶಿಕ್ಷಣ ಇಲಾಖೆ ಚಿಂತಿಸುವ ಅಗತ್ಯವಿದೆ ಎಂಬುದು ಪಾಲಕರ ಒತ್ತಾಯವಾಗಿದೆ.
ಶತಮಾನೋತ್ಸವ ಆಚರಿಸುತ್ತಿರುವ ಸಾಕಷ್ಟು ಮಕ್ಕಳಿರುವ ಈ ಶಾಲೆಯತ್ತ ಇನ್ನಾದರೂ ಶಿಕ್ಷಣ ಇಲಾಖೆ ಗಮನಹರಿಸಬೇಕು. ಕಳೆದ ಶೈಕ್ಷಣಿಕ ವರ್ಷದಿಂದ ಶಾಲೆಯಲ್ಲಿ ಒಬ್ಬರೂ ಶಿಕ್ಷಕರಿಲ್ಲ. ಶಿಕ್ಷಣಪ್ರೇಮಿಗಳ ಬಲದಿಂದ 3 ಮಂದಿ ಅತಿಥಿ ಶಿಕ್ಷಕರು ಕೆಲಸ ಮಾಡುತ್ತಿದ್ದಾರೆ. ಶಾಸಕ ಡಾ.ಭರತ್ ಶೆಟ್ಟಿ ಮೂಲಕ ಶಿಕ್ಷಣ ಇಲಾಖೆ(ಬಿಇಒ), ಜಿಲ್ಲಾ ಶಿಕ್ಷಣಾಧಿಕಾರಿಗಳಿಗೆ(ಡಿಡಿಪಿಐ) ಹಲವು ಬಾರಿ ಮನವಿ ನೀಡಿದ್ದರೂ ಸ್ಪಂದನೆ ಸಿಕ್ಕಿಲ್ಲ. ಇದರಿಂದ ಸುತ್ತಲ ಪ್ರದೇಶದ ಮಕ್ಕಳು, ಬಡ ಪಾಲಕರಿಗೆ ತೊಂದರೆಯಾಗಿದೆ. ನೋಬರ್ಟ್ ಮಥಾಯಿಸ್ ಎಸ್‌ಡಿಎಂಸಿ ಸದಸ್ಯ ಶಾಲಾ ಮಕ್ಕಳಿಗೆ ತೊಂದರೆಯಾಗದ ರೀತಿಯಲ್ಲಿ ಶಿಕ್ಷಣ ಇಲಾಖೆ ಕೆಲಸ ಮಾಡುತ್ತಿದೆ. ಶಿಕ್ಷಕರಿಲ್ಲದ ಅನುದಾನಿತ ಪ್ರಾಥಮಿಕ,ಪ್ರೌಢಶಾಲೆಗಳ ಮಾಹಿತಿ ಸರ್ಕಾರಕ್ಕೆ ಕಳುಹಿಸಿ ಕೊಟ್ಟಿದ್ದೇವೆ. ಶಿಕ್ಷಕರ ನೇಮಕಾತಿ, ನಿಯೋಜನೆ ಪ್ರಕ್ರಿಯೆ ನಡೆಯುತ್ತಿದೆ. ಈಶ್ವರ್ ಮಂಗಳೂರು ಉತ್ತರ ಬಿಇಒ ಅನುದಾನಿತ ಶಾಲೆಗಳ ಸಮಸ್ಯೆಗಳಿಗೆ ಸರ್ಕಾರ ಸ್ಪಂದಿಸಬೇಕು. ಅನುದಾನಿತ ಶಾಲೆಗಳ ಉಳಿಸುವ ನಿಟ್ಟಿನಲ್ಲಿ ಶಿಕ್ಷಣ ನೀತಿಯಲ್ಲಿ ತಿದ್ದುಪಡಿ ತರಬೇಕು. ಕಷ್ಟವಾದಲ್ಲಿ ಸರ್ಕಾರವೇ ಅನುದಾನಿತ ಶಾಲೆಗಳನ್ನು ಟೇಕ್ ಓವರ್ ಮಾಡಬೇಕು. ಒಟ್ಟಿನಲ್ಲಿ ಗ್ರಾಮೀಣ ಪ್ರದೇಶದ ಮಕ್ಕಳ ಶಿಕ್ಷಣಕ್ಕೆ ಸರ್ಕಾರ ಪೂರಕ ಕೆಲಸ ಮಾಡಬೇಕು. ಡಾ.ಭರತ್ ಶೆಟ್ಟಿ ಮಂಗಳೂರು ಉತ್ತರ ಶಾಸಕ https://www.vijayavani.net/divine-dance-artist-dies-friend-arrested https://www.vijayavani.net/wild-elephant-attack-24