ಜಿಲ್ಲೆ

ಒಳಚರಂಡಿ ಕಾಮಗಾರಿಗೆ ಭೂಮಿಪೂಜೆ

ಆನಂದಕುಮಾರ ಅಂಗಡಿ

ಹುಬ್ಬಳ್ಳಿ : ಹುಬ್ಬಳ್ಳಿ - ಧಾರವಾಡ ಸೆಂಟ್ರಲ್ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ವಾರ್ಡ್ ನಂ. 36ರ ಸಾಯಿನಗರ ವೃತ್ತದಿಂದ ಹೆಬ್ಬಳ್ಳಿ ರೈಲ್ವೆಗೇಟ್​ವರೆಗಿನ ಒಳಚರಂಡಿ ಕಾಮಗಾರಿಗೆ ಶಾಸಕ ಮಹೇಶ ಟೆಂಗಿನಕಾಯಿ ಅವರು ಸೋಮವಾರ ಭೂಮಿಪೂಜೆ ನೆರವೇರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಟೆಂಗಿನಕಾಯಿ, ಈ ಹಿಂದೆ ಹಲವಾರು ವರ್ಷಗಳಿಂದ ಇದ್ದ ಒಳಚರಂಡಿ ವ್ಯವಸ್ಥೆಯನ್ನು ತೆಗೆದುಹಾಕಿ, ಹೊಸ ಪೈಪ್​ಲೈನ್ ಅಳವಡಿಸಲಾಗುತ್ತಿದೆ. ಇದರಿಂದ ಒಳಚರಂಡಿ ನೀರು ಸರಾಗವಾಗಿ ಹರಿದುಹೋಗುತ್ತದೆ ಎಂದರು.

ನಗರದಲ್ಲಿ ಬಡಾವಣೆಗಳು ವೇಗವಾಗಿ ಬೆಳೆಯುತ್ತಿದ್ದು, ಅದಕ್ಕೆ ತಕ್ಕಂತೆ ವ್ಯವಸ್ಥೆಯನ್ನು ನವೀಕರಿಸಲಾಗುವುದು. ಜನರಿಗೆ ಮೂಲ ಸೌಕರ್ಯ ಒದಗಿಸಲು ಆದ್ಯತೆ ನೀಡಲಾಗುವುದು ಎಂದು ತಿಳಿಸಿದರು.

ಮಹಾನಗರ ಪಾಲಿಕೆ ಸದಸ್ಯರಾದ ರಾಜಣ್ಣ ಕೊರವಿ, ತಿಪ್ಪಣ್ಣ ಮಜಗಿ, ಹಿರಿಯರಾದ ಚನ್ನು ಪಾಟೀಲ, ವಾರ್ಡ್ ಅಧ್ಯಕ್ಷ ಬಸವರಾಜ ಮಾಡಳ್ಳಿ, ಪ್ರಮುಖರಾದ ವಿಶ್ವನಾಥ, ಪರಶುರಾಮ ಹೊಂಬಳ ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.