ಜಿಲ್ಲೆ

ಬಾಲಕಿ ಕುಟುಂಬಸ್ಥರಿಗೆ ಟೆಂಗಿನಕಾಯಿ ಸಾಂತ್ವನ

ಹುಬ್ಬಳ್ಳಿ : ಇಲ್ಲಿನ ವಿಶ್ವೇಶ್ವರ ನಗರದ ಉಪ ಕಾರಾಗೃಹದ ಬಳಿ ಇರುವ ಹತ್ಯೆಗೀಡಾದ ಬಾಲಕಿಯ ಮನೆಗೆ ಶಾಸಕ ಮಹೇಶ ಟೆಂಗಿನಕಾಯಿ ಬುಧವಾರ ಭೇಟಿ ನೀಡಿ, ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು.

ಈ ರೀತಿಯ ಕೃತ್ಯ ಭವಿಷ್ಯದಲ್ಲಿ ನಡೆಯಬಾರದು. ಇಡೀ ಮನುಕುಲ ತಗ್ಗಿಸುವಂತಹ ಇಂತಹ ದುಷ್ಕೃತ್ಯಗಳಿಗೆ ಕಡಿವಾಣ ಹಾಕಬೇಕು ಎಂದು ಶಾಸಕ ಟೆಂಗಿನಕಾಯಿ ಹೇಳಿದರು.

ಘಟನೆ ನಡೆದಾಗ ತಾವು ಪರಸ್ಥಳದಲ್ಲಿದ್ದಿದ್ದಾಗಿ ತಿಳಿಸಿದ ಶಾಸಕ ಟೆಂಗಿನಕಾಯಿ, ಸಂತ್ರಸ್ತ ಕುಟುಂಬಕ್ಕೆ ಸರ್ಕಾರ ಹೆಚ್ಚಿನ ಪರಿಹಾರ ನೀಡಬೇಕು. ಕನಿಷ್ಠ 25 ಲಕ್ಷ ರೂ. ನೆರವು ಹಾಗೂ ವಾಸಿಸಲು ಮನೆ ನೀಡುವಂತೆ ಸರ್ಕಾರಕ್ಕೆ ಒತ್ತಾಯಿಸಿದ್ದಾಗಿ ತಿಳಿಸಿದರು.

ನಂತರ ಕಿಮ್ಸ್​ಗೆ ಭೇಟಿ ನೀಡಿದ ಶಾಸಕ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪೊಲೀಸ್ ಅಧಿಕಾರಿ ಅನ್ನಪೂರ್ಣ ಹಾಗೂ ಇತರ ಪೊಲೀಸ್ ಸಿಬ್ಬಂದಿಯ ಆರೋಗ್ಯ ವಿಚಾರಿಸಿದರು. ಬಾಲಕಿಯನ್ನು ಕೊಲೆಗೈದ ಆರೋಪಿ ಮೇಲೆ ಗುಂಡು ಹಾರಿಸಿದ ಪೊಲೀಸ್ ಅಧಿಕಾರಿಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯ್ಕ, ಪಾಲಿಕೆ ಸದಸ್ಯರಾದ ಸಂತೋಷ ಚವ್ಹಾಣ, ಬೀರಪ್ಪ ಖಂಡೇಕಾರ, ಚಂದ್ರಿಕಾ ಮೇಸ್ತ್ರಿ, ರೂಪಾ ಶೆಟ್ಟಿ, ಬಿಜೆಪಿಯ ಸಿದ್ದು ಮೊಗಲಿಶೆಟ್ಟರ, ರವಿ ನಾಯ್ಕ, ಅಶೋಕ ವಾಲ್ಮೀಕಿ, ಮೇಘನಾ ಶಿಂಧೆ, ವಿಶ್ವನಾಥ ಪಾಟೀಲ, ಚನ್ನು ಹೊಸಮನಿ, ಮೋಹನ ಬಡಿಗೇರ, ಸುದರ್ಶನ ದಿನ್ನಿಹಳ್ಳಿ ಹಾಗೂ ಇತರರು ಇದ್ದರು.