ಜಿಲ್ಲೆ

ಟೆಂಡರ್ ಮೂಲಕ ಅಗತ್ಯ ವಸ್ತುಗಳ ಸರಬರಾಜು

ರಾಯಚೂರು: ವಿವಿಧ ಇಲಾಖೆಗಳಲ್ಲಿ ಬಾಕಿಯಿರುವ ಅನುದಾನ ಬಳಕೆ ಜತೆಗೆ ಈ ವರ್ಷದ ಕಾರ್ಯಕ್ರಮಗಳ ವಾರ್ಷಿಕ ಕ್ರಿಯಾ ಯೋಜನೆ ಸಿದ್ಧಪಡಿಸಬೇಕು. 15 ದಿನದೊಳಗೆ ಸಾದಿಲ್ವಾರು ವೆಚ್ಚಗಳ ಪಟ್ಟಿ ಸಲ್ಲಿಸಬೇಕು ಎಂದು ಅಧಿಕಾರಿಗಳಿಗೆ ಜಿ.ಪಂ. ಸಿಇಒ ಶಶಿಧರ ಕುರೇರ ಸೂಚಿಸಿದರು.

ಜಲ ನಿರ್ಮಲ ಸಭಾಂಗಣದಲ್ಲಿ ಜಿಲ್ಲಾ ವಲಯ ಕಾರ್ಯಕ್ರಮಗಳ ವಾರ್ಷಿಕ ಕ್ರಿಯಾ ಯೋಜನೆ ಸಭೆಯ ಅಧ್ಯಕ್ಷತೆ ವಹಿಸಿ ಗುರುವಾರ ಮಾತನಾಡಿದರು. ಇಲಾಖೆ ಅಧಿಕಾರಿಗಳು ಅಗತ್ಯ ಅನುದಾನದ ಪಟ್ಟಿ ಸಲ್ಲಿಸಿ ಅನುಮೋದನೆ ಪಡೆಯಬೇಕು. ವಿವಿಧ ಇಲಾಖೆಗಳಿಗೆ ಪೀಠೋಪಕರಣ ಅವಶ್ಯಯಿದ್ದಲ್ಲಿ ಬೆಲೆ ನಿಗದಿಪಡಿಸಿ ಪಟ್ಟಿ ಸಲ್ಲಿಸಬೇಕು. ಅಧಿಕಾರಿಗಳೇ ಖರೀದಿ ಮಾಡಿ ಬಿಲ್ ಸಲ್ಲಿಸಿದರೆ ಅದಕ್ಕೆ ಅನುದಾನ ಬಿಡುಗಡೆ ಮಾಡುವುದಿಲ್ಲ. ಎಲ್ಲದಕ್ಕೂ ಟೆಂಡರ್ ಕರೆದು ಸರಬರಾಜು ಮಾಡಲಾಗುವುದು ಎಂದರು.

ಈಜು ತರಬೇತುದಾರರನ್ನು ನೇಮಕ ಮಾಡಿಕೊಂಡು ನಗರದ ಈಜುಕೊಳದಲ್ಲಿ ಮಕ್ಕಳಿಗೆ ಉಚಿತ ತರಬೇತಿ ನೀಡಬೇಕು. ಒಳಾಂಗಣ ಕ್ರೀಡೆಗಳಿಗೂ ತರಬೇತುದಾರರನ್ನು ನೇಮಕ ಮಾಡಿಕೊಳ್ಳಬೇಕು ಎಂದು ಕ್ರೀಡಾ ಇಲಾಖೆ ಅಧಿಕಾರಿಗೆ ಸೂಚಿಸಿದರು. ಡೆಂೆ, ಮಲೇರಿಯಾ, ಫಾಗಿಂಗ್‌ಗೆ ಕ್ರಿಮಿನಾಶಕಗಳ ಅಗತ್ಯತೆ ಬಗ್ಗೆ ಪಟ್ಟಿ ಸಿದ್ಧಪಡಿಸಿ ಸಲ್ಲಿಸುವಂತೆ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಆಯುಷ್ ಇಲಾಖೆಯ ತಾಲೂಕು ಕಚೇರಿ ಕಟ್ಟಡಗಳ ದುರಸ್ತಿಗೆ ಅನುದಾನ ನಿಗದಿಪಡಿಸಲಾಗಿದೆ. ಸಿಂಧನೂರಿನ ಆಯುಷ್ ಆಸ್ಪತ್ರೆ ಛಾವಣಿ ನಿರ್ಮಾಣಕ್ಕೆ 25 ಲಕ್ಷ ರೂ., ಲಿಂಗಸುಗೂರಿನಲ್ಲಿನ ಕಟ್ಟಡ ದುರಸ್ತಿ, ಕವಿತಾಳ, ಬಳಗಾನೂರಿನಲ್ಲಿನ ಕಟ್ಟಡ ನಿರ್ಮಾಣ ಕಾರ್ಯವನ್ನು ಕೆಆರ್‌ಡಿಎಲ್‌ಗೆ ವಹಿಸಲಾಗಿದೆ. ಕಾಲಮಿತಿಯಲ್ಲಿ ಕಾಮಗಾರಿ ಪೂರ್ಣಗೊಳಿಸದಿದ್ದಲ್ಲಿ ದಂಡ ವಿಧಿಸಲಾಗುವುದು ಎಂದು ಶಶಿಧರ ಕುರೇರ ತಿಳಿಸಿದರು.

ಡಿಡಿಪಿಐ ವೃಷಭೇಂದ್ರಯ್ಯಸ್ವಾಮಿ ಮಾತನಾಡಿ, ಜಿಲ್ಲೆಯಲ್ಲಿ ಬಿಸಿಯೂಟಕ್ಕೆ 24.68 ಕೋಟಿ ರೂ. ನಿಗದಿಪಡಿಸಲಾಗಿದ್ದು, ಕ್ಷೀರಭಾಗ್ಯ ಯೋಜನೆಯಡಿ ಸಕ್ಕರೆ ಮತ್ತು ಇಂಧನ ವೆಚ್ಚ ಅನುದಾನವಾಗಿ 3.24 ಕೋಟಿ ರೂ. ಒದಗಿಸಲಾಗಿದೆ. 95 ಲಕ್ಷ ರೂ. ಮೌಲ್ಯದ ಪೀಠೋಪಕರಣ ಸರಬರಾಜು ಮಾಡಲಾಗಿದೆ ಎಂದು ತಿಳಿಸಿದರು. ಜಿ.ಪಂ. ಯೋಜನಾ ನಿರ್ದೇಶಕ ಸತೀಶ, ಡಿಎಚ್‌ಒ ಡಾ.ಸುರೇಂದ್ರಬಾಬು, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಮಹೇಶ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.