ಕೋಟ: ತೆಕ್ಕಟ್ಟೆ ಗ್ರಾ.ಪಂ.ನ ಕೆದೂರು ವ್ಯಾಪ್ತಿಯಿಂದ ಕೋಟ ಗ್ರಾ.ಪಂ., ಸಾಲಿಗ್ರಾಮ ಪ.ಪಂ. ವ್ಯಾಪ್ತಿಗೊಳಪಡುವ ಸೂಲ್ಪಡು ಮಡಿವಾಳಸಾಲು ಹೊಳೆ ಹೂಳು ಸಮಸ್ಯೆಗೆ ಶೀಘ್ರದಲ್ಲಿ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿ ಈ ವರ್ಷದ ಮಳೆಗಾಲ ಆರಂಭಕ್ಕೂ ಮುನ್ನ ಹೂಳು ತೆರವುಗೊಳಿಸಬೇಕು ಎಂದು ರೈತಧ್ವನಿ ಸಂಘದ ಪ್ರಮುಖರಾದ ಟಿ.ಮಂಜುನಾಥ್ ಗಿಳಿಯಾರ್ ಆಗ್ರಹಿಸಿದರು.
ಮಂಗಳವಾರ ಕೋಟದ ಅಮೃತೇಶ್ವರಿ ದೇಗುಲದಲ್ಲಿ ಕೋಟ ರೈತಧ್ವನಿ ಸಂಘಟನೆ ಸಭೆಯಲ್ಲಿ ಮಾತನಾಡಿದರು. ಹಲವಾರು ವರ್ಷಗಳಿಂದ ತೆಕ್ಕಟ್ಟೆ ಉಳ್ಳೂರು, ಬೇಳೂರು, ಗಿಳಿಯಾರು, ಕಾರ್ತಟ್ಟು, ಚಿತ್ರಪಾಡಿ, ಬನ್ನಾಡಿ, ಉಪ್ಪಾಡಿ, ಸಾಲಿಗ್ರಾಮ ವ್ಯಾಪ್ತಿಯ ರೈತರು ಕೃತಕ ನೆರೆ ಹಾವಳಿಗೆ ತುತ್ತಾಗುತ್ತಿದ್ದಾರೆ. ಈ ವರ್ಷದ ಮಳೆಗಾಲದೊಳಗೆ ಹೊಳೆಯ ಹೂಳೆತ್ತಬೇಕು. ವಿಳಂಬವಾದರೆ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ಹೂಳೆತ್ತುವ ಕಾಮಗಾರಿ ಶೀಘ್ರವೇ ಆರಂಭಿಸಲು ಆಗ್ರಹಿಸಿ ರೈತ ಮುಖಂಡರ ನಿಯೋಗ ಬೆಂಗಳೂರಿಗೆ ತೆರಳಲು ಸಭೆಯಲ್ಲಿ ನಿರ್ಧರಿಸಲಾಯಿತು. ರೈತಧ್ವನಿ ಸಂಘದ ಗೌರವಾಧ್ಯಕ್ಷ ಆನಂದ್ ಸಿ.ಕುಂದರ್ ಮಾತನಾಡಿದರು.
ರೈತಧ್ವನಿ ಸಂಘ ಅಧ್ಯಕ್ಷ ಎಂ.ಜಯರಾಮ ಶೆಟ್ಟಿ, ರೈತಧ್ವನಿ ಸಂಘದ ಪ್ರಮುಖರಾದ ತಿಮ್ಮ ಪೂಜಾರಿ, ವಿಜಯ ಕುಂದರ್, ಬಾಬು ಶೆಟ್ಟಿ, ಹಂಡಿಕೆರೆ ರಾಘವೇಂದ್ರ ಶೆಟ್ಟಿ, ಸುಭಾಷ್ ಶೆಟ್ಟಿ, ನಾಗರಾಜ್ ಗಾಣಿಗ, ಮಹಾಬಲ ಪೂಜಾರಿ, ತಿಮ್ಮ ಕಾಂಚನ್, ದಿನೇಶ್ ಪೂಜಾರಿ, ಶೀಲರಾಜ್ ಕಾಂಚನ್, ಜಗನಾಥ ಕಾಂಚನ್, ಪ್ರಕಾಶ್ಚಂದ್ರ ಶೆಟ್ಟಿ, ರಾಮಣ್ಣ ಶೆಟ್ಟಿ, ಭುಜಂಗ ಗುರಿಕಾರ, ಗೋಪಾಲ ಬಂಗೇರ, ಗಿರೀಶ್ ಗಾಣಿಗ ಬೆಟ್ಲಕ್ಕಿ, ಗುರುರಾಜ್ ಆಚಾರ್, ಚಂದ್ರ ಆಚಾರ್ ಉಪಸ್ಥಿತರಿದ್ದರು.